ಹೊಸಪೇಟೆ: ರಾಜ್ಯ ಸರ್ಕಾರ ಕುರುಬರನ್ನು ಎಸ್‌ಟಿಗೆ ಸೇರಿಸುವ ಪ್ರಸ್ತಾವವನ್ನು ಕೈಬಿಡದ ಹಿನ್ನೆಲೆಯಲ್ಲಿ ಮತ್ತು ನಾವು ನೀಡಿದ್ದ ಗಡುವಿನಲ್ಲಿ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಸರ್ಕಾರದಿಂದ ಅ.7ರಂದು ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಳ್ಳದೇ ಬಹಿಷ್ಕರಿಸಲು ಸಮುದಾಯ ತೀರ್ಮಾನಿಸಿದೆ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ ತಿಳಿಸಿದರು.
ವಾಲ್ಮೀಕಿ ನಾಯಕ ಸಮುದಾಯದಿಂದ ಆಯ್ಕೆಯಾಗಿರುವ ಶಾಸಕರು, ಸಂಸದರು ಕೂಡ ಇದರ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಮುಂದೆ ಅವರನ್ನು ಕೂಡ ಘೇರಾವ್ ಹಾಕಲಾಗುವುದು. ಪತ್ರ ಚಳವಳಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.
ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ್ ಮಾತನಾಡಿ, ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಲು ಹೊರಟಿದೆ. ನಾವು ಜಯಂತಿಯನ್ನು ಬಹಿಷ್ಕರಿಸುತ್ತಿದ್ದು, ನಮ್ಮ ವಾಲ್ಮೀಕಿಶ್ರೀಗಳು ಕೂಡ ಜಯಂತಿಯಲ್ಲಿ ಪಾಲ್ಗೊಳ್ಳದಿರಲು ಕೋರುತ್ತೇವೆ. ಯಾವುದೇ ರಾಜಕೀಯ ಪಕ್ಷಕ್ಕೆ ಮಾನ್ಯತೆ ಕೊಡದಂತೆ ಇರಬೇಕೆಂಬುದು ನಮ್ಮ ನಿಲುವು ಎಂದರು.ನಮ್ಮ ಸಮುದಾಯದಿಂದ ಆಯ್ಕೆಯಾಗಿರುವ ಎಲ್ಲ ರಾಜಕೀಯ ಪ್ರತಿನಿಧಿಗಳು ಯಾವುದೇ ಪಕ್ಷದಲ್ಲಿದ್ದರೂ ಪಕ್ಷಾತೀತವಾಗಿ ಸರಕಾರದ ಈ ಕ್ರಮವನ್ನು ಖಂಡಿಸಬೇಕು. ನಮ್ಮ ಸಮಾಜಕ್ಕಾಗಿ ಸಮಾಜದ ಶಾಸಕರು, ಸಂಸದರು, ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಬೇಕು. ಇದೇ ಮೊಂಡುತನ ಮುಂದುವರೆಸಿದಲ್ಲಿ ಮುಂದಿನ ಜಿಪಂ, ತಾಪಂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಬೆಂಬಲಿಸುವ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ನಗರಸಭೆ ಸದಸ್ಯರೂ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಲ್ಲಿ ಈ ಮೂಲಕ ಸರಕಾರಿ ಜಯಂತಿಯಲ್ಲಿ ಪಾಲ್ಗೊಳ್ಳದಿರಲು ಮನವರಿಕೆ ಮಾಡಲಾಗುವುದು ಎಂದರು.
ಮುಖಂಡರಾದ ಗೋಸಲ ಭರಮಪ್ಪ, ಕಿನ್ನಾಳ ಹನುಮಂತ, ಗುಡಿ ಗುಡಿ ಸೋಮನಾಥ, ಗುಜ್ಜಲ ಚಂದ್ರಶೇಖರ, ದೇವೇಂದ್ರಪ್ಪ, ತಾರಿಹಳ್ಳಿ ವೆಂಕಟೇಶ, ಶ್ರೀಕಂಠ, ಬೆಳಗೋಡು ಅಂಬಣ್ಣ, ನೀರಲಗಿ ಹನುಮಂತ, ಗುಡುಗಂಟಿ ಮಲ್ಲಿಕಾರ್ಜುನ ಮತ್ತಿತರರಿದ್ದರು.