ಲಕ್ಷ್ಮೇಶ್ವರ: ಹಿಂದೂ ಧರ್ಮ ಹಾಳು ಮಾಡಲು ಸಾವಿರಾರು ವರ್ಷಗಳಿಂದ ಷಡ್ಯಂತ್ರ ನಡೆಯುತ್ತಿದ್ದು, ಇದು ಸಾಧ್ಯವಿಲ್ಲ. ಹಿಂದೂ ಧರ್ಮ ಎಂದಿಗೂ ನಾಶವಾಗುವುದಿಲ್ಲ ಎಂದು ಬೆಳ್ಳಟ್ಟಿಯ ಬಸವರಾಜ ಸ್ವಾಮಿಗಳು ಹೇಳಿದರು.
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. ಹಿಂದೂ ಧರ್ಮ ಹಾಳು ಮಾಡಲು ವ್ಯವಸ್ಥಿತವಾದ ಸಂಚು ನಡೆಯುತ್ತಿದೆ. ಬಹಳ ದಿನಗಳಿಂದ ಹಿಂದೂ ಧರ್ಮದ ಹಾಳು ಮಾಡಲು ವ್ಯವಸ್ಥಿತವಾದ ಸಂಚು ನಡೆಯುತ್ತಿದೆ. ಹಿಂದೂ ಧರ್ಮ ಇದಕ್ಕೆ ತಕ್ಕ ಉತ್ತರ ನೀಡುತ್ತ ಬರುತ್ತಿದೆ ಎಂದು ಹೇಳಿದರು.ಹಿಂದೂ ಧರ್ಮ ಅತ್ಯಂತ ಪುರಾತನ ಹಾಗೂ ಸರ್ವ ಧರ್ಮೀಯರಿಗೆ ಒಳಿತು ಬಯಸುವ ಧರ್ಮವಾಗಿದೆ. ಹೀಗಾಗಿ ಹಿಂದೂ ಧರ್ಮದ ವಿರುದ್ಧ ಹಲವು ಮತೀಯವಾದಿಗಳು ಸಂಚು ನಡೆಸುತ್ತಿದ್ದಾರೆ. ಈಗ ಧರ್ಮಸ್ಥಳದ ಅಭಿವೃದ್ಧಿ ಸಹಿಸದ ಕೆಲವರು ಕುತಂತ್ರ ನಡೆಸುತ್ತಿದ್ದಾರೆ. ಧರ್ಮಸ್ಥಳದ ವಿರುದ್ಧ ಬುರುಡೆ ಗ್ಯಾಂಗ್ ನಡೆಸುತ್ತಿರುವ ಷಡ್ಯಂತ್ರದ ವಿರುದ್ಧ ಹಿಂದೂಗಳು ಸಿಡಿದೇಳುವ ಕಾಲ ಈಗ ಕೂಡಿ ಬಂದಿದೆ. ಹಿಂದೂಗಳು ಒಗ್ಗಟ್ಟಾಗಿ ಹೋರಾಡುವುದು ಅಗತ್ಯವಾಗಿದೆ. ಸರ್ಕಾರ ಮಠ-ಮಾನ್ಯಗಳನ್ನು ವಶಕ್ಕೆ ಪಡೆಯುವ ಕಾರ್ಯ ಮಾಡುತ್ತಿರುವುದು ನೋವಿನ ಸಂಗತಿ. ಹಿಂದೂ ಧರ್ಮೀಯರು ಶಾಂತಪ್ರಿಯರಾಗಿದ್ದಾರೆ ಎಂದು ಕೆಣಕುವ ಕಾರ್ಯ ನಿಲ್ಲಬೇಕು. ಬೇರೆ ಧರ್ಮಗಳ ಮಸೀದಿ, ಚರ್ಚುಗಳನ್ನು ಸರ್ಕಾರ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿ ನೋಡಿ ಎಂದು ಸವಾಲು ಹಾಕಿದರು.
ದಿಂಗಾಲೇಶ್ವರ ಸ್ವಾಮಿಗಳು ದೂರವಾಣಿ ಮೂಲಕ ಮಾತನಾಡಿ, ಹಿಂದೂ ಧರ್ಮದ ಜನರನ್ನು ದಿಕ್ಕು ತಪ್ಪಿಸುವ ವ್ಯವಸ್ಥಿತವಾದ ಸಂಚು ನಡೆದಿದೆ. ಹಿಂದೂಗಳ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ನಿಲ್ಲಬೇಕು ಎಂದು ಹೇಳಿದರು.ಹೂವಿನ ಶಿಗ್ಲಿಯ ಚನ್ನವೀರ ಸ್ವಾಮಿಗಳು ಮಾತನಾಡಿ, ನಾಡಿನ ಪುಣ್ಯಕ್ಷೇತ್ರಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಷಡ್ಯಂತ್ರ ತಡೆಯುವಲ್ಲಿ ಉಗ್ರ ಹೋರಾಟಕ್ಕೆ ನಾವು ಹಿಂಜರಿಯುವುದಿಲ್ಲ. ನಾಡಿನ ಮಠ-ಮಾನ್ಯಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಕಾರ್ಯ ನಿಲ್ಲಬೇಕು ಎಂದು ಹೇಳಿದರು.
ಗಂಜಿಗಟ್ಟಿಯ ಸ್ವಾಮಿಗಳು, ಆದರಳ್ಳಿಯ ಕುಮಾರ ಸ್ವಾಮಿಗಳು, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಪೂರ್ಣಾಜಿ ಕರಾಟೆ, ಬಸವೇಶ ಮಹಾಂತಶೆಟ್ಟರ, ಬಸಣ್ಣ ಬೆಂಡಿಗೇರಿ ಮಾತನಾಡಿದರು.ಪ್ರತಿಭಟನಾ ಮೆರವಣಿಗೆ ಪಟ್ಟಣದ ಹಾವಳಿ ಹನುಮಪ್ಪನ ದೇವಸ್ಥಾನದಿಂದ ಆರಂಭವಾಗಿ ಬಜಾರ ರಸ್ತೆಯ ಮೂಲಕ ಹೊಸ ಬಸ್ ನಿಲ್ದಾಣಕ್ಕೆ ಬಂದು ಸಭೆಯಾಗಿ ಮಾರ್ಪಟ್ಟಿತು. ಸಭೆಯ ಆನಂತರ ಗ್ರೇಡ್-2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಚಂಬಣ್ಣ ಬಾಳಿಕಾಯಿ, ಕಿರಣ ನವಲೆ, ಗಿರೀಶ ಅಗಡಿ, ಹೊನ್ನಪ್ಪ ವಡ್ಡರ, ರಾಜು ಕುಂಬಿ, ಪ್ರವೀಣ ಬಾಳಿಕಾಯಿ, ಟಾಕಪ್ಪ ಸಾತಪೂತೆ, ಎನ್.ಎನ್. ಬಾಡಗಿ, ಈರಣ್ಣ ಅಂಕಲಕೋಟಿ, ಅಭಯ ಜೈನ, ನಾರಾಯಣಸಾ ಪವಾರ, ತಿಪ್ಪಣ್ಣ ಸಂಶಿ, ಪವನ ಬಂಕಾಪುರ, ರವಿಕಾಂತ ಅಂಗಡಿ, ಕರ್ಜಕ್ಕಣ್ಣವರ, ಅಮರಪ್ಪ ಗುಡಗುಂಟಿ, ಶೈಲಾ ಆದಿ, ಮಲ್ಲೇಶಪ್ಪ ಅಂಕಲಿ, ಸಿ.ಆರ್. ಲಕ್ಕುಂಡಿಮಠ, ಸಂತೋಷ ಗೋಗಿ, ಅಶೋಕ ಬಟಗುರ್ಕಿ, ಮಂಜುಳಾ ಗಾಡದ, ಲಕ್ಷ್ಮೀಬಾಯಿ ಸಾತಪುತೆ. ಮಾಲಾ ಸಾತಪೂತೆ, ಫಕ್ಕೀರವ್ವ ಭಜಂತ್ರಿ, ಗಂಗಮ್ಮ ಪಾಟೀಲ ಹಾಗೂ ಅರಳು ವಿಶೇಷ ಚೇತನ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.