- ಮಾಡಾಳು ಮಲ್ಲಿಕಾರ್ಜುನ್ 50ನೇ ಜನ್ಮದಿನ ಸಮಾರಂಭ । ವಿರೂಪಾಕ್ಷಪ್ಪ ಶ್ರಮದಿಂದ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಮಗ ಮಾಡಾಳು ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸಿದರೆ ಇಡೀ ಕ್ಷೇತ್ರವೇ ಅಭಿವೃದ್ಧಿ ಆಗುತ್ತದೆ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಪ್ರಬಲ ನಾಯಕನಾಗಿ ಬೆಳೆಯುತ್ತಾರೆ ಎಂದು ಕೆಲವು ದುಷ್ಟಶಕ್ತಿಗಳು ರಾಜಕೀಯ ಷಡ್ಯಂತ್ರವನ್ನು ಮಾಡಿ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಅವರನ್ನು ಪರಾಭವಗೊಳಿಸಿದರು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಸೋಮವಾರ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಮೌದ್ಗಲ್ ಅಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಮಾಡಾಳು ಮಲ್ಲಿಕಾರ್ಜುನ್ ಅವರ 50ನೇ ಹುಟ್ಟುಹಬ್ಬದ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಾಡಾಳು ಕುಟುಂಬದ ರಾಜಕಾರಣದ ವರ್ಚಸ್ಸನ್ನು ಕಂಡ ಕ್ಷೇತ್ರದ ಜನತೆ ವಿಜಯೋತ್ಸವದ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿರುವುದು ಮಾಡಾಳು ಮಲ್ಲಿಕಾರ್ಜುನ್ ಮೇಲಿಟ್ಟಿರುವ ಅಭಿಮಾನಕ್ಕೆ ಸಾಕ್ಷಿ ಎಂದರು.
ಮುಂದಿನ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮಾಡಾಳು ಮಲ್ಲಿಕಾರ್ಜುನ್ ಗೆಲ್ಲುವುದು ಶತಸಿದ್ಧ. ಅವರ ತಂದೆ ವಿರೂಪಾಕ್ಷಪ್ಪ ಪೂರ್ಣ ಪ್ರಮಾಣದಲ್ಲಿ ರಾಜಕಾರಣದಲ್ಲಿರುತ್ತಾರೆ. ಮಾಡಾಳು ಮಲ್ಲಿಕಾರ್ಜುನ್ ಅಭಿಮಾನಿಗಳೇ ಚನ್ನಗಿರಿ ಕ್ಷೇತ್ರದ ಎಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳ ಫ್ಲೆಕ್ಸ್‌ಗಳನ್ನು ಹಾಕಿ ಅಭಿನಂದಿಸಿ, ಸ್ವಯಂ ಪ್ರೇರಣೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಹುಟ್ಟುಹಬ್ಬದ ಆಚರಣೆ ಮಾಡುತ್ತಿದ್ದಾರೆ. ಇದರಲ್ಲಿ ಮಾಡಾಳು ಮಲ್ಲಿಕಾರ್ಜುನ್ ಜನಪ್ರಿಯತೆ ಎದ್ದುಕಾಣುತ್ತದೆ ಎಂದರು.
ಮಾಜಿ ಶಾಸಕ ಬಸವರಾಜ ನಾಯ್ಕ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕನಸುಗಾರನಾಗಿರುವ ಮಾಡಾಳು ಮಲ್ಲಿಕಾರ್ಜುನ್ ಎಂದೇ ಪ್ರಸಿದ್ಧಿ ಪಡೆದಿರುವ ಅವರು ಬರುವ ಚುನಾವಣೆಯಲ್ಲಿ ಗೆಲ್ಲುವುದು ಖಚಿತ. ಇವರ ಸೇವೆ ಕ್ಷೇತ್ರದ ಜೊತೆಯಲ್ಲಿ ಜಿಲ್ಲಾ ಕೇಂದ್ರದಲ್ಲಿಯೂ ಸಲ್ಲಬೇಕು ಎಂದ ಅವರು, ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಕ್ಷೇತ್ರದ ಜನತೆಯಲ್ಲಿ ಪ್ರೀತಿ-ವಿಶ್ವಾಸಗಳು ಬಂದಾಗ ಸಾಧನೆ ಮಾಡಲು ಸಾಧ್ಯವಾಗಿದೆ. ಇಂದಿನ ಯುವಪೀಳಿಗೆ ಎಚ್ಚೆತ್ತುಕೊಂಡಿದೆ. ಕ್ಷೇತ್ರದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಮಾಡಾಳು ಮಲ್ಲಿಕಾರ್ಜುನ ಸಹಾಯ, ಸಹಕಾರ ಮಾಡುವಂತಹ ಉದಾರತೆ ಹೊಂದಿದವರಾಗಿದ್ದಾರೆ. ಕ್ಷೇತ್ರದ ಎಲ್ಲ ಕಡೆಗಳಲ್ಲಿಯೂ ದೇವಾಲಯಗಳ ನಿರ್ಮಾಣ, ಸಮುದಾಯ ಭವನಗಳು, 250 ಹಾಸಿಗೆಗಳ ಆಸ್ಪತ್ರೆ, ಜನರು ಕೇಳುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದವರಾಗಿದ್ದರಿಂದ ಅದರ ಪ್ರತಿಫಲವಾಗಿ ಜನರು ಅಪ್ಪಿಕೊಳ್ಳುತ್ತಿದ್ದಾರೆ ಎಂದರು.
ಪ್ರತಿವರ್ಷ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆ. ನಮ್ಮ ಕಾರ್ಯಕರ್ತರಾದ ಪಿ.ಲೋಹಿತ್ ಕುಮಾರ್, ಕೆ.ಬಸವರಾಜ್, ದಿಗ್ಗೇನಹಳ್ಳಿ ನಾಗರಾಜ್ ಮತ್ತು ಕಾರ್ಯಕರ್ತರ ಪಡೆ ಸೇರಿಕೊಂಡು ನಾವೇ ನಿಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತೇವೆ ಎಂದರು. ಅಭಿಮಾನಿಗಳೇ ನನ್ನ ಜನ್ಮದಿನ ಸಂಭ್ರಮಿಸುತ್ತಿರುವುದು ಸಂತಸ ತಂದಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡರಾದ ಬಿ.ಜಿ. ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಪಿ.ಲೋಹಿತ್ ಕುಮಾರ್, ಧನಂಜಯ ಕಡ್ಲೆಬಾಳು, ತಾಲೂಕು ಬಿಜೆಪಿ ಅಧ್ಯಕ್ಷ ಕುಮಾರಸ್ವಾಮಿ, ಆರ್.ಎಂ.ರವಿ, ಎ.ಎಸ್. ಬಸವರಾಜಪ್ಪ, ನಟರಾಜ ರಾಯ್ಕರ್, ಎಲ್.ಎಂ.ರೇಣುಕಾ, ಕುಬೇಂದ್ರೋಜಿ ರಾವ್, ಜಗದೀಶ್, ಕೆ.ಬಸವರಾಜ್, ಕೆ.ಆರ್.ಗೋಪಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಶಶಿಕಲಾ ನಾಗರಾಜ್, ರೂಪ ವೆಂಕಟೇಶ ಶೇಟ್, ಮೆದಿಕೆರೆ ಸಿದ್ದೇಶ್, ನಾಗೇಂದ್ರಪ್ಪ, ಸಿ.ಕೆ.ಎಚ್. ಮಹೇಶ್ವರಪ್ಪ, ಗುಳ್ಳಹಳ್ಳಿ ಮಲ್ಲಿಕಾರ್ಜುನಪ್ಪ ಕೃಷ್ಣ ಉಪಾಧ್ಯ, ಮಾಲತೇಶ್, ಪಿ.ಬಿ.ನಾಯಕ ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು.
(ಬಾಕ್ಸ್) * ಬೃಹತ್ ಕೇಕ್ ಕತ್ತರಿಸಿ ಜನ್ಮದಿನ ಸಂಭ್ರಮಾಚರಣೆ ಬಿಜೆಪಿ ರಾಜ್ಯ ಪರಿಷತ್ ಸದಸ್ಯ, ತಾಲೂಕು ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಅವರ 50ನೇ ವರ್ಷದ ಜನ್ಮ ದಿನಾಚರಣೆಯನ್ನು ಪಟ್ಟಣದ ಶ್ರೀ ಮೌದ್ಗಲ್ ಅಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಬೃಹತ್ ಗಾತ್ರದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಮಲ್ಲಿಕಾರ್ಜುನ್ ಅವರಿಗೆ ಬೃಹತ್ ಗಾತ್ರದ ಹಾರ, ಶಾಲು, ಪೇಟಗಳನ್ನು ಹಾಕಿ ಜನ್ಮದಿನದ ಶುಭಾಶಯಗಳನ್ನು ಕೋರಿದರು. ಇದೇ ಸಂದರ್ಭದಲ್ಲಿ ಟೀಮ್ ಮಾಡಾಳು ಮಲ್ಲಿಕಾರ್ಜುನ್ ಸಂಘಟನೆಯ ಲೋಗೋ ಅನಾವರಣ ಗೊಳಿಸಲಾಯಿತು. ಕ್ಷೇತ್ರದ ವಿವಿಧ ಭಾಗಗಳಿಂದ ಬಂದಿದ್ದ ಜನರಿಗೆ ಮಧ್ಯಾಹ್ನ ಹೋಳಿಗೆ ಊಟವನ್ನು ಉಣ ಬಡಿಸಲಾಯಿತು.- - -
-15ಕೆಸಿಎನ್ಜಿ1: ಮಾಡಾಳು ಮಲ್ಲಿಕಾರ್ಜುನ್ ಹುಟ್ಟುಹಬ್ಬದ ಸಮಾರಂಭವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು. ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಬಸವರಾಜ ನಾಯ್ಕ್ ಇತರ ಗಣ್ಯರು ಇದ್ದಾರೆ.-15ಕೆಸಿಎನ್‌ಜಿ2: ಜನ್ಮದಿನ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾಡಾಳು ಮಲ್ಲಿಕಾರ್ಜುನ್ ಬೃಹತ್ ಗಾತ್ರದ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ನೀಡಿದರು.
-15ಕೆಸಿಎನ್ಜಿ3: ಜನ್ಮದಿನ ಕಾರ್ಯಕ್ರಮದಲ್ಲಿ ಟೀಮ್ ಮಾಡಾಳು ಮಲ್ಲಿಕಾರ್ಜುನ್ ಸಂಘಟನೆಯ ಲೋಗೋ ಅನಾವರಣಗೊಳಿಸಲಾಯಿತು.