ಕನ್ನಡಪ್ರಭ ವಾರ್ತೆ ಮಂಡ್ಯಹೊಸದಾಗಿ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವುದಾಗಿ ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ಮೈಷುಗರ್ ಕಾರ್ಖಾನೆಯನ್ನು ಮಾರಾಟ ಮಾಡಲು ಸಂಚು ರೂಪಿಸಿದೆಯೇ ಎಂಬ ಬಗ್ಗೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬೂದನೂರು ಬೊಮ್ಮಯ್ಯ ಆತಂಕ ವ್ಯಕ್ತಪಡಿಸಿದರು.
ಶಾಸಕ ಪಿ.ರವಿಕುಮಾರ್ ಮನೆ ಮನೆಯಿಂದ ಮಣ್ಣು ತರುವ ಬಾಲಿಶ ಹೇಳಿಕೆಗಳನ್ನು ನೀಡುವ ಬದಲು ಸರ್ಕಾರದಿಂದ ಹೊನ್ನು ತಂದು ರೈತರ ಮನೆಗಳಿಂದ ಕಳಸವನ್ನು ತಂದು ಪೂಜಿಸಲಿ ಎಂದ ಬೊಮ್ಮಯ್ಯ ಸಲಹೆ ನೀಡಿದರು.
೨೦೦೦ ದಿಂದೀಚೆಗೆ ಜಿಲ್ಲೆಯಲ್ಲಿ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಮಂಡ್ಯ ನಾಗರಿಕರನ್ನು, ರೈತರನ್ನು ವಂಚಿಸುತ್ತಾ ನಂಬಿಕೆ ದ್ರೋಹವೆಸಗಿ ಸಾರ್ವಜನಿಕ ಸರ್ಕಾರಿ ಸ್ವತ್ತುಗಳನ್ನು ಮಾರಾಟ ಮಾಡಿ ಅಕ್ರಮ ಲಾಭ ಮಾಡಿಕೊಂಡು ಅವರು ಅಭಿವೃದ್ಧಿಯಾಗುತ್ತಿದ್ದಾರೆಯೇ ವಿನಃ ಮಂಡ್ಯ ನಾಗರೀಕರು ಹಾಗೂ ರೈತರನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.ಈಗ ಲೋಕಸಭೆ ಚುನಾವಣೆ ಇರುವುದರಿಂದ ಜಿಲ್ಲೆಯ ಮತದಾರರಿಗೆ ಭರವಸೆ ಮತ್ತು ಆಶ್ವಾಸನೆ ನೀಡಿ ಮತಪಡೆಯುವ ಹುನ್ನಾರವಾಗಿರಬಹುದೆಂಬ ಅನುಮಾನ ಮಂಡ್ಯದ ನಾಗರಿಕರಲ್ಲಿ ಮೂಡಿದೆ. ಏಕೆಂದರೆ, ಏಷ್ಯಾ ಖಂಡದಲ್ಲೇ ಎರಡನೇ ಅತಿ ದೊಡ್ಡ ಕಾರ್ಖಾನೆ ಎಂದು ಪ್ರಸಿದ್ಧಿ ಪಡೆದಿದ್ದ ದಿ ಮೈಸೂರು ಅಸಿಟೇಟ್ ಕೆಮಿಕಲ್ಸ್ ಕಾರ್ಖಾನೆಯನ್ನು ೨೦೦೬ರಲ್ಲಿ ಅಂದಿನ ಸರ್ಕಾರ ಕಾನೂನು ವ್ಯಾಪ್ತಿಯೊಳಗೆ ರಹಸ್ಯ ಹರಾಜಿನ ಮೂಲಕ ಕೊಪ್ಪದ ಎಸ್.ಎಂ.ಷುಗರ್ ಕಂಪನಿಗೆ ೧೧೪ ಎಕರೆಯಲ್ಲಿದ್ದ ಕಾರ್ಖಾನೆಗೆ ಸಂಬಂಧಿಸಿದ ಯಂತ್ರೋಪಕರಣಗಳೂ, ಕಟ್ಟಡಗಳು ಸೇರಿದಂತೆ ೧೫.೨೦ ಕೋಟಿ ರು.ಗೆ ಮಾರಾಟ ಮಾಡಡಿತ್‌ತು. ಎಸ್.ಎಂ.ಷುಗರ್ ಕಾರ್ಖಾನೆಯ ಈ ಸ್ವತ್ತನ್ನು ಚಿನ್ನಮಸ್ತ ಕಂಪನಿಗೆ ನಾಮಿನಿ ಮಾಡಿ ನೇರವಾಗಿ ಕ್ರಯ ಮಾಡಿಸಿತ್ತು.ಈಗ ಚಿನ್ನಮಸ್ತ ಕಂಪನಿ ಆ ಸ್ಥಳದಲ್ಲಿ ಕಾವೇರಿ ಸಿರಿ ಶೀರ್ಷಿಕೆಯಡಿ ನಿವೇಶನಗಳನ್ನು ಮಾರಾಟ ಮಾಡುತ್ತಿದೆ ಎಂದು ಬೇಸರದಿಂದ ನುಡಿದರು.