ಸಮೀಕ್ಷೆ ನಿಗದಿತ ವೇಳೆ ಮುಗಿಯದಿರಲು ಷಡ್ಯಂತ್ರ: ಆರೋಪ

KannadaprabhaNewsNetwork |  
Published : Oct 06, 2025, 01:01 AM IST
5ಎಚ್‌ಪಿಟಿ4- ಹೊಸಪೇಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಮುಖಂಡರಾದ ಸೋಮಶೇಖರ್ ಬಣ್ಣದಮನೆ, ಬುಡ್ಡಿ ಬಸವರಾಜ, ರವಿಕುಮಾರ ಮತ್ತಿತರರಿದ್ದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಗದಿತ ಗಡುವಿನಲ್ಲಿ ಮುಗಿಯದಿರಲು ಕೆಲವರ ಷಡ್ಯಂತ್ರ ಕಾರಣವಾಗಿದೆ.

ಹೊಸಪೇಟೆ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಗದಿತ ಗಡುವಿನಲ್ಲಿ ಮುಗಿಯದಿರಲು ಕೆಲವರ ಷಡ್ಯಂತ್ರ ಕಾರಣವಾಗಿದ್ದು, ಸಾರ್ವಜನಿಕರು ಯಾರೂ ಸುಳ್ಳು, ಅಪಪ್ರಚಾರಗಳಿಗೆ ಕಿವಿಗೊಡದೇ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ಪಾಲ್ಗೊಂಡು ಗಣತಿದಾರರಿಗೆ ಸಹಕರಿಸಬೇಕು ಎಂದು ಅಹಿಂದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಸಮುದಾಯದ ನಾಯಕರು ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಕಡಿಮೆ ಸಂಖ್ಯೆಯಲ್ಲಿ ಇರುವ ಕೆಲ ಸಮುದಾಯದವರು ಸರ್ಕಾರದ ಸೌಲಭ್ಯ ಪಡೆದಿದ್ದಾರೆ. ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದು ಬಡತನದಿಂದ ಬಳಲುತ್ತಿರುವ ಎಲ್ಲರಿಗೂ ನ್ಯಾಯ ಸಿಗಬೇಕು. ಇದಕ್ಕಾಗಿ ಸಮೀಕ್ಷೆ ನಡೆಯುತ್ತಿದೆ. ಆದರೆ, ಮನುವಾದಿ ಸಂಘಟನೆ, ಪಕ್ಷಗಳು ಇದನ್ನು ವಿರೋಧ ಮಾಡುವುದು ಸರಿಯಲ್ಲ. ಹಿಂದುಳಿದ ಎಲ್ಲರಿಗೆ ನ್ಯಾಯ ಸಿಗುವ ಕೆಲಸ ಸಮೀಕ್ಷೆಯಿಂದ ಆಗಲಿದೆ ಎಂದರು.

ಜನರು ಗಣತಿದಾರರಿಗೆ ಆಧಾರ್ ಕಾರ್ಡ್ ಕೊಡಲು ಭಯ ಪಡುತ್ತಿದ್ದಾರೆ. ಇದರಿಂದ ಯಾರೂ ಭಯಪಡಬೇಕಿಲ್ಲ. ಯಾರಿಗೂ ಇದರಿಂದ ಮೋಸ ಮಾಡುತ್ತಿಲ್ಲ. ಯಾವುದೇ ತಾರತಮ್ಯ ಇಲ್ಲದೇ ವೈಜ್ಞಾನಿಕವಾಗಿ ಮಾಡುತ್ತಿರುವ ಸಮೀಕ್ಷೆ ಇದಾಗಿದೆ. ಜಿಲ್ಲೆಯಲ್ಲಿ ಮತ್ತು ಜಿಲ್ಲಾ ಕೇಂದ್ರ ಹೊಸಪೇಟೆ ಸಮೀಕ್ಷೆಯಲ್ಲಿ ಹಿಂದುಳಿದಿದೆ. ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು. ಸರ್ಕಾರ ಇದಕ್ಕೆ ಇನ್ನೂ ಹತ್ತು ದಿನ ಹೆಚ್ಚಿನ ಕಾಲಾವಕಾಶ ಬೇಕು ಎಂದು ತಿಳಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ, ಸದ್ಯದವರೆಗೆ ಶೇ.60 ಸಮೀಕ್ಷೆ ಆಗಿದೆ ಎಂಬ ಮಾಹಿತಿ ಇದೆ. ನಿಗದಿತ ಗಡುವಿನಲ್ಲಿ ಸಮೀಕ್ಷೆ ಮುಗಿಯಬೇಕಿತ್ತು. ಆದರೆ, ಕೆಲವರ ಷಡ್ಯಂತ್ರ ಮತ್ತು ಅಪಪ್ರಚಾರ ಮಾಡಿ ಸಮೀಕ್ಷೆ ತಡೆಯುವ ಹುನ್ನಾರ ಮಾಡಿದ್ದಾರೆ. ಜಾತಿ ಸಮೀಕ್ಷೆ ವಿರೋಧ ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಅಹಿಂದ ವರ್ಗಗಳನ್ನು ಮುಂದೆ ಬರಲು ಬಿಡದಂತೆ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ. ರೇಷನ್ ಕಾರ್ಡ್ ರದ್ದು ಸೇರಿ ಸರ್ಕಾರದ ಸೌಲಭ್ಯ ಸಿಗಲ್ಲ ಅಂತ ಸುಳ್ಳು ಹೇಳಿ ಸಮೀಕ್ಷೆ ಆಗದಂತೆ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿನ ಶೋಷಿತ ಸಮುದಾಯದ ಅಭಿವೃದ್ಧಿಗೆ ಸಮೀಕ್ಷೆ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಕೂಡ ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ನಿಜವಾದ ಶೋಷಿತರು ಸಮೀಕ್ಷೆಯಿಂದ ದೂರ ಉಳಿದಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ದಿಟ್ಟ ಹಜ್ಜೆ ಇಟ್ಟಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ, ಮುಖಂಡರಾದ ಸದ್ದಾಂ, ಕಿಚಡಿ ಪ್ರಶಾಂತ್, ಅಲ್ತಾಫ್, ಜಯಪ್ಪ, ಸುನೀಲ್ ಇದ್ದರು.

PREV

Recommended Stories

8 ವರ್ಷದ ಬಾಲಕಿ ಹೊಟ್ಟೇಲಿ ಮೂರು ಕೆ.ಜಿ. ಕೂದಲು ಪತ್ತೆ! ಇದೊಂದು ಕಾಯಿಲೆ
ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ