ಧರ್ಮಸ್ಥಳದ ವಿರುದ್ಧ ಷಡ್ಯಂತ್ರ: ವಕೀಲರಿಂದ ಪ್ರತಿಭಟನೆ

KannadaprabhaNewsNetwork |  
Published : Aug 19, 2025, 01:00 AM IST
೧೮ಕೆಎಂಎನ್‌ಡಿ-೪ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಮಂಡ್ಯ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಧರ್ಮಸ್ಥಳ ಶ್ರೀಮಂಜುನಾಥ ದೇವಾಲಯವು ಸತ್ಯ-ಧರ್ಮಕ್ಕೆ ಹೆಸರುವಾಸಿಯಾಗಿದ್ದು, ವಿಶ್ವದಾದ್ಯಂತ ತನ್ನದೇ ಆದ ಕೋಟ್ಯಂತರ ಭಕ್ತರನ್ನು ಹೊಂದಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದ್ದು, ಅಲ್ಲಿ ನಡೆಯುತ್ತಿರುವ ಸೇವೆಗಳು ಅವಿಸ್ಮರಣೀಯವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರ ಮತ್ತು ಸುಳ್ಳು ವದಂತಿ ಖಂಡಿಸಿ ವಕೀಲರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ವಕೀಲರ ಸಂಘದ ಆವರಣದಲ್ಲಿ ಸೇರಿದ ವಕೀಲರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಧರ್ಮಸ್ಥಳ ಶ್ರೀಮಂಜುನಾಥ ದೇವಾಲಯವು ಸತ್ಯ-ಧರ್ಮಕ್ಕೆ ಹೆಸರುವಾಸಿಯಾಗಿದ್ದು, ವಿಶ್ವದಾದ್ಯಂತ ತನ್ನದೇ ಆದ ಕೋಟ್ಯಂತರ ಭಕ್ತರನ್ನು ಹೊಂದಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದ್ದು, ಅಲ್ಲಿ ನಡೆಯುತ್ತಿರುವ ಸೇವೆಗಳು ಅವಿಸ್ಮರಣೀಯವಾಗಿದೆ. ಮಾನವೀಯತೆಯ ತಾಣವಾಗಿರುವ ಧರ್ಮಸ್ಥಳ ಕ್ಷೇತ್ರವು ಯಾವುದೇ ಧರ್ಮ, ಜಾತಿ, ಭೇದವಿಲ್ಲದೆ ನಿರಂತರವಾಗಿ ದಾನ-ಧರ್ಮ ನಡೆಸಿಕೊಂಡು ಬರುತ್ತಿದ್ದು, ಎಲ್ಲಾ ಜನಾಂಗದ ಶ್ರದ್ಧಾ ಕೇಂದ್ರವಾಗಿ ರಾರಾಜಿಸುತ್ತಿರುವ ಅಲ್ಲಿನ ಚಿಂತನೆಗಳು ಸದಾ ಅನುಕರಣೆಯವಾಗಿದೆ ಎಂದರು.

ಇತ್ತೀಚೆಗೆ ಕೆಲವು ಹಿಂದೂ ವಿರೋಧಿ ಶಕ್ತಿಗಳು ಕ್ಷೇತ್ರಕ್ಕೆ ಕಳಂಕ ತರಲು ಅಪಪ್ರಚಾರ, ಷಡ್ಯಂತ್ರ ಮತ್ತು ಸುಳ್ಳು ವದಂತಿ ಸೃಷ್ಟಿಸಿ, ಧರ್ಮಸ್ಥಳದ ಪಾವಿತ್ರ್ಯತೆಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಭಕ್ತರಲ್ಲಿ ಅಪನಂಬಿಕೆ ಮೂಡಿಸಿ, ಶಾಂತಿ ಕದಡಲು ಯತ್ನಿಸುತ್ತಿರುವುದನ್ನು ವಿರೋಧಿಸಿದರು.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡು ಬಂದ ಅನಾಮಿಕ ವ್ಯಕ್ತಿಯ ಹುಚ್ಚಾಟಕ್ಕೆ ರಾಜ್ಯ ಸರ್ಕಾರವು ಸ್ಪಂದಿಸಿ. ಅವನು ತೋರಿದ ಹಾಗೆಲ್ಲಾ ಅಗೆದು ಗುಂಡಿ ತೋಡಿಸುತ್ತಿರುವುದು ಹಿಂದೂ ಧರ್ಮದ ಭಾವನೆಗಳನ್ನು ಘಾಸಿಗೊಳಿಸಲು ಮತ್ತು ಧರ್ಮಸ್ಥಳದ ಶ್ರೀಮಂಜುನಾಥನ ಬಗ್ಗೆ ಅಪಪ್ರಚಾರ ಮಾಡಿ ಸುಳ್ಳು ವದಂತಿ ಹರಡಲು ಮಾಡುತ್ತಿರುವ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.

ಸರ್ಕಾರಕ್ಕಾಗಲೀ ಅಥವಾ ಎಸ್‌ಐಟಿಗಾಗಲೀ ಕನಿಷ್ಠ ಜ್ಞಾನವಾದರೂ ಇರಬೇಕಿತ್ತು. ಕ್ರಿಮಿನಲ್ ಉದ್ದೇಶ ಹೊಂದಿರುವ ಯಾವುದೇ ವ್ಯಕ್ತಿಯು ೧೮-೨೦ ಅಡಿ ಆಳ ಗುಂಡಿ ತೋಡಿ ಹೆಣ ಹೂಳುವಷ್ಟು ತಾಳ್ಮೆಯನ್ನು ಹೊಂದಿರುತ್ತಾನೆಯೇ ಮತ್ತು ಆ ಹೆಣಗಳನ್ನು ಹೂಳಲು ನಿರ್ದೇಶನ ನೀಡಿದವರು ಯಾರು?, ಆ ಕೊಲೆಗಳು ಹೇಗೆ ನಡೆಯಿತು ಎಂದು ಸಮರ್ಪಕವಾದ ತನಿಖೆ ನಡೆಸುವುದು ಸೂಕ್ತ. ಆದರೆ, ಸರ್ಕಾರ ಸಮರ್ಪಕ ತನಿಖೆ ನಡೆಸದೆ ಆ ಅನಾಮಿಕ ವ್ಯಕ್ತಿ ದೂರು ನೀಡಿದನೆಂಬ ಕಾರಣಕ್ಕೆ ಧರ್ಮಸ್ಥಳದಲ್ಲಿ ಅವನು ಹೇಳಿದ ಜಾಗದಲೆಲ್ಲಾ ಗುಂಡಿ ತೋಡುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.

ಕಳೆದ ೨೦ ದಿನಗಳಿಂದ ಶೋಧ ಕಾರ್ಯ ನಡೆಸುತ್ತಿರುವ ಎಸ್‌ಐಟಿ ತಂಡ ೧೭ ಸ್ಥಳಗಳಲ್ಲಿ ಗುಂಡಿಗಳನ್ನು ತೋಡಿದರೂ. ಇದುವರೆವಿಗೂ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಉತ್ಖನ ಮತ್ತು ತನಿಖೆ ನಡೆಸಲು ಒಂದು ದಿನಕ್ಕೆ ಒಂದು ಲಕ್ಷ ಕ್ಕಿಂತಲೂ ಅಧಿಕ ಹಣ ಖರ್ಚಾಗುತ್ತಿದ್ದು, ಇಂತಹ ವ್ಯಕ್ತಿಯ ಮಾತನ್ನು ಹೇಗೆ ನಂಬುವುದು ಎಂದು ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ನೂರಾರು ಕೊಲೆಗಳಾಗಿವೆ ಆ ಹೆಣಗಳನ್ನು ನಾನೇ ಹೂತಿದ್ದೇನೆ. ಅವುಗಳ ಬಗ್ಗೆ ತನಿಖೆಯಾಗಲಿ ಎಂದು ದೂರು ನೀಡಿರುವ ಆ ಅನಾಮಿಕ ವ್ಯಕ್ತಿ ಯಾರು?, ಅವನ ಹಿನ್ನೆಲೆ ಏನು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಆತನ ಆರೋಪದಲ್ಲಿ ಹುರುಳು ಇದ್ದಂತೆ ಕಾಣುತ್ತಿಲ್ಲ ಎಸ್‌ಐಟಿಯು ಅನಾಮಿಕ ವ್ಯಕ್ತಿ ಹೇಳಿದಂತೆ ಇನ್ನೂ ೫೦ ಕಡೆ ಶವ ಹೂತಿದ್ದೇನೆ ಎಂದರೂ ತನಿಖೆ ನಡೆಸಲಿ. ಆದರೆ, ಆತ ಯಾವ ಆಧಾರದಡಿ ಆರೋಪ ಮಾಡುತ್ತಿದ್ದಾನೆಂಬುದು ಸ್ಪಷ್ಟವಾಗಬೇಕು. ಆದ ಕಾರಣ ಅವನ ಮಂಪರು ಪರೀಕ್ಷೆ ನಡೆಸಿ, ನಂತರ ತನಿಖೆ ಮಾಡುವುದು ಸೂಕ್ತ ಎಂದು ಒತ್ತಾಯಿಸಿದರು.

ಅನಾಮಿಕ ವ್ಯಕ್ತಿಯ ದೂರನ್ನು ನಂಬಿ ನಡೆಸುತ್ತಿರುವ ಉತ್ಖನ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು ಮತ್ತು ಭಾರತದ ಪುಣ್ಯ ಕ್ಷೇತ್ರಗಳಲ್ಲೊಂದಾದ ಧರ್ಮಸ್ಥಳದ ಪಾವಿತ್ರ್ಯತೆಯ ಬಗ್ಗೆ ಮೃತಿಯನ್ನುಂಟು ಮಾಡಲು ಹುನ್ನಾರ ಮಾಡುತ್ತಿರುವ ಹಿಂದೂ ವಿರೋ ವ್ಯಕ್ತಿಗಳ ವಿರುದ್ಧ ಉಗ್ರವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಟಿ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಕೆ.ಎಲ್. ಮರಿಸ್ವಾಮಿ, ಡಿ.ಎಂ.ಮಹೇಶ, ಮರಿಸ್ವಾಮಿ, ಮಹದೇವ, ರೂಪ, ಸೀತಾರಾಮ, ರಾಮಚಂದ್ರ ನಾಗರಾಜು ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ