ಆಂತರಿಕ, ಬಾಹ್ಯ ಶಕ್ತಿಗಳಿಂದ ಸಮಾಜ ಒಡೆಯುವ ಪಿತೂರಿ: ಕೃಷ್ಣ ಜೋಶಿ

KannadaprabhaNewsNetwork |  
Published : Feb 02, 2026, 02:00 AM IST
ಹುಬ್ಬಳ್ಳಿ ಮೂರುಸಾವಿರ ಮಠದ ಆವರಣದಲ್ಲಿ ಭಾನುವಾರ ಸಂಜೆ ನಡೆದ ಹಿಂದೂ ಸಮ್ಮೇಳನಕ್ಕೆ ಗಣ್ಯರು ಚಾಲನೆ ನೀಡಿದರು. | Kannada Prabha

ಸಾರಾಂಶ

ನಮ್ಮದು ಸಮೃದ್ಧ, ಸಂಸ್ಕಾರ ಹಾಗೂ ಸಭ್ಯತೆಯ ರಾಷ್ಟ್ರ. ಇಂಥ ಸಮಾಜವನ್ನು ಒಡೆಯುವ ಪಿತೂರಿ ಹೊರ ಹಾಗೂ ಒಳಗಡೆಯಿಂಡ ನಡೆಯುತ್ತಿದೆ ಎಂದು ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ: ನಮ್ಮದು ಸಮೃದ್ಧ, ಸಂಸ್ಕಾರ ಹಾಗೂ ಸಭ್ಯತೆಯ ರಾಷ್ಟ್ರ. ಇಂಥ ಸಮಾಜವನ್ನು ಒಡೆಯುವ ಪಿತೂರಿ ಹೊರ ಹಾಗೂ ಒಳಗಡೆಯಿಂಡ ನಡೆಯುತ್ತಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖ ಕೃಷ್ಣ ಜೋಶಿ ಅಭಿಪ್ರಾಯಪಟ್ಟರು.

ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಭಾನುವಾರ ಸಂಜೆ ಮೂರುಸಾವಿರ ಮಠ ನಗರ ಹಿಂದೂ ಸಮ್ಮೇಳನ ಸಮಿತಿಯಿಂದ ಆಯೋಜಿಸಲಾಗಿದ್ದ ಹಿಂದೂ ಸಮ್ಮೇಳನದಲ್ಲಿ ಮುಖ್ಯಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು.

ಭಾರತದಲ್ಲಿ 6 ಕೋಟಿ ವಲಸಿಗರು ಇದ್ದಾರೆ. ಅವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಮಾಡಿಸಿಕೊಡುವ ಏಜೆನ್ಸಿಗಳಿವೆ. ಇಂಥವರಿಂದ ನಾವು ಹುಷಾರಿಗಿರಬೇಕು. ಡಾ. ಬಿ.ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನವೇ ವಲಸಿಗರಿಗೆ ಬೇಕಿಲ್ಲ. ದೇಶದೊಳಗೆ ಬಂದ ವಲಸಿಗರು, ಬಹುಸಂಖ್ಯಾತರಾಗಿ ತಮ್ಮದೇ ಸಂವಿಧಾನವನ್ನು ರಚಿಸಿಕೊಂಡು ಆಳ್ವಿಕೆ ಮಾಡಲು ಆರಂಭಿಸುತ್ತಿದ್ದಾರೆ. ಇಂಥವುಗಳನ್ನು ನಾವೆಂದಿಗೂ ಸಹಿಸಬಾರದು ಎಂದರು.

ಲವ್ ಜಿಹಾದ್, ಆರ್ಥಿಕ ಜಿಹಾದ್ ಸೇರಿದಂತೆ ಬಹಳಷ್ಟು ಜಿಹಾದ್ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ನಾವು ನಮ್ಮ ಶಿಷ್ಟಾಚಾರಗಳನ್ನು ಪಾಲಿಸುವುದು, ಪರಿಸರ ಸಂರಕ್ಷಣೆ, ಸಾಮರಸ್ಯ, ನಮ್ಮತನ ಹಾಗೂ ಕುಟುಂಬ ಸಂರಕ್ಷಣೆಗೆ ಆದ್ಯತೆ ನೀಡಿ ಗಟ್ಟಿಯಾಗಬೇಕು. ಆಗ ಬಾಹ್ಯ ಶಕ್ತಿಗಳನ್ನು ಹೊಡೆದೋಡಿಸಲು ಸಾಧ್ಯವಾಗುತ್ತದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಮಾತನಾಡಿ, ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನಕ್ಕೆ ಹೋದಾಗ ಎಲ್ಲ ಧರ್ಮಗಳ ತೌಲನಿಕ ಅಧ್ಯಯನ ಮಾಡಿದ್ದರು. ಎಲ್ಲ ಧರ್ಮಕ್ಕಿಂತ ಹಿಂದೂ ಧರ್ಮ ಶ್ರೇಷ್ಠ ಎಂಬುದನ್ನು ಕಂಡುಕೊಂಡಿದ್ದರು. ಚಿಕಾಗೋದಿಂದ ಭಾರತಕ್ಕೆ ಬಂದಾದ ಮೇಲೆ ಅವರು ಭಾರತದ ಮಣ್ಣನ್ನು ಮೈಗೆ ಹಚ್ಚಿಕೊಂಡು ನಮಸ್ಕರಿಸಿದ್ದರು. ಇದನ್ನು ಕೇಳಿದ ಹಲವರಿಗೆ, ಇಷ್ಟು ದಿನ ನಾನು ಅಪವಿತ್ರನಾಗಿದ್ದೆ. ಈಗ ಮಣ್ಣು ಮೈತುಂಬ ಹಚ್ಚಿಕೊಳ್ಳುವ ಮೂಲಕ ಪವಿತ್ರನಾಗಿದ್ದೇನೆ ಎಂದುತ್ತರಿಸಿದ್ದರು. ಹಾಗಾಗಿ ಭಾರತದ ಮಣ್ಣು ಸರ್ವಶ್ರೇಷ್ಠ. ನಾವು ಆಚರಣೆ ಮಾಡುತ್ತಿರುವ ಹಿಂದೂ ಧರ್ಮವೂ ಎಲ್ಲ ಧರ್ಮಕ್ಕಿಂತ ಶ್ರೇಷ್ಠ ಎಂದು ಶ್ರೀಗಳು ಬಣ್ಣಿಸಿದರು.

ಸಮಿತಿ ಗೌರವಾಧ್ಯಕ್ಷ ವಿಠ್ಠಲ ಲದ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಭಾಸ್ಕರ ಜಿತೂರಿ, ಉಪಾಧ್ಯಕ್ಷ ರಮೇಶ ದಿವಟೆ, ಬಸವರಾಜ ಕುಂದಗೋಳ, ಈಶ್ವರ ಶಿರಕೋಳ, ನಾಗರಾಜ ಕಲಾಲ, ವಿನಾಯಕ ಲದ್ವಾ ಸೇರಿದಂತೆ ಹಲವರಿದ್ದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ನಗರದಾದ್ಯಂತ ಪೂರ್ಣ ಕುಂಭಗಳ ಅದ್ಧೂರಿ ಶೋಭಾಯಾತ್ರೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ