ಕುಕ್ಕೆ: ಪ್ರಾಚೀನ ವಸ್ತುಸಂಗ್ರಹಾಲಯ ಇಂದು ಲೋಕಾರ್ಪಣೆ

KannadaprabhaNewsNetwork | Published : Feb 25, 2024 1:50 AM

ಸಾರಾಂಶ

ಬೆಳಗ್ಗೆ ೧೦.೩೦ಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನ್ಯಾಕ್‌ನ ಮಾಜಿ ನಿರ್ದೇಶಕ ಡಾ.ಎಸ್.ಸಿ. ಶರ್ಮ ವಹಿಸಲಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್. ಅಹಲ್ಯಾ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆ ಮಾಡುವರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿನಿತ್ಯ ದೇಶದ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಇವರಿಗೆ ಕ್ಷೇತ್ರದ ಐತಿಹಾಸಿಕ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪ್ರಾಚೀನ ವಸ್ತು ಸಂಗ್ರಹಾಲಯವನ್ನು ಸುಬ್ರಹ್ಮಣ್ಯದಲ್ಲಿ ಆರಂಭಿಸಲಾಗುತ್ತಿದೆ. ಫೆ.25ರಂದು ಭಾನುವಾರ ಅಭಯ ಗಣಪತಿ ದೇವಸ್ಥಾನದ ಸಮೀಪ ಪ್ರಾಚೀನ ವಸ್ತುಸಂಗ್ರಹಾಲಯವು ಲೋಕಾರ್ಪಣೆಗೊಳ್ಳಲಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀ ಸುಬ್ರಹ್ಮಣ್ಯ ಮಠ, ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ, ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಕೇಂದ್ರ ಮತ್ತು ಸುಬ್ರಹ್ಮಣ್ಯ ಮಠದ ಸಂಯುಕ್ತ ಆಶ್ರಯದಲ್ಲಿ ಪ್ರಾಚೀನ ವಸ್ತು ಸಂಗ್ರಹಾಲಯವು ಪ್ರಾರಂಭಗೊಳ್ಳಲಿದೆ ಎಂದರು.

ಬೆಳಗ್ಗೆ ೧೦.೩೦ಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ನ್ಯಾಕ್‌ನ ಮಾಜಿ ನಿರ್ದೇಶಕ ಡಾ.ಎಸ್.ಸಿ. ಶರ್ಮ ವಹಿಸಲಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಸ್. ಅಹಲ್ಯಾ ವಸ್ತು ಸಂಗ್ರಹಾಲಯವನ್ನು ಲೋಕಾರ್ಪಣೆ ಮಾಡುವರು. ಧಾರವಾಡದ ಜೆಎಸ್‌ಎಸ್ ಬನಶಂಕರಿ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ.ಎಚ್. ವಿಷ್ಣುವರ್ಧನ್, ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯೀಸ, ನಿವೃತ್ತ ಉಪನ್ಯಾಸಕ ಮತ್ತು ಇತಿಹಾಸ ಸಂಶೋಧಕ ಡಾ.ಕೆ.ಎಸ್.ಎನ್. ಉಡುಪ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಶ್ರೀಗಳಿಂದ ಪ್ರಾಚ್ಯ ವಸ್ತುಗಳ ಸಂಗ್ರಹಣೆ: ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರ ಮತ್ತು ಕೆಳದಿ ರಾಣಿಚೆನ್ನಮ್ಮಾಜಿ ಅಧ್ಯಯನ ಕೇಂದ್ರದ ಸಂಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಕಲ್ಲಾಪುರ ಮಾತನಾಡಿ, ಸುಬ್ರಹ್ಮಣ್ಯಶ್ರೀಗಳು ಅಸಂಖ್ಯಾತ ಪ್ರಾಚ್ಯ ವಸ್ತುಗಳನ್ನು ಸಂಗ್ರಹಣೆ ಮಾಡಿದ್ದಾರೆ. ಶ್ರೀಗಳು ಸಂಗ್ರಹಿಸಿದ ಮೈಸೂರು, ತಂಜಾವೂರು, ಗಂಜೀಫಾ ಇತ್ಯಾದಿ ಪ್ರಕಾರಗಳ ವರ್ಣಚಿತ್ರಗಳು, ಪ್ರಾಚೀನ ನಾಣ್ಯಗಳು, ವಿಶೇಷವಾದ ರಾಮಟಂಕಿ ನಾಣ್ಯಗಳು, ವಿದೇಶಿ ನಾಣ್ಯಗಳು, ನೋಟುಗಳು,ಕೃಷಿ ಉಪಕರಣಗಳು, ಮರದ ಕೆತ್ತನೆಗಳು, ಪೂಜಾ ಸಾಮಗ್ರಿಗಳು, ಗೃಹೋಪಯೋಗಿ ವಸ್ತುಗಳು, ಆಲಂಕಾರಿಕ ವಸ್ತುಗಳು, ತಾಳೆಯೋಲೆ ಹಾಗೂ ಕಾಗದ ಹಸ್ತಪ್ರತಿಗಳನ್ನು ಪ್ರಾರಂಭಿಕ ಹಂತದಲ್ಲಿ ಪ್ರದರ್ಶನಕ್ಕಿಡಲಾಗುವುದು. ಪ್ರದರ್ಶಿಸುವ ಪ್ರಾಚೀನ ವಸ್ತುಗಳ ಬಳಿ ಕನ್ನಡ, ಹಿಂದಿ ಮತ್ತು ಆಂಗ್ಲಭಾಷೆಯಲ್ಲಿ ಅದರ ಬಗ್ಗೆ ವಿವರಗಳನ್ನು ಹಾಕಲಾಗುವುದು. ಇದರಿಂದ ಈ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತದೆ ಎಂದು ಹೇಳಿದರು. ಲಿಪಿ ತರಬೇತಿ: ಪ್ರಾಚೀನ ವಸ್ತು ಸಂಗ್ರಹಾಲಯದ ಆಶ್ರಯದಲ್ಲಿ ಆಧುನಿಕರಿಗೆ ಪ್ರಾಚೀನ ಲಿಪಿಗಳ ಓದುವಿಕೆಗೆ ತರಬೇತಿ ನೀಡಲಾಗುವುದು. ಲಿಪಿಗಳ ತರಬೇತಿ, ಶಾಸನಗಳ ಅಧ್ಯಯನ ಹಾಗೂ ಅವುಗಳಿಗೆ ಸಂಬದಿಸಿದಂತೆ ಶಾರ್ಟ್ ಟರ್ಮ್ ಆಸ್ಟೈನ್ ಡಿಪ್ಲಮೋ ತರಗತಿಗಳನ್ನು ತರಬೇತಿ ಪ್ರಾರಂಭಿಸಲಾಗುವುದು. ಸುಬ್ರಹ್ಮಣ್ಯದಲ್ಲಿ ಪ್ರಾಚೀನ ವಸ್ತು ಸಂಗ್ರಹಾಲಯದೊಂದಿಗೆ ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠವನ್ನು ಆರಂಭಿಸಲಾಗುವುದು ಎಂದು ತಿಳಿಸಿದರು. ರಾಮಾಯಣ ಚಿತ್ರ ಸ್ಪರ್ಧೆ: ಈ ವಸ್ತುಸಂಗ್ರಹಾಲಯದ ಮೂಲಕ ಪ್ರತಿವರ್ಷವೂ ಒಂದು ವಿಶೇಷ ಕಾರ್ಯಕ್ರಮವನ್ನು ಮಾಡಲಾಗುವುದು.ಈ ವರ್ಷ ವರ್ಣಚಿತ್ರಕಾರರಿಗೆ ಪ್ರೋತ್ಸಾಹಿಸುವ ಸಲುವಾಗಿ ಪೋಸ್ಟ್ ಕಾರ್ಡಿನಲ್ಲಿ ರಾಮಾಯಣದ ಚಿತ್ರಗಳನ್ನು ಬರೆಯುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ೮ ರಿಂದ ೮೦ ವರ್ಷದ ಯಾರು ಬೇಕಾದರೂ ಭಾರತದಾದ್ಯಂತದಿಂದ ಭಾಗವಹಿಸಬಹುದು. ಈ ಬಗ್ಗೆ ಮುಂದೆ ವಿವರಗಳನ್ನು ನೀಡಲಾಗುವುದು ಎಂದು ಡಾ.ಕಲ್ಲಾಪುರ ತಿಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀ ಮಠದ ದಿವಾನ ಸುದರ್ಶನ ಜೋಯೀಸ, ನಿವೃತ್ತ ಉಪನ್ಯಾಸಕ ಮತ್ತು ಇತಿಹಾಸ ಸಂಶೋಧಕ ಡಾ.ಎಸ್.ಎನ್. ಉಡುಪ ಹಾಜರಿದ್ದರು.

Share this article