ತೀವ್ರ ಶಾಖದ ಅಲೆ, ಎಚ್ಚರ ವಹಿಸಿ: ಡೀಸಿ ಡಾ.ಕುಮಾರ ಸೂಚನೆ

KannadaprabhaNewsNetwork | Published : May 4, 2024 12:35 AM

ಸಾರಾಂಶ

ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅತಿಯಾದ ಉಷ್ಣಾಂಶ ಪರಿಸ್ಥಿತಿ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಸಂರಕ್ಷಣಾ ಸಲಹೆ ಪಾಲಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ಪ್ರಮಾಣದಲ್ಲಿ ಆಗಾಗ್ಗೆ ನೀರನ್ನು ಕುಡಿಯಬೇಕು. ಪ್ರಯಾಣದ ವೇಳೆ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ತೀವ್ರ ಶಾಖದ ಅಲೆ, ಅತಿಯಾದ ಉಷ್ಣಾಂಶದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ಮಾತನಾಡಿ, ತಾಪಮಾನ ಏರಿಕೆಯಿಂದ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ಆರೋಗ್ಯ ಹಿತದೃಷ್ಟಿಯಿಂದ ಅತಿಯಾದ ಉಷ್ಣಾಂಶ ಪರಿಸ್ಥಿತಿ ತಡೆಗಟ್ಟುವಿಕೆಯ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯ ಸಂರಕ್ಷಣಾ ಸಲಹೆ ಪಾಲಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಹ ಸಾಕಷ್ಟು ಪ್ರಮಾಣದಲ್ಲಿ ಆಗಾಗ್ಗೆ ನೀರನ್ನು ಕುಡಿಯಬೇಕು. ಪ್ರಯಾಣದ ವೇಳೆ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕು ಎಂದರು.

ಪುನರ್ಜಿಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ಧಪಡಿಸಿದ ಲಿಂಬೆಹಣ್ಣಿನ ಶರಬತ್ತು, ಮಜ್ಜಿಗೆ, ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಸೇವಿಸಬೇಕು. ಈ ಋತುವಿನಲ್ಲಿ ಸಿಗುವ ಹೆಚ್ಚಿನ ನೀರಿನ ಅಂಶವನ್ನು ಹೊಂದಿರುವ ಹಣ್ಣು ತರಕಾರಿಗಳಾದ ಕಲ್ಲಂಗಡಿ, ಕರಬೂಜ, ಮೂಸಂಬಿ, ದ್ರಾಕ್ಷಿ, ಅನಾನಸ್, ಸೌತೆಕಾಯಿ ಹಾಗೂ ಸ್ಥಳೀಯವಾಗಿ ಸಿಗುವ ಹಣ್ಣು ತರಕಾರಿಗಳನ್ನು ಸೇವಿಸಬೇಕು. ಎಳನೀರನ್ನು ಸೇವಿಸಬೇಕು ಎಂದು ಸಲಹೆ ನೀಡಿದರು.

ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ನೀರಿನ ವ್ಯವಸ್ಥೆ ಖಾತ್ರಿ ಪಡಿಸಿಕೊಳ್ಳಬೇಕು. ಬಿಸಿಲಿನ ಶಾಖ ಮಕ್ಕಳಲ್ಲೂ ಸಾಕಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ಮೂರ್ಛೆ ಹೋಗುವುದು, ಸ್ನಾಯು ಸೆಳೆತ, ರೋಗ ಗ್ರಸ್ತವಾಗುವಿಕೆ, ಸಿಡುಕುತನ, ತಲೆ ನೋವು, ಹೆಚ್ಚಾಗಿ ಬೆವರುವುದು, ಬಲಹೀನತೆ, ತಲೆ ತಿರುಗುವಿಕೆ, ಗೊಂದಲಮಯ ರೀತಿಯಲ್ಲಿ ವರ್ತಿಸುವುದು, ಇನ್ನಿತರ ಲಕ್ಷಣಗಳು ಕಂಡುಬರುವ ಸಾಧ್ಯತೆ ಇರುತ್ತದೆ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆದು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದರು.

ಅತೀ ಹೆಚ್ಚು ತಾಪಮಾನಕ್ಕೆ ತುತ್ತಾಗುವಂತಹ ಹಳ್ಳಿಗಳನ್ನು ಗುರುತಿಸಿ ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಲಭ್ಯತೆ ಪರಿಶೀಲಿಸಬೇಕು. ಹೆಚ್ಚಿನ ತಾಪಮಾನದ ಪ್ರತಿಕೂಲ ಪರಿಣಾಮಗಳ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ಮಧ್ಯಾಹ್ನದ ವೇಳೆ ಬಿಸಿಲಿಗೆ ಹೋಗುವುದನ್ನು ತಪ್ಪಿಸಬೇಕು. ಹೋರಾಂಗಣದಲ್ಲಿ ಶ್ರಮದಾಯಕ ಚಟುವಟಿಕೆಗಳನ್ನು ಮಾಡಬಾರದು. ಉತ್ತಮ ಗಾಳಿ ಪ್ರಸಾರವಾಗಿ ತಂಪಾಗಿರುವoತೆ ಕಿಟಕಿ, ಬಾಗಿಲುಗಳನ್ನು ತೆರೆದಿಡಬೇಕು. ಮದ್ಯಪಾನ (ಆಲ್ಕೋಹಾಲ್), ಟೀ, ಕಾಫಿ ಮತ್ತು ಕಾರ್ಭೋನೇಟೆಡ್ ತಂಪು ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳನ್ನು ಸೇವಿಸುವುದನ್ನು ಕಡಿಮೆಯಾಗಬೇಕು ಎಂದರು.

ಪ್ರಾಣಿಗಳಲ್ಲಿ ಬಿಸಿಗಾಳಿಗೆ ಸಂಬಂಧಿತ ಕಾಯಿಲೆಯ ಚಿಕಿತ್ಸೆಗೆ ನಿಯಮಾನುಸಾರ ಸಂಬಂಧಿಸಿದ ಪಶು ವೈದ್ಯಕೀಯ ಔಷಧಗಳನ್ನು ಶೇಖರಣೆ ಮಾಡಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸಭೆ, ಸಮಾರಂಭಗಳನ್ನು ತಂಪಾದ ವಾತಾವರಣವಿರುವ ಅವಧಿಯಲ್ಲಿ (ಬೆಳಗ್ಗೆ ಅಥವಾ ಸಂಜೆ) ನಿಗದಿಪಡಿಸುವುದು ಉತ್ತಮ ಎಂದು ಕಿವಿಮಾತು ಹೇಳಿದರು.

ತೀವ್ರ ಬಿಸಿಲಿನ ಹಿನ್ನೆಲೆ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಅಪಘಾತ ಸಂಭವವಿಸುವ ಸಾಧ್ಯತೆಗಳಿವೆ. ಅವುಗಳ ಬಗ್ಗೆ ಎಚ್ಚರ ವಹಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳ ಸಭೆಗಳನ್ನು ನಿರಂತರವಾಗಿ ನಡೆಸಿ ತೊಂದರೆಗಳನ್ನು ಪರಿಹರಿಸಿ ಎಂದರು.

ಸಭೆಯಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ. ಮೋಹನ್, ಡಿ.ಎಫ್.ಒ ರಾಜು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this article