ಡಿಸಿ ಜನತಾದರ್ಶನದ ಅಹವಾಲುಗಳಿಗೆ ಪರಿಹಾರ ಯಾವಾಗ?

KannadaprabhaNewsNetwork | Updated : Dec 25 2023, 01:31 AM IST

ಸಾರಾಂಶ

ಗಜೇಂದ್ರಗಡ ಪಟ್ಟಣದ ಪುರಸಭೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅಹವಾಲುಗಳಿಗೆ ಇಂದಿಗೂ ಪರಿಹಾರ ಸಿಗದಿರುವುದು ಜನತೆ ಈಗಲೂ ಜಿಲ್ಲಾಧಿಕಾರಿಗಳತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಧಿಕಾರಿಯತ್ತ ಮುಖಮಾಡಿದ ಜನತೆ

ಎಸ್.ಎಂ.ಸೈಯದ್

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ಪಟ್ಟಣದ ಪುರಸಭೆಯಲ್ಲಿ ನಡೆದ ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅಹವಾಲುಗಳಿಗೆ ಇಂದಿಗೂ ಪರಿಹಾರ ಸಿಗದಿರುವುದು ಜನತೆ ಈಗಲೂ ಜಿಲ್ಲಾಧಿಕಾರಿಗಳತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನತೆಯ ಅಹವಾಲು ಆಲಿಸುವುದರ ಜತೆಗೆ ಸಮಸ್ಯೆಗಳ ತ್ವರಿತಗತಿ ಪರಿಹಾರ ಒದಗಿಸಲು ನಡೆದ ತಾಲೂಕು ಮಟ್ಟದ ಜನತಾ ದರ್ಶನದಲ್ಲಿ ೧೨೮ಕ್ಕೂ ಅಧಿಕ ಅರ್ಜಿಗಳಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ೧೧೦ಕ್ಕೂ ಅಧಿಕ ಅರ್ಜಿಗಳನ್ನು ವಿಲೇವಾರಿ ಮಾಡುವ ಮೂಲಕ ಜನರ ಮೆಚ್ಚುಗೆ ಪಾತ್ರವಾಗಿದ್ದರು.

ಆದರೆ, ಪಟ್ಟಣದ ಕಿರಾಣಿ ಹಾಗೂ ಹೋಟೆಲ್‌ಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಟೇಸ್ಟಿಂಗ್ ಪೌಡರ್ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕುವ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಟೇಸ್ಟಿಂಗ್ ಪೌಡರ್ ಬಳಕೆ ಕುರಿತಂತೆ ಆಹಾರ ಸುರಕ್ಷಾ ಅಧಿಕಾರಿ ವ್ಯಾಪ್ತಿಗೆ ಬರುವುದಾಗಿ ತಿಳಿಸಿದ್ದರು. ಆಹಾರ ಸುರಕ್ಷಾ ಅಧಿಕಾರಿಗಳು ಪಟ್ಟಣದಲ್ಲಿನ ಕಿರಾಣಿ ಅಂಗಡಿಗಳು ಮತ್ತು ಬೀದಿ ಬದಿ ಎಗ್ ರೈಸ್ ಮತ್ತು ಹೋಟೆಲ್‌ಗಳನ್ನು ತಪಾಸಣೆಗೆ ಒಳಪಡಿಸಲು ಮುಂದಾಗಿಲ್ಲ.

ಶಾಲೆಯ ಶೌಚಾಲಯ ಸಮಸ್ಯೆ: ಪಟ್ಟಣದ ಸರ್ಕಾರಿ ಶಾಲೆ ನಂ.೨ ಹಾಗೂ ೪ರಲ್ಲಿನ ಶೌಚಾಲಯ ಸಮಸ್ಯೆ ಪರಿಹಾರಕ್ಕೆ ಶಿಕ್ಷಕಿಯರು, ಎಸ್‌ಡಿಎಂಸಿ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಅವರಿಗೆ ಶಾಲೆಗಳಲ್ಲಿ ಶೌಚಾಲಯ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲವೇಕೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಚಿಸಿದ್ದರು. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿ ಇತರ ಯಾವ ಅಧಿಕಾರಿಗಳು ಸಹ ಈವರೆಗೂ ಇಲ್ಲಿನ ಸರ್ಕಾರಿ ಶಾಲೆ ನ.೨ ಹಾಗೂ ನಂ.೪ಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ.

ಪಟ್ಟಣದ ೧೮, ೧೯ ಹಾಗೂ ೨೧ನೇ ವಾರ್ಡಿನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದ್ದು ರಸ್ತೆ ಸಮಸ್ಯೆಗೆ ಪರಿಹಾರ ನೀಡುವಂತೆ ಸಲ್ಲಿಸಿದ ಮನವಿಗೆ ಜಿಲ್ಲಾಧಿಕಾರಿಗಳು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಎಂದು ಪುರಸಭೆಗೆ ಸೂಚಿಸಿದ್ದರು.

ಫಾರ್ಮ್ ಹೌಸ್ ಸ್ಥಳಾಂತರಿಸಿ: ಉಣಚಗೇರಿ ಗ್ರಾಮದಲ್ಲಿ ಕೋಳಿ ಫಾರ್ಮ್ ಹೌಸ್‌ನಿಂದ ಗ್ರಾಮದ ಜನರಿಗೆ ತೀವ್ರ ತೊಂದರೆ ಜತೆಗೆ ಆರೋಗ್ಯ ಸಮಸ್ಯೆ ಆಗುತ್ತಿದ್ದು, ಫಾರ್ಮ್ ಹೌಸ್ ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ನೀಡಿದ್ದರು. ಹೀಗಾಗಿ ಫಾರ್ಮ್ ಹೌಸ್ ಬಂದ್ ಮಾಡಲು ಅಧಿಕಾರಿಗಳಿಗೆ ಡಿಸಿ ಆದೇಶಿಸಿದ್ದರು. ಆದರೆ ಕೇವಲ ನೋಟಿಸ್‌ ಮಾತ್ರ ನೀಡಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ, ಪರಿಸ್ಥಿತಿಯೂ ಬದಲಾಗಿಲ್ಲ.ಸಮಸ್ಯೆಗಳನ್ನು ಹೊತ್ತು ಕಚೇರಿಗಳಿಗೆ ಜನತೆ ಅಲೆಯಬಾರದು ಎಂದು ಪಟ್ಟಣದಲ್ಲಿ ಜನತಾ ದರ್ಶನ ನಡೆಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳು ನೀಡಿದ ಸೂಚನೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಪಟ್ಟಣದ ಸರ್ಕಾರಿ ನಂ ೨ ಹಾಗೂ ನಂ.೪ರ ಶೌಚಾಲಯ ಸಮಸ್ಯೆ ಕುರಿತು ಪುರಸಭೆ ಮುಖ್ಯಾಧಿಕಾರಿ ಅವರೊಂದಿಗೆ ಚರ್ಚಿಸಿದ್ದು, ಶಾಲೆಗಳಿಗೆ ಭೇಟಿ ನೀಡಿಲ್ಲ. ಆದರೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಹೇಳಿದರು.

೧೮, ೧೯ ಹಾಗೂ ೨೧ನೇ ವಾರ್ಡಿನ ರಸ್ತೆ ಕುರಿತು ವಾರ್ಡಿನ ಸದಸ್ಯರ ಗಮನಕ್ಕೆ ತರಲಾಗಿದೆ. ಉಣಚಗೇರಿ ಕೋಳಿ ಫಾರ್ಮ್ ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಎರಡ್ಮೂರು ದಿನದಲ್ಲಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ಕೈಗೊಳ್ಳಲಾಗುವುದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು.

Share this article