ಹುಬ್ಬಳ್ಳಿ:
ಧಾರವಾಡದ 31 ಹಾಗೂ ಹುಬ್ಬಳ್ಳಿಯ 24 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ಒಟ್ಟು 19,500 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಬೆಳಗ್ಗೆ 10.30ರಿಂದ ಮಧ್ಯಾಹ್ನ 12ರ ವರೆಗೆ ಪರೀಕ್ಷೆ ನಡೆಯಿತು. ಧಾರವಾಡ ನಗರ ವ್ಯಾಪ್ತಿಯ 30 ಕೇಂದ್ರಗಳಲ್ಲಿ 10,624, ಧಾರವಾಡ ಗ್ರಾಮೀಣದ ಒಂದು ಕೇಂದ್ರದಲ್ಲಿ 472 ಹಾಗೂ ಹುಬ್ಬಳ್ಳಿ ನಗರದ 24 ಕೇಂದ್ರಗಳಲ್ಲಿ 8,800 ಅಭ್ಯರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು.
ಹುಬ್ಬಳ್ಳಿ ತಾಜ್ ನಗರದ ಚೇತನ ಬಿಸಿನೆಸ್ ಕಾಲೇಜು, ಪ್ರೇರಣಾ ಪಿಯು ಸೈನ್ಸ್ ಕಾಲೇಜು, ಕೆಎಲ್‌ಇ ಕಾಮರ್ಸ್ ಕಾಲೇಜು, ಪಿ.ಸಿ. ಜಾಬಿನ್ ಕಾಲೇಜು, ಎಂ.ವಿ.ಪಿ. ಪಿಯು ಕಾಲೇಜು, ಜೆ.ಜಿ. ಕಾಮರ್ಸ್ ಕಾಲೇಜು, ವಿಜಯನಗರ ಪಿಯು ಕಾಲೇಜು, ಗ್ಲೋಬಲ್ ಕಾಲೇಜು, ಸೇಂಟ್ ಅಂತೋನಿ ಪಬ್ಲಿಕ್ ಸ್ಕೂಲ್, ಗ್ಲೋಬಲ್ ಕಾಲೇಜು (ಶೆಟ್ಟರ್ ಲೇಔಟ್) ಹಾಗೂ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷೆ ನಡೆಯಿತು. ಹಲವು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಭೇಟಿ ನೀಡಿ ಪರೀಕ್ಷೆಯ ಕುರಿತು ಮಾಹಿತಿ ಪಡೆದುಕೊಂಡರು.ಪರೀಕ್ಷೆಯನ್ನು ನಕಲು ರಹಿತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ವೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಪ್ರಶ್ನೆಪತ್ರಿಕೆ ಪಾಲಕರು ಸೇರಿದಂತೆ ವಿವಿಧ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ವಿಶೇಷ ಜಾಗೃತ ದಳದ ಜತೆಗೆ ವೆಬ್‌ಕಾಸ್ಟಿಂಗ್ ವೀಕ್ಷಣಾ ತಂಡವೂ ಕಾರ್ಯನಿರ್ವಹಿಸಿತು.
ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿತ್ತು. ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ಈ ವ್ಯಾಪ್ತಿಯಲ್ಲಿದ್ದ ಝೆರಾಕ್ಸ್ ಅಂಗಡಿ, ಕಂಪ್ಯೂಟರ್ ಕೇಂದ್ರ ಹಾಗೂ ಕೋಚಿಂಗ್ ತರಗತಿ ಮುಚ್ಚುವಂತೆ ಆದೇಶಿಸಲಾಗಿತ್ತು. ಅಲ್ಲದೆ, ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.