ಬೀದರ್‌: ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಪಿತೂರಿ, ಎಫ್‌ಐಆರ್‌

KannadaprabhaNewsNetwork | Updated : Dec 25 2023, 01:31 AM IST

ಸಾರಾಂಶ

ವಿರೋಧ ಪಕ್ಷದವರಲ್ಲ, ಸ್ವಪಕ್ಷದವರು ಸಹ ನನ್ನ ಮೇಲೆ ಸುಳ್ಳು ದೂರು ದಾಕಲಾಗುವಂತೆ ಮಾಡಿದ್ದಾರೆ: ಜಿಪಂ ಮಾಜಿ ಸದಸ್ಯ ಗುಂಡು ರೆಡ್ಡಿ ಆರೋಪ

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯಲ್ಲಿ ಜನಪರ ನಾಯಕನಾಗಿ ಬೆಳೆಯುತ್ತಿರುವ ನನ್ನ ವಿರುದ್ಧ ವಿರೋಧ ಪಕ್ಷದವರಷ್ಟೇ ಅಲ್ಲ ಸ್ವಪಕ್ಷೀಯರೂ ನನ್ನ ಏಳ್ಗೆಯನ್ನು ತಡೆಯಲು ನನ್ನ ಮೇಲೆ ಸುಳ್ಳು ದೂರು ದಾಖಲಾಗುವಂತೆ ಮಾಡಿದ್ದಾರೆ. ಆದರೂ ಶೀಘ್ರದಲ್ಲಿ ನ್ಯಾಯಾಲಯದಲ್ಲಿ ನನಗೆ ನ್ಯಾಯ ದೊರಕುವ ಭರವಸೆ ಹೊಂದಿದ್ದೇನೆ ಎಂದು ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್‌ ಮುಖಂಡ ಗುಂಡು ರೆಡ್ಡಿ ಆರೋಪಿಸಿದರು.

ಭಾನುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ನ.29ರಂದು ರಾತ್ರಿ ನಾನು ನನ್ನ ಹೊಲದಲ್ಲಿದ್ದಾಗ ಸುಳ್ಳು ದೂರು ದಾಖಲಿಸಿ ನನ್ನನ್ನು ಬಂಧಿಸಲಾಯಿತು. ನನ್ನ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿದವರನ್ನು ಪ್ರಶ್ನಿಸಿದ ನನ್ನ ವಿರುದ್ಧ ದರೋಡೆ, ಕೊಲೆ ಯತ್ನದ ಆರೋಪಗಳ ಕಲಂಗಳನ್ನು ಹಾಕಲಾಗಿದ್ದು ಬೇಸರ ತರಿಸಿದೆ ಎಂದರು.

ಅಪರಿಚಿತರ ಓಡಾಟದ ಕುರಿತು ನಾನು ಬಸವಕಲ್ಯಾಣ ಪಿಎಸ್‌ಐಗೆ ಮೊದಲೇ ಮೊಬೈಲ್‌ ಕರೆ ಮಾಡಿ ತಿಳಿಸಿದ್ದೆ. ಅಷ್ಟೇ ಅಲ್ಲ ನಾನು ಆರೋಪಿಯನ್ನು ಹೆದರಿಸಿರುವುದು, ಪಿಸ್ತೂಲ್‌ನಿಂದ ಗುಂಡು ಹಾರಿಸಿರುವುದು ಎಲ್ಲವೂ ಸುಳ್ಳು. ಇದೊಂದು ಪಿತೂರಿ. 3.5 ಕೋಟಿ ರು. ನಗದು ಹಣ ದೋಚಿರುವುದಾಗಿ ಆರೋಪ ಮಾಡಿರುವ ಮಹಾವೀರ ಎಂಬಾತನ ಮಾತು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದರು.

ಅಷ್ಟೊಂದು ಪ್ರಮಾಣದ ನಗದನ್ನು ಅವರು ಸಾಗಿಸುತ್ತಿರುವುದಾದರೂ ಹೇಗೆ, ಅವರು ತೆಲಂಗಾಣಾದಿಂದ ಬರುತ್ತಿರುವುದಾಗಿ ತಿಳಿಸಿದ್ದಾರೆ. ಅಲ್ಲಿ ಆಗ ಚುನಾವಣೆ ಸಮಯ, ಅವರನ್ನು ಯಾರೂ ತಪಾಸಣೆ ನಡೆಸಿರಲಿಲ್ಲವೇ ಪ್ರಶ್ನಿಸಿರಲಿಲ್ಲವೇ? ಹಣ ಜಪ್ತಿ ಮಾಡಿಕೊಂಡಿರುವದಾಗಿ ಹೇಳಲಾಗಿದೆ. ಆದರೆ ಅದರ ಫೋಟೋಗಳು ಏನಾದರೂ ಇವೆಯೇ ಎಂದು ಪ್ರಶ್ನಿಸಿದರು.

ನಾನು ಕೋವಿಡ್‌ ಕಾಲದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಆಹಾರ ಕಿಟ್‌ ಹಂಚಿದೆ. ಅನೇಕ ಆರೋಗ್ಯ ಶಿಬಿರಗಳು, ನೇತ್ರ ಶಿಬಿರಗಳು ಇತ್ಯಾದಿ ಸಮಾಜಮುಖಿ ಚಟುವಟಿಕೆ ನಡೆಸಿರುವಾಗ ಈ ಕ್ಷುಲ್ಲಕ ಹಣಕ್ಕಾಗಿ ಆಸೆಪಡುವ ಅಗತ್ಯ ನನಗಿಲ್ಲ. ಇದರಲ್ಲಿ ರಾಜಕೀಯ ಕೈವಾಡ ಖಂಡಿತ ಇದ್ದು, ಪೊಲೀಸ್‌ ವಿಚಾರಣೆಯಲ್ಲಿ ಸತ್ಯ ಬಹಿರಂಗಗೊಳ್ಳಲಿದೆ.

ನನಗಿರುವ ಜನ ಬೆಂಬಲದಿಂದ ಹೆದರಿರುವ ರಾಜಕಾರಣಿಗಳು ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕುತಂತ್ರ ರಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಗೃಹಮಂತ್ರಿಗಳನ್ನು ಭೇಟಿಯಾಗಿ ಸಮಗ್ರ ತನಿಖೆಗೆ ಮನವಿಸುತ್ತೇನೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

Share this article