ಕನ್ನಡಪ್ರಭ ವಾರ್ತೆ ಮಳವಳ್ಳಿ
ಐತಿಹಾಸಿಕ ಪರಂಪರೆ ಹಾಗೂ ಇತಿಹಾಸವುಳ್ಳ ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಪಿತೂರಿ ನಡೆಯುತ್ತಿರುವುದು ಸರಿಯಲ್ಲ. ಸರ್ಕಾರ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಂದೂರು ಬೆಟ್ಟದ ಸುಕ್ಷೇತ್ರ ರಸಸಿದ್ದೇಶ್ವರ ಮಠದ ನಂಜುಂಡಸ್ವಾಮಿ ಒತ್ತಾಯಿಸಿದರು.ತಾಲೂಕಿನ ಕಂದೂರು ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಿಚಿತ ವ್ಯಕ್ತಿ ನೀಡಿರುವ ದೂರಿನ ಬಗ್ಗೆ ಸರ್ಕಾರ ಎಸ್ಐಟಿ ರಚಿಸಿ ತನಿಖೆ ನಡೆಸುತ್ತಿದೆ. ತನಿಖಾ ವರದಿಯಲ್ಲಿ ತಪ್ಪಿತಸ್ಥರು ಯಾರೆಂದು ತಿಳಿಯಲಿದೆ. ಆದರೆ, ಕೆಲ ಕಿಡಿಗೇಡಿಗಳು ಹಾಗೂ ಮತಾಂಧ ಶಕ್ತಿಗಳು ಧರ್ಮಸ್ಥಳ ಕ್ಷೇತ್ರದ ಹಾಗೂ ಧರ್ಮಾಧಿಕಾರಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇಂತಹ ಹೇಳಿಕೆಗಳು ಕೋಟ್ಯಂತರ ಭಕ್ತರ ಧಾರ್ಮಿಕ ನಂಬಿಕೆಗೆ ನೋವನ್ನುಂಟು ಮಾಡುತ್ತದೆ. ಕಿಡಿಗೇಡಿಗಳ ವಿರುದ್ಧ ಕ್ರಮ ಆಗ್ರಹಿಸಿ ಆ.11ರಂದು ಮಂಡ್ಯದ ಸಿಲ್ವರ್ ಜುಬಲಿ ಪಾರ್ಕ್‌ನಿಂದ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.ಅಪರಿಚಿತ ವ್ಯಕ್ತಿಯ ದೂರು ಕಟ್ಟು ಕಥೆಯಂತಿದೆ. ದಿನನಿತ್ಯ ನಡೆಯುತ್ತಿರುವ ಘಟನೆಗಳಿಂದ ಇದೊಂದು ದುರುದ್ದೇಶ ಪೂರಿತ ಹಾಗೂ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲು ಕಿಡಿಗೇಡಿಗಳ ರೂಪಿಸಿರುವ ಷಡ್ಯಂತ್ರವಾಗಿದೆ ಎಂಬುವುದು ಜನರಿಗೆ ಗೊತ್ತಾಗುತ್ತಿದೆ ಎಂದರು.ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ದಾಳಿ ಮಾಡುತ್ತಿರುವ ಇಂತಹ ಘಟನೆಯನ್ನು ರಾಜ್ಯದ ಜನತೆ ಖಂಡಿಸಬೇಕು. ಅಪಪ್ರಚಾರಕ್ಕೆ ಅಸ್ಪದ ನೀಡದೇ ಹಿಂದೂಗಳು ಜಾಗೃತರಾಗುವಂತೆ ಅರಿವು ಮೂಡಿಸಲು ಮುಂದಾಗಿದ್ದೇವೆ ಎಂದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರ, ನಿಂದನೆ, ಆರೋಪ ಮಾಡುವನ್ನು ನಿಲ್ಲಸಬೇಕು. ಅಪಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಚ್ಯುತಿ ಬಾರದಂತೆ ಕ್ರಮವಹಿಸುವಂತೆ ಆಗ್ರಹಿಸಿ ಆ.11ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಎಲ್ಲ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಭಕ್ತರು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಮನವಿ ಮಾಡಿದರು.