ಕನ್ನಡಪ್ರಭ ವಾರ್ತೆ ಅರಸೀಕೆರೆ
ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯೋಜನೆಗಳನ್ನು ರಾಜಕೀಯ ದ್ವೇಷದಿಂದ ತಡೆಯಲು ಯತ್ನಿಸುವವರಿಗೆ ಜನತೆಯೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು. ನಗರದ ಹೃದಯಭಾಗದಲ್ಲಿ 30 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಿರಾಧಾರ ಆರೋಪಗಳು ಹಾಗೂ ಟೀಕೆ ಟಿಪ್ಪಣಿಗಳ ಮೂಲಕ ನನ್ನನ್ನು ಅಥವಾ ಕ್ಷೇತ್ರದ ಅಭಿವೃದ್ಧಿಯನ್ನು ತಡೆಯಬಹುದು ಎಂಬ ಭ್ರಮೆಯಲ್ಲಿ ಯಾರೂ ಇರಬಾರದು ಎಂದು ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಿದರು.ಕ್ಷೇತ್ರದ ಜನತೆ ನನ್ನೊಂದಿಗೆ ಇರುವ ತನಕ ಅಭಿವೃದ್ಧಿ ಚಕ್ರವನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಜನರ ಆಶೀರ್ವಾದವೇ ನನ್ನ ಶಕ್ತಿ ಎಂದು ತಿಳಿಸಿದ ಅವರು, ಸ್ವಾತಂತ್ರ್ಯ ನಂತರವೂ ದಶಕಗಳ ಕಾಲ ಅರಸೀಕೆರೆ ಕ್ಷೇತ್ರ ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದುದನ್ನು ನೆನಪಿಸಿದರು. ನದಿ ಮೂಲದಿಂದ ನೀರು ಒದಗಿಸುವುದು ಅಸಾಧ್ಯ ಎಂದು ಹೇಳಿದವರೇ ಹೆಚ್ಚಾಗಿದ್ದ ಕಾಲದಲ್ಲಿ, ಜನರ ಬೆಂಬಲದೊಂದಿಗೆ ನಡೆಸಿದ ಹೋರಾಟದ ಫಲವಾಗಿ ಇಂದು ನಗರ ಮಾತ್ರವಲ್ಲದೆ ಗ್ರಾಮೀಣ ಭಾಗದ ಜನರೂ ನದಿ ಮೂಲದ ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿದ್ದಾರೆ. ಇದು ನನ್ನ ಶಾಸಕತ್ವದ ಮಹತ್ವದ ಸಾಧನೆ ಎಂದು ಹೇಳಿದರು.
ನಾನು ಶಾಸಕನಾದ ನಂತರ ಕ್ಷೇತ್ರದ ಅಭಿವೃದ್ಧಿಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಶಾಶ್ವತ ಹಾಗೂ ಜನಪರ ಯೋಜನೆಗಳ ಜಾರಿಗೆ ಅರಸೀಕೆರೆ ಮಾದರಿ ನಗರವಾಗಿ ರೂಪುಗೊಳ್ಳುತ್ತಿದೆ. ಶಿಕ್ಷಣ, ಆರೋಗ್ಯ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಆಗಿರುವ ಪ್ರಗತಿ ನನ್ನ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಟೀಕಿಸುವವರು ಈ ವಾಸ್ತವಗಳನ್ನು ಅರ್ಥಮಾಡಿಕೊಂಡು ಮಾತನಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಶಶಿಧರ್‌್, ಬಾಣಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಶೇಖರ್, ನಗರಸಭೆಯ ನಿಕಟಪೂರ್ವ ಸದಸ್ಯರಾದ ವೆಂಕಟಮುನಿ ಹಾಗೂ ದರ್ಶನ್, ಕಾಂಗ್ರೆಸ್ ಮುಖಂಡರಾದ ಸುಬ್ರಹ್ಮಣ್ಯ ಬಾಬು, ಕೃಷ್ಣ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ಬಾಯಿ, ಚಂದ್ರ ನಾಯ್ಕ್, ದೀಪಂ ಮಾಜಿ ಸದಸ್ಯೆ ಸುಲೋಚನಾಭಾಯಿ, ಗುತ್ತಿಗೆದಾರ ಶಂಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.