ಕನ್ನಡಪ್ರಭ ವಾರ್ತೆ ಶಿಕಾರಿಪುರ
ಶಾಸಕ ಬಿ.ವೈ.ವಿಜಯೇಂದ್ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ರಾಜಕೀಯ ಇಲ್ಲದೆ ಕೆಡಿಪಿ ಸಭೆ ನಡೆಯ ಬೇಕು. ತಾಲೂಕಿನ ಜನರಿಗೆ ಸಮರ್ಪಕ ಆಡಳಿತ ತಲುಪಿಸುವುದಕ್ಕೆ ಅದು ಕಾರಣವಾಗಲಿ, ಇಲ್ಲಿ ಚರ್ಚೆಯಾಗುವ ಯಾವುದೇ ಸಮಸ್ಯೆ ಕುರಿತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹಾರಕ್ಕೆ ಗಮನ ನೀಡಬೇಕು ಅದಕ್ಕೆ ಸರಕಾರದ ಅಗತ್ಯ ಅನುಮತಿ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ಕೆಡಿಪಿ ಸದಸ್ಯ ನಾಗರಾಜಗೌಡ ಮಾತನಾಡಿ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಅಂಜನಾಪುರ ಜಲಾಶಯ ದ ಮೇಲೆ ಒತ್ತಡ ಸೃಷ್ಟಿ ಆಗುತ್ತದೆ. ರೈತರ ಬೆಳೆಗೆ ನೀರು, ಇಡೀ ತಾಲೂಕಿಗೆ ಕುಡಿಯುವ ನೀರು ಒದಗಿಸುವಾಗ ಬರಗಾಲದಲ್ಲಿ ರೈತರಿಗೆ ತೊಂದರೆ ಆಗುತ್ತದೆ, ಅದಕ್ಕಾಗಿ ಯೋಜನೆ ಕುರಿತು ಚಿಂತನೆ ನಡೆಸಬೇಕು ಎಂದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜಲಾಶಯ ಹೂಳೆತ್ತುವ ಕಾರ್ಯಕ್ಕೆ ಚಿಂತನೆ, ತುಂಗಾ ನದಿಯಿಂದ ಹೆಚ್ಚು ನೀರು ತರುವುದು ಸೇರಿ ಅಗತ್ಯ ಕ್ರಮ ಕೈಗೊಂಡು ಯಾರಿಗೂ ತೊಂದರೆಯಾಗದಂತೆ ಯೋಜನೆ ಮುನ್ನಡೆಸೋಣ ಎಂದರು.
ಪುರಸಭೆ ಆಡಳಿತ ಕುರಿತು ಜನತೆ ಬೇಸತ್ತಿದ್ದಾರೆ. ಇ-ಸ್ವತ್ತು ಸೇರಿ ಅಗತ್ಯ ಕೆಲಸಗಳು ಲಂಚ ಇಲ್ಲದೆ ಆಗುತ್ತಿಲ್ಲ ಎಂದು ನಾಗರಾಜಗೌಡ ಸಭೆ ಗಮನ ಸೆಳೆದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೆ ಮುಂದೆ ಅಂತಹ ಆರೋಪ ಬಾರದಂತೆ ಎಚ್ಚರಿಕೆ ವಹಿಸುವಂತೆ ಎಚ್ಚರಿಸಿದರು.
ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಎಲ್ಲ ಇಲಾಖೆ ಹಿರಿಯ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಕೆಡಿಪಿ ಸದಸ್ಯರು ಇದ್ದರು.
ತಾಲೂಕಿನಲ್ಲಿ ಮಳೆಯಿಂದಾಗಿ ಆಗಿರುವ ಹಾನಿ, ಮನೆ ಕಳೆದುಕೊಂಡ ಕುಟುಂಬಗಳ ಕುರಿತು ಚರ್ಚಿಸಿ ಶೀಘ್ರ ಪರಿಹಾರಕ್ಕೆ ಡಿಪಿ ಸಭೆಯಲ್ಲಿ ಸಂಸದ ರಾಘವೇಂದ್ರ ಸೂಚಿಸಿದರಲ್ಲದೆ, ಕೆರೆ-ಕಟ್ಟೆಗಳು, ಲೋಕೋಪಯೋಗಿ ವ್ಯಾಪ್ತಿಯ ಕಟ್ಟಡಗಳ ಪರಿಸ್ಥಿತಿ ಕುರಿತು ಮಾಹಿತಿ ಪಡೆದು ಸಮಸ್ಯೆಗೆ ಪರಿಹಾರ ಸೂಚಿಸಲಾಯಿತು. ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆಯನ್ನೂ ನೀಡಲಾಯಿತು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಇದೇ ವೇಳೆ ಸೂಚನೆ ನೀಡಲಾಯಿತು.