ಧರ್ಮಸ್ಥಳ ವಿರುದ್ಧ ಷಡ್ಯಂತ್ರ : ಬಿಜೆಪಿಗರ ಕಿಡಿ

KannadaprabhaNewsNetwork |  
Published : Aug 10, 2025, 01:30 AM ISTUpdated : Aug 10, 2025, 11:29 AM IST
Dharmasthala

ಸಾರಾಂಶ

 ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ, ತನಿಖೆಯನ್ನು ಸುಖಾ ಸುಮ್ಮನೆ ಎಳೆಯುತ್ತಿದೆ. ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಿಡಿಗೇಡಿಗಳು ಕ್ಷೇತ್ರದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ  ಎಂದು ಬಿಜೆಪಿ ನಾಯಕರು ಆಕ್ರೋಶ 

 ಬೆಂಗಳೂರು :  ಧರ್ಮಸ್ಥಳ ಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅನಾಮಧೇಯ ವ್ಯಕ್ತಿಯ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎಸ್‌ಐಟಿ, ತನಿಖೆಯನ್ನು ಸುಖಾ ಸುಮ್ಮನೆ ಎಳೆಯುತ್ತಿದೆ. ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಿಡಿಗೇಡಿಗಳು ಕ್ಷೇತ್ರದ ವಿರುದ್ಧ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರಿನಲ್ಲಿ ಶನಿವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಸತ್‌ ಸಂಪ್ರದಾಯ ಇರುವ ಸ್ಥಳ ಧರ್ಮಸ್ಥಳ. ಸಾವಿರಾರು ವರ್ಷಗಳ ಇತಿಹಾಸವಿರುವ ಧರ್ಮಸ್ಥಳದಲ್ಲಿ ಆಚಾರ-ವಿಚಾರಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಆದರೆ, ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹಾಗೂ ಕಿಡಿಗೇಡಿಗಳು ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಎಸ್‌ಐಟಿ ಮಾಡಿದ್ದೀರಿ. ಎಷ್ಟು ವರ್ಷ ಇರಿಸಿಕೊಳ್ಳುವಿರಿ?. ಮೆಕ್ಕಾ ಮದೀನಾದಲ್ಲಿ ಈ ರೀತಿ ನಡೆದುಕೊಂಡಿದ್ದರೆ ಸುಮ್ಮನಿರ್ತಿದ್ರಾ? ಎಂದು ಕಿಡಿ ಕಾರಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಜಗದೀಶ ಶೆಟ್ಟರ್, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದಲೇ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹಿಂದೂ ಧರ್ಮ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಎಡಪಂಥಿಯರು, ಕಮ್ಯುನಿಸ್ಟರು ಧರ್ಮಸ್ಥಳದ ಬಗ್ಗೆ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ದೂರಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ, ಈ ವಿಚಾರ ಹಿಡಿದುಕೊಂಡು ಧರ್ಮಸ್ಥಳ, ಹೆಗ್ಗಡೆಯವರ ಹೆಸರನ್ನು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಅನಾಮಿಕ ವ್ಯಕ್ತಿ ಹಿಂದೆ ಯಾವ ಧರ್ಮದ್ರೋಹಿ, ದೇಶದ್ರೋಹಿ ಗುಂಪಿದೆ ಎಂಬುದನ್ನು ಪತ್ತೆ ಹಚ್ಚಬೇಕು. ಆತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವುದು, ತನಿಖಾ ಫಲಿತಾಂಶ ಬರುವುದಕ್ಕೂ ಮೊದಲು ಅಪರಾಧ ಆಗಿದೆ ಎಂದು ಬಿಂಬಿಸುವುದು ಖಂಡನೀಯ ಎಂದರು. 

ಧರ್ಮಸ್ಥಳ ಗ್ರಾಮ ಪ್ರಕರಣದಲ್ಲಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದಕ್ಕೆ ತಕರಾರು ಇಲ್ಲ. ನಾವು ಕಾನೂನಿಗೆ ತಲೆಬಾಗುತ್ತೇವೆ. ಆದರೆ, ಯಾರೋ ಬಂದು ಏನೋ ಹೇಳಿದ ಅಂತ ಹೀಗೆ ತನಿಖೆ ಎಳೆಯುವುದು ಸರಿಯಲ್ಲ ಎಂದು ಸಿದ್ದರಾಮಯ್ಯಗೆ ಮನವಿ ಮಾಡುತ್ತೇನೆ ಎಂದರು. ಲಕ್ಷಾಂತರ ಜನ ಬಂದು ಹೋಗುವ ಪವಿತ್ರ ಸ್ಥಳ ಧರ್ಮಸ್ಥಳ. ದೇಶದಲ್ಲಿ ಎಂತೆಂಥವರೋ ಏನೇನೋ ಮಾಡಿ ಇತಿಹಾಸ ಅಳಿಸಲು ಸಾಧ್ಯವಾಗಲಿಲ್ಲ. ಇತಿಹಾಸ ಬಲ್ಲ ನೀವು ಪವಿತ್ರ ಸ್ಥಳದ ಪಾವಿತ್ರ್ಯ ಕಾಪಾಡಬೇಕು. ಒಂದು ವೇಳೆ ತಪ್ಪಾಗಿದ್ದರೆ ಕಾನೂನು ರೀತಿ ಏನು ಮಾಡಿದರೂ ಬೇಡ ಎನ್ನುವುದಿಲ್ಲ. ಆದರೆ, ಪ್ರಕರಣವನ್ನು ತುಂಬಾ ದಿನ ಎಳೆಯುವುದು ಬೇಡ. ಆದಷ್ಟು ಬೇಗ ಇದಕ್ಕೆ ಅಂಕಿತ ಹಾಕಿ ಎಂದು ಸರ್ಕಾರವನ್ನು ಆಗ್ರಹಿಸಿದರು.

PREV
Read more Articles on

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ