ತೋಟಗಾರಿಕೆ ವಿಶ್ವವಿದ್ಯಾಲಯ ಒಡೆಯುವ ಷಡ್ಯಂತ್ರ: ಹಣಮಂತ ನಿರಾಣಿ ಆರೋಪ

KannadaprabhaNewsNetwork |  
Published : Aug 08, 2025, 02:00 AM IST
ಹಣಮಂತ ನಿರಾಣಿ | Kannada Prabha

ಸಾರಾಂಶ

ರಾಜ್ಯದಲ್ಲಿ ತೋಟಗಾರಿಕೆಯ ಏಕೈಕ ವಿಶ್ವವಿದ್ಯಾಲಯವಿದ್ದು, ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆಯ ವರದಿ ಆಧರಿಸಿ ಉತ್ತರ ಕರ್ನಾಟಕದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯ ಒಡೆಯುವ ಷಡ್ಯಂತ್ರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ರಾಜ್ಯದಲ್ಲಿ ತೋಟಗಾರಿಕೆಯ ಏಕೈಕ ವಿಶ್ವವಿದ್ಯಾಲಯವಿದ್ದು, ಸಮಗ್ರ ಕೃಷಿ ವಿಶ್ವವಿದ್ಯಾಲಯಗಳ ರಚನೆಯ ವರದಿ ಆಧರಿಸಿ ಉತ್ತರ ಕರ್ನಾಟಕದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯ ಒಡೆಯುವ ಷಡ್ಯಂತ್ರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ತಿಳಿಸಿದರು.

ಇಲ್ಲಿನ ಬೀಳಗಿ ಕ್ರಾಸ್ ಬಳಿಯಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಸಮಿತಿ ರಚಿಸಿ ಕೆಲ ತಿಂಗಳ ಕಾಲ ಅಧ್ಯಯನ ಮಾಡಿ ಸಮಗ್ರ ಕೃಷಿ ವಿಶ್ವವಿದ್ಯಾಲಯ ರಚನೆಯಾಗಬೇಕು ಎಂದು ವರದಿ ಸಿದ್ಧಪಡಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಗಳು ಬಂದಿವೆ. ಈ ಹಿಂದೆ ಸರ್ಕಾರ ಇಂತಹ ತೀರ್ಮಾನ ಮಾಡಿದ್ದಕ್ಕೆ ಉಭಯ ಸದನದಲ್ಲಿ ಸಮಗ್ರ ಕೃಷಿ ವಿಶ್ವವಿದ್ಯಾಲಯ ಅಗತ್ಯವಿಲ್ಲ ಎಂದು ವಿರೋಧಿಸಲಾಗಿತ್ತು ಎಂದರು.ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಸಚಿವ ಸಂಪುಟದಲ್ಲಿ ಮತ್ತು ಅದೇ ತಿಂಗಳ ಉಭಯ ಸದನಗಳ ಅಧಿವೇಶನದಲ್ಲಿ ಸಂಬಂಧಪಟ್ಟ ಸಚಿವರು ಮತ್ತು ಸರ್ಕಾರ ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಪ್ರತ್ಯೇಕವಾಗಿ ಇಡಲಾಗುವುದು ಮತ್ತು ತೋಟಗಾರಿಕೆಯನ್ನು ಕೃಷಿಯೊಂದಿಗೆ ಸಮಗ್ರಗೊಳಿಸುವುದನ್ನು ಕೈಬಿಡಲಾಗಿದೆ ಎಂದು ಲಿಖಿತ ರೂಪದಲ್ಲಿ ತಿಳಿಸಿದ್ದು, ಇದು ದಾಖಲೆಯಲ್ಲೂ ಇದೆ. ಈ ಸಮಿತಿಯಲ್ಲಿ ಕೆಲ ತಜ್ಞ ಸದಸ್ಯರ ಒಮ್ಮತವಿಲ್ಲದಿದ್ದರೂ ಸಮಗ್ರ ಕೃಷಿ ವಿವಿ ರಚನೆ ವರದಿ ಸಿದ್ಧಮಾಡಿದ್ದು ಅವೈಜ್ಞಾನಿಕವಾಗಿದೆ. ಈ ವರದಿಯನ್ನು ಸರ್ಕಾರ ಪಡೆದುಕೊಂಡರೆ ಈ ಹಿಂದೆ ಇದೇ ಸರ್ಕಾರ ಈ ವಿಷಯವಾಗಿ ಹೇಳಿಕೆ ನೀಡಿದ್ದು ಕಡತದಲ್ಲಿದ್ದು, ಇದು ಸದನದ ಹಕ್ಕುಚ್ಯುತಿ ಮಾಡಿದಂತೆ ಎಂದು ಹೇಳಿದರು.

ತೋಟಗಾರಿಕೆ ವಿವಿಯಿಂದ ಸಮಗ್ರ ಅಭಿವೃದ್ಧಿ:

ದೇಶದಲ್ಲಿ ಹಿಮಾಚಲಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾತ್ರ ತೋಟಗಾರಿಕೆ ವಿಶ್ವವಿದ್ಯಾಲಯ ಇದ್ದು, ನಮ್ಮ ಉತ್ತರ ಕರ್ನಾಟಕದಲ್ಲಿರುವ ಈ ವಿಶ್ವವಿದ್ಯಾಲಯ ದೇಶದ 3ನೇ ಹಾಗೂ ರಾಜ್ಯದ ಮೊದಲ ತೋಟಗಾರಿಕೆ ವಿಶ್ವವಿದ್ಯಾಲಯ ಆಗಿದೆ. ರಾಜ್ಯದಲ್ಲಿ ೯ ತೋಟಗಾರಿಕೆ ಮಹಾವಿದ್ಯಾಲಯ, ೧೨ ಸಂಶೋಧನಾ ಕೇಂದ್ರಗಳು, ೭ ಸಮನ್ವಯ ಸಂಶೋಧನಾ ಕೇಂದ್ರಗಳು, ೨ ಉತ್ಕೃಷ್ಟ ಸಂಶೋಧನಾ ಕೇಂದ್ರಗಳು, ೧ ಕೃಷಿ ವಿಜ್ಞಾನ ಕೇಂದ್ರ, ೧೨ ವಿಸ್ತರಣೆ ಶಿಕ್ಷಣ ಘಟಕಗಳನ್ನು ಆರಂಭಿಸಿ ರಾಜ್ಯದ ೨೪ ಜಿಲ್ಲೆಯಲ್ಲಿ ತನ್ನ ಸೇವೆ ಒದಗಿಸುತ್ತಿದೆ. ೨೦೦೮ರಲ್ಲಿ ಆರಂಭಗೊಂಡ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ರೈತರಿಗೆ, ಸಂಶೋಧನೆಗೆ ಬಹಳ ಅಗತ್ಯವಿದೆ. ಹೀಗೆ ಇದ್ದಾಗಲೂ ಸರ್ಕಾರ ವರದಿ ಸ್ವೀಕರಿಸಿ ಅದನ್ನು ಪರಿಶೀಲಿಸುವುದು ಸೂಕ್ತವಲ್ಲ. ವಿಜಯಭಾಸ್ಕರ್ ಅವರು ನೀಡಿರುವ ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ವಿಜಯಭಾಸ್ಕರ್ ವರದಿ ತಿರಸ್ಕರಿಸಿ: ನಿವೃತ್ತ ಐಎಎಸ್ ಅಧಿಕಾರಿ ವಿಜಯಭಾಸ್ಕರ್ ಅವರು ತೋಟಗಾರಿಕೆ, ಕೃಷಿ, ಅರಣ್ಯ ಮತ್ತು ಪಶುಸಂಗೋಪನೆ ಒಳಗೊಂಡ ಸಮಗ್ರ ಕೃಷಿ ವಿಶ್ವವಿದ್ಯಾಲಯ ರಚನೆ ಆಗಬೇಕು ಎಂದು ವರದಿ ನೀಡಿದ್ದಾರೆ. ಹಾಗಾದರೆ ಈ ಐದು ಇಲಾಖೆಗಳನ್ನು ಸೇರಿಸಿ ಒಂದೇ ಸಚಿವಾಲಯ ಮಾಡಲು ವರದಿಯಲ್ಲಿ ತಿಳಿಸಿದ್ದಾರೆಯೇ ಎಂದು ಜನ ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ವರದಿಯಿಂದ ಉದ್ದೇಶ ಪೂರ್ವಕವಾಗಿ ತೋಟಗಾರಿಕೆ ವಿಶ್ವವಿದ್ಯಾಲಯ ಒಡೆಯುವ ಷಡ್ಯಂತ್ರವಾಗಿದ್ದು, ಸರ್ಕಾರ ಈ ತಜ್ಞರ ವರದಿ ಸ್ವೀಕರಿಸಬಾರದು. ಈ ಸಮಿತಿಯ ವರದಿಯನ್ನು ಕೂಡಲೇ ಅನೂರ್ಜಿತಗೊಳಿಸುವುದು ಸೂಕ್ತವಾಗಿದೆ ಎಂದು ಹಣಮಂತ ನಿರಾಣಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ