ಹೊಸಪೇಟೆ: ಖ್ಯಾತ ಕಥೆಗಾರ, ಹಂಪಿ ಕನ್ನಡ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್ (63) ಬಹು ಅಂಗಾಗ ವೈಫಲ್ಯದಿಂದ ಭಾನುವಾರ ಬೆಳಗಿನಜಾವ ನಗರದ ಎಂ.ಪಿ. ಪ್ರಕಾಶ ನಗರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.
ಮಂಡ್ಯ ಜಿಲ್ಲೆಯ ಮದ್ದೂರಿನ ಮಾದನಾಯಕನಹಳ್ಳಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಶಿವರಾಜ್ ತಂಗಡಗಿ, ಜಮೀರ್ ಅಹಮದ್ ಖಾನ್, ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಸಂತಾಪ ಸೂಚಿಸಿದ್ದಾರೆ.
ಕನ್ನಡ ವಿವಿಯ 80 ಎಕರೆ:ಡಾ. ಮೊಗಳ್ಳಿ ಗಣೇಶ ಹಂಪಿ ಕನ್ನಡ ವಿವಿ 700 ಎಕರೆ ವಿದ್ಯಾರಣ್ಯ ಆವರಣದ ಪೈಕಿ 80 ಎಕರೆ ಜಾಗವನ್ನು ಆಗಿನ ಬಿ.ಎಸ್. ಯಡಿಯೂರಪ್ಪ (2010ರಲ್ಲಿ) ಸರ್ಕಾರ ಥೀಮ್ ಪಾರ್ಕ್ ಯೋಜನೆಗಾಗಿ ಹಸ್ತಾಂತರ ಮಾಡಿಕೊಳ್ಳಲು ಹೊರಟಾಗ ಸರ್ಕಾರದ ವಿರುದ್ಧವೇ ಕನ್ನಡ ವಿವಿಯಲ್ಲಿ ಇದ್ದುಕೊಂಡೇ ಹೋರಾಟ ರೂಪಿಸಿದರು. ಆಗಿನ ಸರ್ಕಾರ ಅವರ ಮೇಲೆ ಒತ್ತಡ ಹೇರಿದರೂ ಜಗ್ಗದೇ ಹೋರಾಟ ಸಂಘಟಿಸಿ, ಕನ್ನಡ ವಿವಿ ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು ಹಾಗೂ ಸಾಹಿತಿಗಳ ಸಹಾಯದಿಂದ 80 ಎಕರೆ ಅಮೂಲ್ಯ ಜಮೀನು ಉಳಿಸಿದರು.
ಹಂಪಿ ಕನ್ನಡ ವಿವಿಗೆ 1996ರಲ್ಲಿ ಸಂಶೋಧನಾ ಸಹಾಯಕರಾಗಿ ಗಣೇಶ್ ಮೊಗಳ್ಳಿ ಸೇರಿದರು. 1997 ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ಪ್ರಾರಂಭಿಸಿ, ಇತ್ತೀಚೆಗೆ ನಿವೃತ್ತರಾದರು. ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ, ಜಾನಪದ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿದ್ದರು.
ಮಾಸ್ತಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ಮುದ್ದಣ್ಣ ರತ್ನಾಕರವರ್ಣಿ ಪ್ರಶಸ್ತಿ, ಜಿ.ಎಸ್. ಶಿವರುದ್ರಪ್ಪ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಸಿದ್ದಲಿಂಗಯ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.