ಕಲ್ಯಾಣಿಗೆ ಜೀವ ಕಳೆ ನೀಡಿದ ನರೇಗಾ, ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್: ನಂದೀಶ್ ಗೌಡ

KannadaprabhaNewsNetwork |  
Published : Sep 25, 2025, 01:00 AM IST
24ಕೆಎಂಎನ್ ಡಿ13 | Kannada Prabha

ಸಾರಾಂಶ

ಶ್ರೀಮಂಚಮ್ಮ ಹಾಗೂ ಶ್ರೀಬಸವೇಶ್ವರ ದೇವಾಲಯಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದ ದೇವರ ಕಟ್ಟೆ ಹಲವು ವರ್ಷಗಳಿಂದ ಜೀವ ಜಲವಿದ್ದರೂ ನಿರ್ವಹಣೆ ಕೊರತೆಯಿಂದ ತ್ಯಾಜ್ಯ ರಾಶಿಯಲ್ಲಿ ಮುಚ್ಚಿ ಹೋಗಿತ್ತು. ಹಬ್ಬ ಹರಿದಿನಗಳಲ್ಲಿ ದೇವಾಲಯಗಳ ಪೂಜಾ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ ಕಲ್ಯಾಣಿ ಅಭಿವೃದ್ಧಿಗೆ ಗ್ರಾಪಂ ಸಭೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ನಿರ್ಣಯ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಹುಳಗನಹಳ್ಳಿಯಲ್ಲಿ ನರೇಗಾ ಹಾಗೂ ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಅಂದಾಜು 25 ಲಕ್ಷ ರು.ವೆಚ್ಚದಲ್ಲಿ ಕಲ್ಯಾಣಿಯನ್ನು ಲೋಕಾರ್ಪಣೆ ಮಾಡುವ ಮೂಲಕ ಭಕ್ತಾದಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ನಂದೀಶ್ ಗೌಡ ತಿಳಿಸಿದರು.

ತಾಲೂಕಿನ ಹೆಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಳಗನಹಳ್ಳಿಯಲ್ಲಿ ನರೇಗಾ ಮತ್ತು ಟ್ರಸ್ಟ್‌ನಿಂದ ಅಭಿವೃದ್ಧಿ ಪಡಿಸಿರುವ ಕಲ್ಯಾಣಿಯನ್ನು ಗ್ರಾಪಂ ಅಧ್ಯಕ್ಷೆ ವೀಣಾರೊಂದಿಗೆ ಲೋಕಾರ್ಪಣೆ ಮಾಡಿ ಮಾತನಾಡಿದರು.

ಗ್ರಾಮದ ಶ್ರೀಮಂಚಮ್ಮ ಹಾಗೂ ಶ್ರೀಬಸವೇಶ್ವರ ದೇವಾಲಯಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದ ದೇವರ ಕಟ್ಟೆ ಹಲವು ವರ್ಷಗಳಿಂದ ಜೀವ ಜಲವಿದ್ದರೂ ನಿರ್ವಹಣೆ ಕೊರತೆಯಿಂದ ತ್ಯಾಜ್ಯ ರಾಶಿಯಲ್ಲಿ ಮುಚ್ಚಿ ಹೋಗಿತ್ತು. ಹಬ್ಬ ಹರಿದಿನಗಳಲ್ಲಿ ದೇವಾಲಯಗಳ ಪೂಜಾ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ ಕಲ್ಯಾಣಿ ಅಭಿವೃದ್ಧಿಗೆ ಗ್ರಾಪಂ ಸಭೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ನಿರ್ಣಯ ಮಾಡಲಾಗಿತ್ತು ಎಂದರು.

ಕಲ್ಯಾಣಿ ಅಭಿವೃದ್ಧಿಗೆ 25 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ರೂಪುರೇಷೆ ಸಿದ್ಧವಾಯಿತು. ನರೇಗಾ ಮತ್ತು ಪಂಚಾಯ್ತಿಯಿಂದ 13 ಲಕ್ಷ ರು. ಅನುದಾನ ಬಿಡುಗಡೆಯಾಯಿತು. ಇಷ್ಟು ಅನುದಾನದಲ್ಲಿ ಅಭಿವೃದ್ಧಿ ಸಾಧ್ಯವಾಗದ ಕಾರಣ ಉಳಿಕೆ 12 ಲಕ್ಷ ಹಣವನ್ನು ಕೃಷ್ಣೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸಲಾಗಿದೆ ಎಂದರು.

ಗ್ರಾಮಗಳ ಅಭಿವೃದ್ಧಿಗೆ ಸಂಘ ಸಂಸ್ಥೆಗಳು ಸಹ ಕೈ ಜೋಡಿಸಿದರೆ ಮಾತ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲು ಸಾಧ್ಯ. ಈಗಾಗಲೇ ಟ್ರಸ್ಟ್‌ನಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಮೂಲ ಸೌಲಭ್ಯ, ಶಾಲಾ ಮಕ್ಕಳಿಗೆ ಮೊಟ್ಟೆ, ಆಟೋ ವ್ಯವಸ್ಥೆ ಹಾಗೂ ಸಮವಸ್ತ್ರಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಮುಂದೆಯೂ ಟ್ರಸ್ಟ್‌ನಿಂದ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಒಂದು ಕಾಲದಲ್ಲಿ ರೈತರು ಬೇಸಾಯ ಮಾಡುವ ಮುಂಚೆ ಕಲ್ಯಾಣಿಯ ನೀರನ್ನು ಹಾಕಿ ಪೂಜೆ ಸಲ್ಲಿಸಿದರೆ ಉತ್ತಮ ಇಳುವರಿ ಬರುತ್ತದೆ ಎಂಬ ನಂಬಿಕೆ ಬೇರೂರಿತ್ತು. ಅನಾರೋಗ್ಯಕ್ಕಿಡಾದವರು ಕಲ್ಯಾಣಿಯ ನೀರನ್ನು ಕುಡಿದರೆ ಗುಣಮುಖರಾಗುತ್ತಾರೆ ಎಂಬ ನಂಬಿಕೆಯೂ ಇತ್ತು. ಧಾರ್ಮಿಕ ಶ್ರದ್ಧಾ ಕೇಂದ್ರ ಹಾಗೂ ಕುಡಿಯುವ ನೀರಿನ ಮೂಲವಾಗಿದ್ದ ಕಲ್ಯಾಣಿ ಕಾಲ ಕ್ರಮೇಣ ನಿರ್ಲಕ್ಷ್ಯಕ್ಕೆ ಒ‌ಳಗಾಗಿ ಜೀವ ಜಲ ಇದ್ದರೂ ಕಸ, ಕಡ್ಡಿಗಳಿಂದ ಹೂಳು ತುಂಬಿ ತ್ಯಾಜ್ಯ ರಾಶಿಯಲ್ಲಿ ಬಹುತೇಕ ಮುಚ್ಚಿ ಹೋಗಿದ್ದವು. ಈಗ ಕಲ್ಯಾಣಿಗೆ ಹೊಸ ಕಳೆ ಬಂದಂದಾಗಿದೆ.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ಮಧುಸೂಧನ್, ಸದಸ್ಯರಾದ ಅಪ್ಪಾಜಿಗೌಡ, ಚಲುವರಾಜು, ಸೌಭಾಗ್ಯಮ್ಮ, ಜ್ಯೋತಿ ಪಿಡಿಒ ಲೀಲಾವತಿ, ಸಿಬ್ಬಂದಿ ಜಗದೀಶ್ ಗ್ರಾಮದ ಮುಖಂಡರು ಇದ್ದರು.

PREV

Recommended Stories

ಪಾಲಿಕೆಗಳ ಚುನಾವಣೆ ಮುಗಿವವರೆಗೆ ಬೆಂಗಳೂರಲ್ಲಿ ಮತಪಟ್ಟಿ ಪರಿಷ್ಕರಣೆ ಮುಂದೂಡಿ : ಕೇಂದ್ರ ಆಯುಕ್ತರಿಗೆ ಪತ್ರ
ಡ್ರಾಪ್‌ ನೆಪದಲ್ಲಿ ಗುತ್ತಿಗೆದಾರನ ದರೋಡೆ ಮಾಡಿದ್ದ ನಾಲ್ವರ ಬಂಧನ