ಕನ್ನಡಪ್ರಭ ವಾರ್ತೆ ವಿಧಾನಸಭೆ
ಅಲ್ಲದೆ, ಇಡೀ ಪ್ರಕರಣದಲ್ಲಿ ಸರ್ಕಾರದ ನಿಲುವು ತಿಳಿಸಬೇಕು ಮತ್ತು ಈವರೆಗಿನ ಎಸ್‌ಐಟಿ ತನಿಖೆಯ ಮಧ್ಯಂತರ ವರದಿಯನ್ನು ಸದನದ ಮುಂದೆ ಮಂಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ಅಪರಿಚಿತ ಶವಗಳ ಹುಡುಕಾಟದ ತನಿಖೆಯಲ್ಲಿನ ಲೋಪಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಶಾಸಕರು, ಯಾರೋ ಅನಾಮಧೇಯ ಹೇಳಿದ ಎಂಬ ಕಾರಣಕ್ಕೆ ಪುಣ್ಯ ಕ್ಷೇತ್ರದಲ್ಲಿ ಎಲ್ಲೆಂದರಲ್ಲಿ ಗುಂಡಿ ಅಗೆಯುತ್ತಿರುವುದರ ಹಿಂದಿನ ಉದ್ದೇಶ ಸ್ಪಷ್ಟಪಡಿಸುವಂತೆ ಒತ್ತಾಯಿಸಿದರು. ಇದು ಹೊರಗಿನ ದುರುಳರ ಜತೆಗೆ ಕಾಂಗ್ರೆಸ್ ಪಕ್ಷದ ಅಜೆಂಡಾ ರೀತಿಯಲ್ಲಿ ಭಾಸವಾಗುತ್ತಿದೆ ಎಂದು ಆರೋಪಿಸಿದರು.ಎಲ್ಲೆಂದರಲ್ಲಿ ಗುಂಡಿ ಸರಿಯಲ್ಲ:
ಮೊದಲಿಗೆ ಮಾತನಾಡಿದ ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್, ಧರ್ಮಸ್ಥಳದ ಆಡಳಿತ ಮಂಡಳಿ ವಿರುದ್ಧ ಎದುರಾಗುತ್ತಿರುವ ಆರೋಪಗಳ ಸತ್ಯಾಸತ್ಯತೆ ತಿಳಿಯಲು ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಅದನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಹಾಗೆಂದ ಮಾತ್ರಕ್ಕೆ ಧರ್ಮಸ್ಥಳ ಗ್ರಾಮದಲ್ಲಿ ಎಲ್ಲೆಂದರಲ್ಲಿ ಗುಂಡಿ ಅಗೆಯುವುದು ಸರಿಯಲ್ಲ ಎಂದರು.ಪೂರ್ವನಿಯೋಜಿತ ಷಡ್ಯಂತ್ರ: ಅಶೋಕ್
ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಧರ್ಮಸ್ಥಳ ಗ್ರಾಮದಲ್ಲಿ ಶವ ಹುಡುಕಾಟ ಪೂರ್ವನಿಯೋಜಿತ ಷಡ್ಯಂತ್ರದ ರೀತಿ ನಡೆಯುತ್ತಿದೆ. ಅನಾಮಿಕನೊಬ್ಬ ದೂರು ನೀಡಿದ ಎಂಬ ಕಾರಣಕ್ಕಾಗಿ ಎಸ್‌ಐಟಿ ರಚಿಸಿರುವುದು ಸರಿಯಲ್ಲ. ಮೊದಲು ಆತನ ಹಿನ್ನೆಲೆ ಪತ್ತೆ ಮಾಡಿ ಮುಂದುವರಿಯಬೇಕಿತ್ತು. ಅಲ್ಲದೆ, ಆತ ಬೆಳಗ್ಗೆಯೆಲ್ಲ ಎಸ್‌ಐಟಿ ಜತೆಗಿದ್ದು, ಸಂಜೆಯಾಗುತ್ತಿದ್ದಂತೆ ಹೊರಟು ಹೋಗುತ್ತಾನೆ. ಅನಾಮಿಕನ ಹಿಂದಿರುವ ಗ್ಯಾಂಗ್ ಯಾವುದು, ಮುಖ್ಯಮಂತ್ರಿ ಅವರ ಕಚೇರಿಯಲ್ಲಿ ಅದಕ್ಕೆ ಪ್ರೇರಣೆ ಯಾರು ನೀಡುತ್ತಿದ್ದಾರೆ ಎಂಬುದನ್ನು ಮೊದಲು ಪತ್ತೆ ಮಾಡಿ. ಷಡ್ಯಂತ್ರ ಮಾಡಿದವರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಶಾಸಕರಾದ ಬಿ.ವೈ.ವಿಜಯೇಂದ್ರ, ಎಸ್.ಸುರೇಶ್‌ಕುಮಾರ್, ಆರಗ ಜ್ಞಾನೇಂದ್ರ, ಹರೀಶ್ ಪೂಂಜಾ, ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಮತ್ತಿತರ ಮಾತನಾಡಿ, ಮಧ್ಯಂತರ ವರದಿಗೆ ಆಗ್ರಹಿಸಿದರು.
ಅನುಮತಿ ನೀಡಿದರೆ ವಕೀಲನಬಾಯಿ ಮುಚ್ಚಿಸುತ್ತೇನೆ: ಶಾಸಕ
ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಧರ್ಮಸ್ಥಳ ಪರ ಮಾತನಾಡಿದವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗುತ್ತಿದೆ. ಅದರಲ್ಲೂ ವಕೀಲ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ ನಮ್ಮೆಲ್ಲರ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿದ್ದಾನೆ. ಸರ್ಕಾರ ಅನುಮತಿ ನೀಡಿದರೆ ಧರ್ಮಸ್ಥಳದ ವಿರುದ್ಧ ಮಾತನಾಡುತ್ತಿರುವ ಆತನ ಬಾಯಿ ಮುಚ್ಚಿಸುತ್ತೇನೆ. ನಮ್ಮ ಹುಡುಗರಿಗೆ ಹೇಳಿದರೆ ಅವರು ಸರಿ ಮಾಡುತ್ತಾರೆ ಎಂದರು.ಅಯೋಧ್ಯಾ ಘಟನೆ ಮರುಕಳಿಸಲಿದೆ-ಯತ್ನಾಳ್:
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಧರ್ಮಸ್ಥಳ ಬಗ್ಗೆ ಇಷ್ಟೆಲ್ಲ ಆದರೂ ಹಿಂದುಗಳು ಸುಮ್ಮನಿದ್ದಾರೆ. ಅದನ್ನು ದೌರ್ಬಲ್ಯ ಎಂದು ಭಾವಿಸುವ ತಪ್ಪು ಮಾಡಬಾರದು. ಇದೇ ರೀತಿ ಆದರೆ ಅಯೋಧ್ಯೆಯಲ್ಲಿನ ಘಟನೆ ಇಲ್ಲಿ ಮರುಕಳಿಸಲಿದೆ ಎಂದು ಎಚ್ಚರಿಕೆ ನೀಡಿದರು.ರಾಜಕಾರಣ ಬೆರೆಸಬೇಡಿ: ಡಿಕೆಶಿ
ಬಿಜೆಪಿ ಶಾಸಕರು ಧರ್ಮಸ್ಥಳ ಪ್ರಕರಣವನ್ನು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಸಂಬಂಧ ಕಲ್ಪಿಸುವಂತೆ ಮಾತನಾಡಿದ್ದನ್ನು ಆಕ್ಷೇಪಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ಶಾಸಕರಿಗಿಂತ ಹೆಚ್ಚು ನಂಬಿಕೆ ನನಗಿದೆ. ಈ ವಿಚಾರಕ್ಕೆ ರಾಜಕಾರಣ ಬೆರೆಸುವುದನ್ನು ಬಿಡಿ. ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರ ಚರ್ಚೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.