ಸರ್ಕಾರ ನೀರು ಕೊಡದಿದ್ದರೆ ಸಂಪೂರ್ಣ ನಷ್ಟ ಕೊಡಲಿ: ಬಡಗಲಪುರ ನಾಗೇಂದ್ರ

KannadaprabhaNewsNetwork |  
Published : Dec 25, 2023, 01:30 AM ISTUpdated : Dec 25, 2023, 01:31 AM IST
ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ಆಡಳಿತ ಕಚೇರಿಗೆ ಬೀಗ ಜಡಿದು ಕಳೆದ ಏಳು ದಿನಗಳಿಂದ ಅಹೋರಾತ್ರಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಲು ಆಗಮಿಸಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಭೀಮರಾಯನಗುಡಿಯಲ್ಲಿ 7ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಪ್ರತಿಭಟನೆ. ಧರಣಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆಕ್ರೋಶ. ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹ.

ಕನ್ನಡಪ್ರಭ ವಾರ್ತೆ ಶಹಾಪುರನಮಗೆ ನೀರು ಕೊಡದಿದ್ದರೆ ಸಂಪೂರ್ಣ ನಷ್ಟ ಕೊಡಲಿ. ನಮಗೆ ಭಿಕ್ಷೆ ರೂಪದ ಪರಿಹಾರ ಬೇಡ, ವೈಜ್ಞಾನಿಕ ಪರಿಹಾರ ನೀಡಲಿ. ರೈತರನ್ನು ಎದುರು ಹಾಕಿಕೊಂಡು ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ಮೆಣಸಿನಕಾಯಿ ಬೆಳೆಗೆ ನೀರು ಕೊಡುವಂತೆ ಒತ್ತಾಯಿಸಿ, ಇಲ್ಲಿನ ಭೀಮರಾಯನಗುಡಿ ಕೃಷ್ಣಾ ಭಾಗ್ಯ ಜಲ ನಿಗಮ ಕಚೇರಿಗೆ ಬೀಗಮುದ್ರೆ ಜಡಿದು, ನಡೆಸುತ್ತಿರುವ ರೈತರ ಪ್ರತಿಭಟನೆ ಭಾನುವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.

ಮೆಣಸಿನಕಾಯಿ ಬೆಳೆಗೆ ನೀರು ಕೊಡುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಡಿ.25ರಂದು ಶಹಾಪುರ ಬಂದ್ ಕರೆ ನೀಡಿ, ನೀರು ಕೊಡಿ, ಇಲ್ಲವೇ ಪೂರ್ಣ ನಷ್ಟ ಕೊಡಿ ಎಂದು ಒತ್ತಾಯಿಸಲಾಗುವುದು ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಈ ವಿಷಯವನ್ನು ವಿಧಾನಸೌಧ ಮೂರನೇ ಮಹಡಿಯೊರಿಗೆ ತೆಗೆದುಕೊಂಡು ಹೋಗುತ್ತೇವೆ.

ಆಂಧ್ರಕ್ಕೆ ನೀರು ಮಾರಿಕೊಳ್ಳುತ್ತಾರಾ ?

ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ರೈತರ ಅಭಿಪ್ರಾಯ ಕೇಳಿದ ನಂತರ ನೀರಾವರಿ ಸಲಹಾ ಸಮಿತಿ ಸಭೆ ನಡೆಯಬೇಕು. ಆದರೆ ಇಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಡಿದ್ದೇ ಆಟವಾಗಿದೆ. ಸಲಹಾ ಸಮಿತಿಯಲ್ಲಿ ರೈತರ, ಕೃಷಿ ಅಧಿಕಾರಿ ಹಾಗೂ ಕೃಷಿ ವಿಜ್ಞಾನಿ ಮತ್ತು ತಜ್ಞರಿಂದ ಯಾವ ಬೆಳೆಗೆ ಎಷ್ಟು ಪ್ರಮಾಣದ ನೀರು ಬೇಕು ಎಂದು ನೀರಾವರಿ ಸಲಹಾ ಸಮಿತಿ ಮೊದಲು ತಿಳಿದುಕೊಳ್ಳಲಿ. ಆದರೆ ಇವು ಯಾವುದೇ ಅಭಿಪ್ರಾಯ ಕೇಳದೆ ಡ್ಯಾಮಿನಲ್ಲಿನ ನೀರಿನ ಮಟ್ಟ ನೋಡಿ ತೀರ್ಮಾನ ತೆಗೆದುಕೊಳ್ಳುವುದು ಎಷ್ಟು ಸರಿ. ಮುಂದೆ ರೈತರ ಅಭಿಪ್ರಾಯ ಕೇಳದೆ ನೀರಾವರಿ ಸಲಹಾ ಸಮಿತಿ ನಡೆಯಲು ಬಿಡುವುದಿಲ್ಲ. ಎಂದು ಅವರು ಸಲಹಾ ಸಮಿತಿಗೆ ಎಚ್ಚರಿಕೆ ನೀಡಿದರು.

ನಾರಾಯಣಪುರ ಡ್ಯಾಮ್‌ನಲ್ಲಿ ನೀರಿನ ಲಭ್ಯತೆ ಇದ್ದರೂ ರೈತರ ಬೆಳೆಗೆ ನೀರು ಹರಿಸದೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರ ಆಂಧ್ರಕ್ಕೆ ನೀರು ಮಾರಿಕೊಳ್ಳುತ್ತಾ ಎನ್ನುವ ಅನುಮಾನವಿದೆ ಎಂದರು.

ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪೂಣಚ್ಚ, ರಾಜ್ಯ ಕಚೇರಿ ಕಾರ್ಯದರ್ಶಿ ಗೋಪಾಲ್ ಪಾಪೇಗೌಡ, ಮಹಿಳಾ ಘಟಕದ ರಾಜ್ಯಾಧ್ಯಕ್ಷೇ ನಾಗರತ್ನ ಪಾಟೀಲ್, ಸಂಘದ ಹಿರಿಯ ರಾಜ್ಯ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ಜಿಲ್ಲಾಧ್ಯಕ್ಷ ಶರಣು ಮಂದಾರವಾಡ, ಜಿಲ್ಲಾ ಮುಖಂಡ ಮಹೇಶ್ ಗೌಡ ಸುಬೇದಾರ್ ಸೇರಿ ಹಲವು ಮುಖಂಡರು ಹಾಜರಿದ್ದರು.

ಪಾದಯಾತ್ರೆ: ಪ್ರತಿಭಟನೆ

ಶಹಾಪುರ: ಮೆಣಸಿನಕಾಯಿ ಬೇಳೆ ಬರುವವರೆಗೂ ನಾರಾಯಣಪುರ ಎಡದಂಡೆ ಕಾಲುವೆಯ ಎಸ್ಬಿಸಿ, ಜೆಬಿಸಿ, ಎಂಬಿಸಿ, ಶಾಖಾ ಕಾಲುವೆಗಳಿಗೆ ನೀರು ಹರಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಒತ್ತಾಯಿಸಿ ಡಿ. 25 ರಂದು ಬಸವೇಶ್ವರ ಸರ್ಕಲ್‌ನಿಂದ ನಗರದಲ್ಲಿರುವ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರವರ ಕಚೇರಿವರೆಗೆ ಪಾದಯಾತ್ರೆ ಮಾಡಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಕೋಟ್ಯಂತರ ರೂಪಾಯ ಬೆಲೆ ಬಾಳುವ ರೈತರ ಮೇಣಸಿನ ಕಾಯಿ ಬೆಳೆಗೆ ನೀರು ಹರಿಸಿ ರೈತರ ಆತ್ಮಹತ್ಯೆ ತಡೆದು, ರೈತರನ್ನು ರಕ್ಷಣೆ ಮಾಡಬೇಕೆಂದು ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇವೆ ಎಂದು ಚೆನ್ನಪ್ಪ ತಿಳಿಸಿದ್ದಾರೆ.

ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಸಾಗರ, ತಾಲೂಕು ಅಧ್ಯಕ್ಷ ಭೀಮಣ್ಣ ಟಪ್ಪೆದಾರ, ತಾಲೂಕು ಕಾರ್ಯದರ್ಶಿ ಭೀಮರಾಯ ಪೂಜಾರಿ, ಸುರಪುರ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ, ಸುರಪುರ ತಾಲೂಕು ಕಾರ್ಯದರ್ಶಿ ರಾಮಯ್ಯ ಭೋವಿ, ರೈತ ಮುಖಂಡ ತಮ್ಮಣ್ಣ ಜಾಗಿರದಾರ, ಹೊನ್ನಪ್ಪ ಮಾನ್ಪಡೆ, ಸೊಮಣ್ಣ ಕೊಂಗಂಡಿ, ರಾಮಣ್ಣ ಗೌಡ ಆಲಾಳ ಇದ್ದರು.

ಮೆಣಸಿನಕಾಯಿತ ಬೆಳೆ ಉಳಿಸಿ: ಲಕ್ಷ್ಮೀಕಾಂತ ಮದ್ದರಕಿ

ಯಾದಗಿರಿ: ನಾರಾಯಣಪುರ ಎಡ ಬಲದಂಡೆ ನಾಲೆಗಳಿಗೆ ಫೆಬ್ರವರಿ ಕೊನೆಯ ವರೆಗೆ ನೀರು ಹರಿಸಿ ಲಕ್ಷಾಂತರ ಎಕರೆಯಲ್ಲಿ ಬೆಳೆದ ಮೆಣಸಿನಕಾಯಿ ಬೆಳೆ ಉಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ ಅಗ್ರಹಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದರು. ಇದೆ ತಿಂಗಳ 16 ರಂದು ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ರೈತರು ಆತಂಕಕ್ಕೆ ಸಿಲುಕಿದ್ದಾರೆ, ಆದ್ದರಿಂದ ನಾರಾಯಣಪುರ ಬಲದಂಡೆ ಮತ್ತು ಎಡದಂಡೆ ಕಾಲುವೆಗೆ ಮೆಣಸಿನಕಾಯಿ ಬೆಳೆಗೆ ಫೆಬ್ರುವರಿ ವರೆಗೆ ನೀರು ಹರಿಸುವಂತೆ ಒತ್ತಾಯಿಸಿದರು.

ನಾರಾಯಣಪುರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆ ಅಡಿಯಲ್ಲಿ ಸುಮಾರು 78 ಸಾವಿರ ಹೆಕ್ಟರ್ ಪ್ರದೇಶ ರೈತರು ಮೆಣಸಿನಕಾಯಿ ಬೆಳೆದಿದ್ದು, ಡಿ.16 ರಂದು ಕಾಲುವೆಗೆ ನೀರು ಹರಿಸುವುದನ್ನು ಇಲಾಖೆಯವರು ನಿಲ್ಲಿಸಿರುತ್ತಾರೆ ಇದರಿಂದ ರೈತರಿಗೆ ತುಂಬ ತೊಂದರೆಯಾಗುತ್ತದೆ ಎಂದು ತಿಳಿಸಿದರು.

ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ರೈತರು ಅಪಾರ ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಫೆಬ್ರುವರಿ ತಿಂಗಳ ಕೊನೆಯ ಹಂತದವರೆಗೆ ಕಾಲುವೆಗೆ ನೀರು ಹರಿಸಬೇಕು.

ರೈತರು ಸಾಲ ಸೋಲ ಮಾಡಿ ಮೆಣಸಿನಕಾಯಿ ಬೆಳೆ ಬೆಳೆಯಲು ಖರ್ಚು ಮಾಡಿರುತ್ತಾರೆ. ಡಿಸೆಂಬರ್ ಕೊನೆ ತಿಂಗಳದಲ್ಲಿ ಹೂವು ಕಾಯಿ ಕಟ್ಟುವ ಸಂದರ್ಭದಲ್ಲಿ ನೀರು ಬಂದು ಮಾಡಿದರೆ ಫಸಲು ಬರುವಂತ ಸಂದರ್ಭದಲ್ಲಿ ಬೆಳೆ ಒಣಗಿ ಹೋಗುತ್ತದೆ. ಹೀಗಾಗಿ ರೈತರು ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಸರ್ಕಾರವು ಫೆಬ್ರುವರಿ ಕೊನೆ ವಾರದ ವರೆಗೆ ನೀರು ಹರಿಸಿ ರೈತರಿಗೆ ಅನುಕೂಲತೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಿಗಿ ಜೊತೆಗಿದ್ದರು.

-------24ವೈಡಿಆರ್11 : ಶಹಾಪುರ ತಾಲೂಕಿನ ಭೀಮರಾಯನ ಗುಡಿಯ ಕೆಬಿಜೆಎನ್ಎಲ್ ಆಡಳಿತ ಕಚೇರಿಗೆ ಬೀಗ ಜಡಿದು ಕಳೆದ ಏಳು ದಿನಗಳಿಂದ ಅಹೋರಾತ್ರಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಲು ಆಗಮಿಸಿದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.------24ವೈಡಿಆರ್12 ಚೆನ್ನಪ್ಪ ಆನೆಗುಂದಿ, ಅಧ್ಯಕ್ಷರು, ಜಿಲ್ಲಾ ಪ್ರಾಂತ ರೈತ ಸಂಘ, ಯಾದಗಿರಿ.------24ವೈಡಿಆರ್‌13ನಾರಾಯಣಪುರ ಎಡ ಬಲದಂಡೆ ನಾಲೆಗಳಿಗೆ ನೀರು ಹರಿಸುವಂತೆ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ ಬೆಂಗಳೂರಿನಲ್ಲಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಭೇಟಿ ಮಾಡಿ ಮನವಿ ಸಲ್ಲಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ