ಗದಗ: ಬಸವಣ್ಣನವರನ್ನು ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಬಸವಣ್ಣನ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಷಡ್ಯಂತ್ರ ನಡೆಯುತ್ತಿದೆ ಎಂದು ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಬಸವಣ್ಣನವರು ಮನಸ್ಸನ್ನು ಅಂತರ್ಮುಖಗೊಳಿಸಲು ಸಾವಿರಾರು ವಚನಗಳನ್ನು ನೀಡಿದ್ದಾರೆ. ದೇವನೊಬ್ಬ ನಾಮ ಹಲವು ಎಂದು ಸಾರಿದ ಅವರು ಎಲ್ಲರಲ್ಲಿಯೂ ಏಕತೆಯ ಸಂದೇಶ ಬಿತ್ತಿದ್ದಾರೆ. ಆದರೆ ಅವರ ಹೆಸರನ್ನು ಬಳಸಿಕೊಂಡು ಷಡ್ಯಂತ್ರ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಕೆಲವರು ಬಸವಣ್ಣನವರ ಹೆಸರನ್ನು ಬಳಸಿಕೊಂಡು ಹಿಂದೂ ಸಮಾಜ ಹಾಗೂ ಶೈವ ಪರಂಪರೆಯಿಂದ ಜನರನ್ನು ದೂರ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಷ್ಟು ದಿನ ಕಮ್ಯುನಿಸ್ಟ್ ಚಿಂತನೆಗಳು ಬಸವಣ್ಣನವರ ಧ್ವಜ ಹಿಡಿದು ಓಡಾಡಿದ್ದವು. ಆದರೆ ಹಿಂದೂ ಸಮಾಜವನ್ನು ವಿರೋಧಿಸುವ ಉದ್ದೇಶದಿಂದ ಕೆಲವರು ಪ್ರತ್ಯೇಕ ಧ್ವಜ ಹಿಡಿದಿದ್ದಾರೆ. ಕೆಲವು ಅತೃಪ್ತ ಆತ್ಮಗಳು ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಬಸವಣ್ಣನವರ ಹೆಸರಿನಲ್ಲಿ ಸಮಾಜ ಮತ್ತು ಧರ್ಮವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿದ್ದು, ಅವರ ನುಡಿಗಳಿಗಿಂತ ನಡತೆಗಳು ಭಿನ್ನವಾಗಿವೆ. ಹಿಂದೂ ಧರ್ಮವನ್ನು ಛಿದ್ರಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ವಿರುದ್ಧ ಜಾಗೃತಿ ಮೂಡಿಸಲು ಈ ಸಮಾವೇಶ ಆಯೋಜಿಸಲಾಗಿದೆ. ದೇಶ ಕೆಟ್ಟವರಿಂದ ಹಾಳಾಗುವುದಿಲ್ಲ, ಎಲ್ಲವನ್ನೂ ತಿಳಿದಿದ್ದೇವೆ ಎನ್ನುವವರಿಂದಲೇ ಹೆಚ್ಚು ಹಾನಿಯಾಗುತ್ತದೆ ಎಂದು ಶ್ರೀಗಳು ಆತಂಕ ವ್ಯಕ್ತಪಡಿಸಿದರು.ಇಂದು ಬಸವಾದಿ ಶರಣರ ಸಮಾವೇಶ ಎಂಬ ಹೆಸರೇ ಕೆಲವರಿಗೆ ಅಸಹನೀಯವಾಗುತ್ತಿದೆ. ದೇಶದ ಕೆಲ ಮಹಾಪುರುಷರನ್ನು ಕೆಲವು ಗುಂಪುಗಳು ಗುತ್ತಿಗೆ ಪಡೆದಂತೆ ವರ್ತಿಸುತ್ತಿವೆ. 64 ಸಮಾಜಗಳ ಜನರು 64 ಬಗೆಯ ಕಾಯಕಗಳನ್ನು ಮಾಡುತ್ತಿದ್ದು, ಎಲ್ಲ ಸಮಾಜಗಳನ್ನು ಒಗ್ಗೂಡಿಸಿ ಗದಗ ಹಿಂದೂ ಸಮಿತಿಯವರು ದೇಶಕ್ಕೇ ಮಾದರಿಯಾಗುವ ಕಾರ್ಯಕ್ರಮ ನಡೆಸಿದ್ದಾರೆ ಎಂದು ಶ್ಲಾಘಿಸಿದರು.
ವೇದಗಳು, ಪುರಾಣಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ನಿಂದಿಸುವವರಿಂದ ಸಮಾಜ ಎಚ್ಚರಿಕೆಯಿಂದಿರಬೇಕು. ರಾಮಾಯಣದ ಮಹತ್ವವನ್ನು ಬಸವಣ್ಣನವರು ತಮ್ಮ ವಚನಗಳಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ. ಬಸವಣ್ಣನವರ ಕುರಿತು ತಪ್ಪು ಪ್ರಚಾರ ಮಾಡುವವರು ಮುಕ್ತ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಖಾವಿ ಧರಿಸಿ ಹೊಸ ಧರ್ಮ ಕಟ್ಟುವ ಪ್ರಯತ್ನ ಮಾಡುವವರು ಮೊದಲು ಖಾವಿಯ ಅರ್ಥ ಅರಿಯಬೇಕು. ಖಾವಿ, ಖಾಕಿ ಮತ್ತು ರುದ್ರಾಕ್ಷಿ ಸನಾತನ ಧರ್ಮದ ಸಂಕೇತಗಳಾಗಿವೆ. ಆಗಮಶಾಸ್ತ್ರವೇ ಪೂಜೆ, ಮಂತ್ರೋಚ್ಚಾರ ಮತ್ತು ಆರಾಧನೆಯ ಮೂಲವಾಗಿದೆ. ಹಿಂದೂ ದೇವತೆಗಳನ್ನು ಅವಮಾನಿಸುವವರ ವಿರುದ್ಧ ಸಮಾಜವನ್ನು ಜಾಗೃತಗೊಳಿಸುವ ಉದ್ದೇಶದಿಂದಲೇ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಕಾಡಸಿದ್ದೇಶ್ವರ ಶ್ರೀಗಳು ಹೇಳಿದರು.