ಹೊಸ ರೂಪದ ಹಳೇ ಬಸ್‌ ನಿಲ್ದಾಣ ಇಂದು ಲೋಕಾರ್ಪಣೆ

KannadaprabhaNewsNetwork |  
Published : Jan 12, 2025, 01:15 AM IST
ಮಹದ | Kannada Prabha

ಸಾರಾಂಶ

ಹಳೇ ಬಸ್‌ ನಿಲ್ದಾಣ ನವೀನ ರೂಪದೊಂದಿಗೆ ಇಂದಿನಿಂದ ತೆರೆದುಕೊಳ್ಳುತ್ತಿದೆ. ನಗರ, ಉಪನಗರ ಹಾಗೂ ಬಿಆರ್‌ಟಿಎಸ್‌ ಬಸ್‌ ನಿಲ್ದಾಣವಾಗಿ ಸಾರ್ವಜನಿಕರಿಗೆ ಮುಕ್ತವಾಗಲಿದೆ. 3.7 ಎಕರೆ ಜಾಗದಲ್ಲಿ ₹ 42 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಕಟ್ಟಡ ನಿರ್ಮಿಸಲಾಗಿದೆ.

ಹುಬ್ಬಳ್ಳಿ:

ಇಲ್ಲಿನ ಹಳೇ ಬಸ್‌ ನಿಲ್ದಾಣ ನವೀನ ರೂಪದೊಂದಿಗೆ ಇಂದಿನಿಂದ (ಜ.12) ತೆರೆದುಕೊಳ್ಳುತ್ತಿದೆ. ನಗರ, ಉಪನಗರ ಹಾಗೂ ಬಿಆರ್‌ಟಿಎಸ್‌ ಬಸ್‌ ನಿಲ್ದಾಣವಾಗಿ ಸಾರ್ವಜನಿಕರಿಗೆ ಮುಕ್ತವಾಗಲಿದೆ.

3.7 ಎಕರೆ ಜಾಗದಲ್ಲಿ ₹ 42 ಕೋಟಿ ವೆಚ್ಚದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಈ ಕಟ್ಟಡ ನಿರ್ಮಿಸಲಾಗಿದೆ. 2022ರಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ಬೇಸ್ಮೆಂಟ್‌, ಗ್ರೌಂಡ್‌ ಹಾಗೂ 1ನೇ ಮಹಡಿ ಹೀಗೆ ಮೂರು ಮಹಡಿಗಳ ಬೃಹತ್‌ ಕಟ್ಟಡ ಇದಾಗಿದೆ.

ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಇದ್ದ ಜಾಗವನ್ನು ಸದ್ಬಳಕೆ ಮಾಡಿಕೊಂಡು ಟ್ರಾಫಿಕ್ ಕಿರಿಕಿರಿಯಾಗದಂತೆ ಚೆನ್ನಮ್ಮ ವೃತ್ತದಲ್ಲಿ ನಿರ್ಮಿಸುತ್ತಿರುವ ಫ್ಲೈಓವರ್‌ಗೆ ಯಾವುದೇ ಅಡೆತಡೆಯಾಗದಂತೆ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಬಸ್ ನಿಲ್ದಾಣದಲ್ಲಿ ಲಿಫ್ಟ್​, ಎಕ್ಸಿಲೇಟರ್ ಇದೆ‌. 20 ಸಾವಿರ ಚದರಡಿ ವಾಣಿಜ್ಯ ಬಳಕೆಗೆ ಜಾಗ ಮೀಸಲಿದೆ‌. ಬೇಸ್ಮೆಂಟ್‌ನಲ್ಲಿ 200-300 ವಾಹನ ಪಾರ್ಕ್‌ ಮಾಡಬಹುದಾಗಿದೆ. ಬಿಆರ್​ಟಿಎಸ್​ ಬಸ್ ನಿಲ್ದಾಣ, ಸಬ್ ಅರ್ಬನ್ ಬಸ್ ನಿಲ್ದಾಣ ಪ್ರತ್ಯೇಕವಾಗಿದೆ. ಅದರ ಜತೆಗೆ ಸಿಟಿ ಬಸ್ ನಿಲ್ದಾಣವಿದೆ. ಮೂರು ಮಹಡಿಯಲ್ಲೂ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ.

ಬಸ್‌ ನಿಲ್ದಾಣದಲ್ಲಿ ಆಸ್ಪತ್ರೆ:

ಹಳೇ ಬಸ್‌ ನಿಲ್ದಾಣದಲ್ಲಿ ಸಣ್ಣ ಆಸ್ಪತ್ರೆಯನ್ನೂ ನಿರ್ಮಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ವೈದ್ಯ ಸಿಬ್ಬಂದಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಬಸ್‌ ನಿಲ್ದಾಣದಲ್ಲಿ ಆಸ್ಪತ್ರೆ ಕೊಠಡಿ ಮಾಡಿರುವುದು ಇದೇ ಮೊದಲು. ಈಗಾಗಲೇ ಪ್ರಾಯೋಗಿಕವಾಗಿ ವಾಯವ್ಯ ಸಾರಿಗೆ ಸಂಸ್ಥೆಯು ಬಸ್​ಗಳನ್ನು ಓಡಿಸಿ ನೋಡಿದೆ. ಬಿಆರ್​ಟಿಎಸ್ ಬಸ್‌ಗಳನ್ನು ಟ್ರಯಲ್ ರನ್ ಮಾಡಲಾಗಿದೆ.

ಯಾವ್ಯಾವ ಬಸ್‌:

ನಗರದ ವಿವಿಧ ಭಾಗಗಳಿಗೆ ತೆರಳುವ ನಗರ ಸಾರಿಗೆ ಹಾಗೂ ನಗರದ ಹೊರವಲಯದಲ್ಲಿರುವ ಹಳ್ಳಿಗಳಿಗೆ (ಉಪನಗರ) ಇದೀಗ ಹೊಸೂರ ಬಸ್‌ ನಿಲ್ದಾಣದಿಂದ ಬಸ್‌ಗಳು ಸಂಚರಿಸುತ್ತವೆ. ಕುಸುಗಲ್‌, ಬ್ಯಾಹಟ್ಟಿ, ಛಬ್ಬಿ ಸೇರಿದಂತೆ ಮತ್ತಿತರರ ಉಪನಗರದ ಬಸ್‌ಗಳನ್ನೆಲ್ಲ ಇನ್ಮುಂದೆ ಇಲ್ಲಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇನ್ನು ಬಿಆರ್‌ಟಿಎಸ್‌ ಬಸ್‌ಗಳು ಇಲ್ಲಿಂದ ಸಂಚರಿಸಲಿವೆ. ಸರಿಸುಮಾರು 1800 ಟ್ರಿಪ್‌ಗಳು ಇಲ್ಲಿಂದ ಕಾರ್ಯಸೂಚಿ ಮಾಡಲಾಗುತ್ತಿದೆ ಎಂದು ನಗರ ಸಾರಿಗೆ ವಿಭಾಗ ತಿಳಿಸುತ್ತದೆ.

ಬರೀ ಡ್ರಾಪಿಂಗ್‌:

ಇನ್ನು ಮೊದಲೆಲ್ಲ ಹುಬ್ಬಳ್ಳಿಯಿಂದ ತೆರಳುವ ಪರಸ್ಥಳದ ಬಸ್‌ಗಳನ್ನೆಲ್ಲ ಹಳೆ ಬಸ್‌ ನಿಲ್ದಾಣದಿಂದಲೇ ಸಂಚರಿಸುತ್ತಿದ್ದವು. ಬಳಿಕ ಹೊಸೂರು ಹಾಗೂ ಗೋಕುಲ ರಸ್ತೆ ಬಸ್‌ ನಿಲ್ದಾಣದಿಂದ ಸಂಚರಿಸಲು ಆರಂಭಿಸಿದವು. ಇದೀಗ ಹಳೇ ಬಸ್‌ ನಿಲ್ದಾಣ ನವೀಕರಣಗೊಂಡರೂ ಯಥಾಸ್ಥಿತಿಯಲ್ಲಿಯೇ ಬಸ್‌ ಸಂಚರಿಸಲಿವೆ. ಆದರೆ, ಪರಸ್ಥಳದಿಂದ ಚೆನ್ನಮ್ಮ ಸರ್ಕಲ್‌ಗೆ ಬರುವ ಬಸ್‌ಗಳು ಪ್ರಯಾಣಿಕರನ್ನು ಇಳಿಸಿ ಗೋಕುಲ ರಸ್ತೆ ಅಥವಾ ಹೊಸೂರು ಬಸ್‌ ನಿಲ್ದಾಣಕ್ಕೆ ತೆರಳುತ್ತವೆ. ಇದು ಬರೀ ಡ್ರಾಪಿಂಗ್‌ ಪಾಯಿಂಟ್‌ ಆಗಲಿದೆ. ಪಿಕ್‌ ಅಪ್‌ ಪಾಯಿಂಟ್‌ ಮಾತ್ರ ಸದ್ಯ ಎಲ್ಲಿಂದ ನಡೆಯುತ್ತಿದೆಯೋ ಅಲ್ಲಿಂದಲೇ ಮುಂದುವರಿಯಲಿದೆ ಎಂದು ನಗರ ಸಾರಿಗೆ ವಿಭಾಗ ಸ್ಪಷ್ಟಪಡಿಸಿದೆ. ಆದರೆ, ಜನತೆ ಮಾತ್ರ ಪಿಕ್‌ ಅಪ್‌ ಆ್ಯಂಡ್ ಡ್ರಾಪಿಂಗ್‌ ಪಾಯಿಂಟ್‌ ಹಳೇ ಬಸ್‌ ನಿಲ್ದಾಣದಿಂದ ಆದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ 2024ರಲ್ಲೇ ಉದ್ಘಾಟನೆಗೊಳ್ಳಬೇಕಿದ್ದ ಹಳೇ ಬಸ್‌ ನಿಲ್ದಾಣ 2025ರ ಆರಂಭದಲ್ಲೇ ಲೋಕಾರ್ಪಣೆಯಾಗುತ್ತಿದೆ. ಇದು ಜನರಲ್ಲಿ ಸಂತಸವನ್ನುಂಟು ಮಾಡಿದೆ.ಹಳೇ ಬಸ್‌ ನಿಲ್ದಾಣ ಹೊಸ ರೂಪದೊಂದಿಗೆ ನಿರ್ಮಿಸಲಾಗಿದೆ. ಸಿಟಿ, ಉಪನಗರ ಹಾಗೂ ಬಿಆರ್‌ಟಿಎಸ್‌ ಬಸ್‌ಗಳು ಇಲ್ಲಿಂದ ಸಂಚರಿಸಲಿವೆ. ಪರಸ್ಥಳದ ಬಸ್‌ಗಳಿಗೆ ಇಲ್ಲಿಗೆ ಡ್ರಾಪಿಂಗ್‌ ಪಾಯಿಂಟ್‌ ಮಾತ್ರ ಇದೆ. ಅದು ಕೂಡ ಚೆನ್ನಮ್ಮ ಸರ್ಕಲ್‌ ಮೇಲಿಂದ ಗೋಕುಲ ರಸ್ತೆ ನಿಲ್ದಾಣಕ್ಕೆ ತೆರಳುವ ಬಸ್‌ಗಳಿಗೆ ಮಾತ್ರ. ಪಿಕ್‌ ಅಪ್‌ ಪಾಯಿಂಟ್‌ ಸದ್ಯ ಯಾವ ನಿಲ್ದಾಣದಿಂದ ನಡೆಯುತ್ತಿದೆ. ಅಲ್ಲಿಂದಲೇ ಮುಂದುವರಿಯಲಿದೆ ಎಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ
ನೆಚ್ಚಿನ ಗುರುಗೆ ಶಿಷ್ಯರಿಂದ ‘ರಕ್ತ’ ತುಲಾಭಾರ!