ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಬಾಗೇಪಲ್ಲಿ ತಾಲೂಕು ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರ ಹಾಗೂ ಪತ್ರಿಕಾ ವಿತರಕರಾಗಿದ್ದ ನರಸಿಂಹಮೂರ್ತಿ(42)ಯವರು ಸೆ. 22 ಸೋಮವಾರ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯಾದ್ಯಂತ ಆಘಾತ ಮೂಡಿಸಿದೆ. ಪತ್ರಕರ್ತರ ವಲಯದಲ್ಲಿ, ನಾಗರಿಕ ಸಮಾಜದಲ್ಲಿ ಹಾಗೂ ಓದುಗರಲ್ಲಿ ದುಃಖದ ಅಲೆ ಹರಡಿದ್ದು, ಈ ಸಾವಿನ ಹಿಂದೆ ಸಂಚು ಅಡಗಿರುವ ಶಂಕೆಗಳೂ ವ್ಯಕ್ತವಾಗುತ್ತಿವೆ.ಮಾಡಲಿಯ ಮೂಲದವರಾದ ನರಸಿಂಹಮೂರ್ತಿ ಪ್ರತಿದಿನ ಬೆಳಗ್ಗೆ ತಮ್ಮ ಬೈಕಲ್ಲಿ ಸುಮಾರು 20ಕಿಮೀ ದೂರ ಪ್ರಯಾಣ ಮಾಡಿ ಬಾಗೇಪಲ್ಲಿಗೆ ಬಂದು ಪತ್ರಿಕೆಯ ವರದಿಗಾರಿಕೆಯ ಜೊತೆಗೆ ವಿತರಕರಾಗಿ ಸಹ ಸೇವೆ ಸಲ್ಲಿಸುತ್ತಿದ್ದರು. ಎಂದಿನಂತೆ ಸೋಮವಾರ ಬೆಳಗ್ಗೆ ಹೊರಟಿದ್ದ ಅವರು, ಪೋತೇಪಳ್ಳಿ ಕ್ರಾಸ್ ಬಳಿ ತಲುಪಿದ ವೇಳೆ ಅಪರಿಚಿತ ಕ್ಯಾಂಟರ್ ವಾಹನವು ವೇಗದಲ್ಲಿ ಬಂದು ಅವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ನರಸಿಂಹಮೂರ್ತಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಕ್ಯಾಂಟರ್ ವಾಹನ ಘಟನೆಯ ನಂತರ ಪರಾರಿಯಾಗಿದೆ. ಸ್ಥಳೀಯರು ಸಹಾಯಕ್ಕೆ ಧಾವಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಈ ಬಗ್ಗೆ ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ನರಸಿಂಹಗೌಡ ಅವರು ಆಕ್ರೋಶ ವ್ಯಕ್ತಪಡಿಸಿ, ನರಸಿಂಹಮೂರ್ತಿ ಅವರು ತಮ್ಮ ವೃತ್ತಿಜೀವನದಲ್ಲಿ ಯಾವತ್ತೂ ಅಸಡ್ಡೆ ತೋರದವರು, ಶ್ರಮಜೀವಿಯಾಗಿದ್ದವರು. ಸತ್ಯ ಬಿಚ್ಚಿಡುವ ಧೈರ್ಯ ಹೊಂದಿದ್ದವರನ್ನು ಈ ರೀತಿಯಲ್ಲಿ ಕಳೆದುಕೊಳ್ಳಬೇಕಾದರೆ, ಪತ್ರಕರ್ತರ ಸುರಕ್ಷತೆ ಪ್ರಶ್ನಾರ್ಹವಾಗುತ್ತದೆ. ಅಪಘಾತದ ಹಿಂದೆ ಯಾರಾದರೂ ಸಂಚು ನಡೆಸಿದ್ದರೆ, ಸತ್ಯ ಬಹಿರಂಗಗೊಳ್ಳಬೇಕು. ಈ ಹಿನ್ನೆಲೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.ಮೃತ ನರಸಿಂಹಮೂರ್ತಿಯವರು ವೃದ್ಧ ತಂದೆ- ತಾಯಿ, ಪತ್ನಿ, ಮೂರು ವರ್ಷದ ಮಗಳು ಹಾಗೂ ಕೇವಲ ಎಂಟು ತಿಂಗಳ ಮಗುವನ್ನು ಬಿಟ್ಟು ಅಗಲಿದ್ದಾರೆ. ಕುಟುಂಬಕ್ಕೆ ಏಕೈಕ ಆಧಾರವಾಗಿದ್ದವರ ಆಕಸ್ಮಿಕ ಅಗಲಿಕೆ ಅವರ ಕುಟುಂಬವನ್ನು ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ತಳ್ಳಿದೆ. ಪತ್ರಕರ್ತರ ಸಂಘ ಹಾಗೂ ನಾಗರಿಕರು ಜಿಲ್ಲಾಡಳಿತವನ್ನು ತಕ್ಷಣವೇ ಸ್ಪಂದಿಸುವಂತೆ ಆಗ್ರಹಿಸಿ ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಧನ ಬಿಡುಗಡೆ ಮಾಡಬೇಕು. ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರ್ಕಾರ ಹೊತ್ತುಕೊಳ್ಳಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಈ ಘಟನೆಯು ಸಾಮಾನ್ಯ ಅಪಘಾತವಲ್ಲ, ಬದಲಿಗೆ ಪತ್ರಕರ್ತರ ಧ್ವನಿಯನ್ನು ತಗ್ಗಿಸಲು ನಡೆದ ಸಂಚು ಆಗಿರಬಹುದೆಂಬ ಶಂಕೆ ಹೆಚ್ಚುತ್ತಿದೆ. ನ್ಯಾಯ ದೊರೆಯುವವರೆಗೂ ಈ ಹೋರಾಟ ಮುಂದುವರಿಯುತ್ತದೆ ಎಂದು ನಮ್ಮ ಪತ್ರಕರ್ತರ ಸಂಘವು ಸ್ಪಷ್ಟಪಡಿಸಿದೆ. ನರಸಿಂಹಮೂರ್ತಿಯವರ ಅಗಲಿಕೆಯಿಂದಾಗಿ ಬಾಗೇಪಲ್ಲಿ ತಾಲೂಕು ಪತ್ರಕರ್ತ ವಲಯವಷ್ಟೇ ಅಲ್ಲದೆ, ಸಮಗ್ರ ಜಿಲ್ಲೆಯ ಪತ್ರಿಕಾ ಕ್ಷೇತ್ರವೇ ದುಃಖದಲ್ಲಿ ಮಡುಗಟ್ಟಿದೆ ಎಂದು ಹೇಳಿದರು.ಇದೇ ವೇಳೆ ಪತ್ರಕರ್ತರ ಸಂಘವು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳಾದ ಕುಶಾಲ್ ಚೌಕ್ಸೆ ಹಾಗೂ ಜಿಲ್ಲಾಧಿಕಾರಿ ರವೀಂದ್ರ ಅವರಿಗೆ ಪತ್ರಕರ್ತರ ಸಂಘದ ವತಿಯಿಂದ ಮನವಿ ಸಲ್ಲಿಸಿ, ತಕ್ಷಣವೇ ತನಿಖೆ ಆರಂಭಿಸುವಂತೆ ಒತ್ತಾಯಿಸಿದರು.