ಭಟ್ಕಳ: ರಾಜ್ಯದ ಪುರಸಭೆ ವ್ಯಾಪ್ತಿಯಲ್ಲಿ ಶೇ. 50ಕ್ಕಿಂತಲೂ ಹೆಚ್ಚು ಕಟ್ಟಡಗಳನ್ನು ಲೇಔಟ್, ಪರವಾನಗಿ ರಹಿತವಾಗಿ ನಿರ್ಮಿಸಲಾಗಿದ್ದು, ತೆರಿಗೆ ಸಂಗ್ರಹಣಾ ಉದ್ದೇಶದಿಂದ ಈ ಕಟ್ಟಡಗಳಿಗೆ ಎ ಮತ್ತು ಬಿ ಖಾತೆ ಮಾಡಿಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯದ ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.
ಭಟ್ಕಳ ಪಟ್ಟಣದಲ್ಲಿ ನಗರೋತ್ಥಾನ ಕಾಮಗಾರಿ ಮಂದಗತಿಯಿಂದ ಸಾಗುತ್ತಿರುವುದು ಹಾಗೂ ₹200 ಕೋಟಿ ಒಳಚರಂಡಿಯ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಶೀಘ್ರ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ತಪ್ಪಿಸ್ಥತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪುರಸಭೆ ಹಾಗೂ ಜಾಲಿ ಪಪಂಗೆ ಅಗತ್ಯ ಸಿಬ್ಬಂದಿ ಒದಗಿಸುವ ಜತೆಗೆ ಹೆಚ್ಚಿನ ಅನುದಾನವನ್ನು ನೀಡುವ ಭರವಸೆ ನೀಡಿದರು. ಪಟ್ಟಣದಲ್ಲಿ ಕಳೆದ ಹಲವು ವರ್ಷಗಳಿಂದ ಅರ್ಧಂಬರ್ಧ ಸ್ಥಿತಿಯಲ್ಲಿರುವ ಪುರಭವನ ಕಟ್ಟಡ ಕಾಮಗಾರಿಗೆ ಸರ್ಕಾರದಿಂದ ಹಣ ಮಂಜೂರು ಮಾಡಿ, ಶೀಘ್ರ ಕಾಮಗಾರಿ ಮುಗಿಸಿಕೊಡುವುದಾಗಿಯೂ ಹೇಳಿದರು. ಸಚಿವರ ಡಿನ್ನರ್ ಪಾರ್ಟಿ ಬಗ್ಗೆ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸದೇ ಮೌನವಾಗಿಯೇ ತೆರಳಿದರು.
ಈ ಸಂದರ್ಭದಲ್ಲಿ ತಂಝೀಂ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯೂನಿಸ್ ಖಾಜಿಯಾ, ಪುರಸಭಾ ಸದಸ್ಯ ಇಂಶಾದ್ ಮುಂತಾದವರಿದ್ದರು.