ಕುರ್ಚಿ ಭದ್ರಕ್ಕೆ ಕ್ಷೇತ್ರ ಪುನರ್ವಿಂಗಡಣೆ ಮಸೂದೆ: ಕಾಂಗ್ರೆಸ್‌

KannadaprabhaNewsNetwork |  
Published : Nov 30, 2026, 02:30 AM IST
29ಕೆಡಿವಿಜಿ1-ದಾವಣಗೆರೆಯಲ್ಲಿ ಭಾನುವಾರ ಕೆಪಿಸಿಸಿ ಮುಖ್ಯ ವಕ್ತಾರ ಡಿ.ಬಸವರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡಿಸಲು ಮುಂದಾಗಿರುವುದರಿಂದ ಸಂವಿಧಾನ, ಪ್ರಜಾಪ್ರಭುತ್ವದ ಸರ್ವನಾಶವಾಗಲಿದೆ. ನಾರಿಶಕ್ತಿ ಹೆಸರಲ್ಲಿ ನರೇಂದ್ರ ಮೋದಿ, ಅಮಿತ್ ಶಾ ತಮ್ಮ ಕುರ್ಚಿಯ ಶಕ್ತಿ ಗಟ್ಟಿಗೊಳಿಸಲು, ಸರ್ವಾಧಿಕಾರ ಸಾಧಿಸಲು ಹೊರಟಿದ್ದಾರೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಡಿ.ಬಸವರಾಜ ಆರೋಪಿಸಿದ್ದಾರೆ.

- ಹಿಂದೂ ಧರ್ಮ, ಪಾಕಿಸ್ತಾನ, ಮುಸ್ಲಿಂ ವಿರೋಧದ ಅಸ್ತ್ರದ ವಿಚಾರ ಈಗ ಬಿಜೆಪಿಗೆ ಸವಕಲು ನಾಟ್ಯಗಳು: ಡಿ.ಬಸವರಾಜ ಟೀಕೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡಿಸಲು ಮುಂದಾಗಿರುವುದರಿಂದ ಸಂವಿಧಾನ, ಪ್ರಜಾಪ್ರಭುತ್ವದ ಸರ್ವನಾಶವಾಗಲಿದೆ. ನಾರಿಶಕ್ತಿ ಹೆಸರಲ್ಲಿ ನರೇಂದ್ರ ಮೋದಿ, ಅಮಿತ್ ಶಾ ತಮ್ಮ ಕುರ್ಚಿಯ ಶಕ್ತಿ ಗಟ್ಟಿಗೊಳಿಸಲು, ಸರ್ವಾಧಿಕಾರ ಸಾಧಿಸಲು ಹೊರಟಿದ್ದಾರೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಡಿ.ಬಸವರಾಜ ಆರೋಪಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾಲೆ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನೇ ಮುಂದಾಗಿಸಲು ಮುಂದಾಗಿದ್ದು, ಇಷ್ಟು ದಿನ ಹಿಂದೂ ಧರ್ಮ, ಪಾಕಿಸ್ತಾನ, ಅಲ್ಪಸಂಖ್ಯಾತರ ಸಮುದಾಯದ ವಿರೋಧದ ಅಸ್ತ್ರಗಳು ಈಗ ಸವಕಲು ನಾಣ್ಯವಾದ ಕಾರಣಕ್ಕೆ ಕ್ಷೇತ್ರ ಪುನರ್ವಿಂಗಡಣೆಗೆ ಮುಂದಾಗಿದ್ದಾರೆ ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ 400 ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಜನರು ಮತ ಹಾಕುವುದಿಲ್ಲ ಎಂಬುದನ್ನು ಅರಿತ ಬಿಜೆಪಿ ಇದೀಗ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮೂಲಕ ಅಧಿಕಾರದ ಕುರ್ಚಿ ಭದ್ರಪಡಿಸಿಕೊಳ್ಳಲು ಹುನ್ನಾರ ನಡೆಸಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಸಹಾಯ ಪಡೆದಿದ್ದಕ್ಕೆ ಮೋದಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಕುಟುಕಿದರು.

ಎಸ್ಐಆರ್‌ ಜೊತೆಗೆ ಚುನಾವಣಾ ಆಯೋಗದ ಅಧ್ಯಕ್ಷ ಜ್ಞಾನೇಶಕುಮಾರ ಅವರನ್ನು ಹಿಡಿದುಕೊಂಡು ಗೋಲ್ ಮಾಲ್ ಮಾಡಲು ಕೇಂದ್ರ ಸರ್ಕಾರ ಹೊರಟಿತ್ತು. ಆದರೆ, ಅದರಲ್ಲಿ ಅನ್ಯಾಯ ಆಗುತ್ತಿರುವ ಬಗ್ಗೆ ಹೋರಾಟ ಶುರುವಾಗಿದ್ದರಿಂದ, ಹೀಗಾದರೆ ಮುಂದೆ ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯವೂ ಬಿಜೆಪಿಗೆ ಸ್ಪಷ್ಟವಾಗಿದೆ. ಧರ್ಮದ ಆಧಾರದಲ್ಲಿ ಅಧಿಕಾರವನ್ನು ಹಿಡಿಯುವುದು ಕಷ್ಟ. ಮುಸ್ಲಿಂ ವಿರೋಧಿಯಾಗಿಯೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂಬುದನ್ನೂ ಬಿಜೆಪಿ ಅರಿತಿದೆ ಎಂದು ಹೇಳಿದರು.

ಈಗ ಚುನಾವಣಾ ಆಯೋಗವನ್ನು ಬಳಸಿಕೊಂಡು ಗದ್ದುಗೆ ಏರುವುದು ಸುಲಭವಾಗಿಲ್ಲ. ಈ ಎಲ್ಲ ವಿಚಾರಗಳ ಪರಾಮರ್ಶೆ ಮಾಡಿದ ಬಿಜೆಪಿ-ಆರ್‌ಎಸ್‌ಎಸ್‌ ಪಂಡಿತರು ಹೊಸ ವಿಚಾರಕ್ಕೆ ಕೈ ಹಾಕಿದ್ದಾರೆ. ಅದು ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯವಾಗಿದ್ದು, ಇದರಲ್ಲೂ ಅಧಿಕಾರ ಹಿಡಿಯುವ ಹುನ್ನಾರವೇ ಬಿಜೆಪಿಯ ಮೂಲ ಮಂತ್ರವಾಗಿದೆ. ಹಿಂದಿ ಭಾಷೆಯ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ್ ಸೇರಿದಂತೆ ಕೆಲ ರಾಜ್ಯಗಳ ಮೇಲೆ ಗುರಿಯಾಗಿಟ್ಟುಕೊಂಡು, ಕ್ಷೇತ್ರಗಳ ಪುನರ್ವಿಂಗಡಣೆ ಮಾಡುತ್ತಿದೆ ಎಂದು ದೂರಿದರು.

ಹಿಂದಿ ಭಾಷಿಕರ ರಾಜ್ಯಗಳಲ್ಲಿ ಕ್ಷೇತ್ರಗಳು ಹೆಚ್ಚಾಗಲಿದ್ದು, ಈಗ ಲೋಕಸಭೆ ಸದಸ್ಯರ ಸಂಖ್ಯೆ 543 ಇದ್ದು, ಇದನ್ನು 826ಕ್ಕೂ ಹೆಚ್ಚು ಸದಸ್ಯರಾಗುತ್ತಾರೆ. ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳಿದ್ದು, ಅಲ್ಲಿ 120 ಕ್ಷೇತ್ರಗಳಾಗಲಿವೆ. ತಮಗೆ ಬೇಕಾದಂತೆ ಬಿಜೆಪಿಯವರು ಮಾಡಿದ್ದಾರೆ. ಅಸ್ಸಾಂನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಾಡಲಾಗಿದೆ. ಅಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಂ ಸಮಾಜವಿರುವ 29 ಕ್ಷೇತ್ರಗಳನ್ನೇ ಪ್ರತ್ಯೇಕ ಮಾಡಲಾಗಿದೆ. ತನ್ನ ಸಾಂಪ್ರಾದಾಯಿಕ ಮತಗಳನ್ನು ಒಂದೇ ಕಡೆ ಸೇರ್ಪಡೆ ಮಾಡುವ ಹುನ್ನಾರ ಇದಾಗಿದೆ ಎಂದು ಆರೋಪಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲೂ ಇದೇ ಹುನ್ನಾರ ನಡೆಸಿ, ಬಿಜೆಪಿ ಯಶಸ್ವಿಯಾಗಿದೆ. ವಿಧಾನಸಭಾ ಕ್ಷೇತ್ರಕ್ಕೆ ಈಗ 2 ಲಕ್ಷದ ಆಸುಪಾಸು ಮತದಾರರಿಬೇಕು. ಜಮ್ಮುವಿನಲ್ಲಿ 80-90 ಸಾವಿರ ಮತದಾರರಿರುವ ಕಡೆ ಎರಡು ಲೋಕಸಭಾ ಕ್ಷೇತ್ರ ಮಾಡಿದ್ದಾರೆ. ಅಲ್ಲಿ ಬಹುಸಂಖ್ಯಾತ ಹಿಂದುಗಳಿದ್ದಾರೆ. ಇನ್ನುಳಿದ ಕ್ಷೇತ್ರಗಳನ್ನು 1.60ರಿಂದ 1.80 ಲಕ್ಷ ಮತದಾರರು ಇರುವ ಕ್ಷೇತ್ರಗಳನ್ನಾಗಿ ಮಾಡಿದ್ದಾರೆ. ದೇಶದಲ್ಲಿ ಈಗ ಇಂಥದ್ದೇ ಕ್ಷೇತ್ರಗಳನ್ನು ಮಾಡುವ ಕಳ್ಳಾಟವನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿದೆ. ಈವರೆಗೆ ಜನರ ಭಾವನೆ ಕೆರಳಿಸಿ, ಮತ ಪಡೆಯುತ್ತಿದ್ದ ಬಿಜೆಪಿ ಈಗ ಅದು ಸಾಧ್ಯವಿಲ್ಲ ಎಂದರಿತು, ಕ್ಷೇತ್ರ ಪುನರ್ವಿಂಗಡಣೆ ಹೆಸರಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗೆ ಮುಂದಾಗಿದೆ ಎಂದು ದೂರಿದರು.

ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಬಿಜೆಪಿಗೆ ಅದರ ಮಿತ್ರಪಕ್ಷಗಳು ಬೆಂಬಲಿಸಬಾರದು. ಬಿಜೆಪಿ ಹುನ್ನಾರದ ಹಿಂದೆ ಪ್ರಜಾಪ್ರಭುತ್ವವನ್ನೇ ಸಮಾಧಿ ಮಾಡುವ ಹಾಗೂ ಸಂವಿಧಾನವನ್ನೇ ಕೆತ್ತು ಹಾಕುವ ಲೆಕ್ಕಾಚಾರವಿದೆ. ಇದು ದೇಶಕ್ಕೆ ಮಾರಕವಾಗಿದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿ ಕಂಪನಿಗಳಿಗೆ ನೀಡಿ, ದೇಶವನ್ನೇ ದಿವಾಳಿ ಮಾಡಿದ್ದಾರೆ. ಈಗ ಕ್ಷೇತ್ರ ಪುನರ್ವಿಂಗಡಣೆ ಮೂಲಕ ಪ್ರಜಾಪ್ರಭುತ್ವದ ಸರ್ವನಾಶಕ್ಕೆ ಬಿಜೆಪಿ ಮುಂದಾಗಿದೆ. ಮೋದಿ ನಡೆಯು ಪ್ರಜಾಪ್ರಭುತ್ವ ಧಿಕ್ಕರಿಸಿ, ಸರ್ವಾಧಿಕಾರಿಯಾಗಲು ಹೊರಟಂತಿದೆ ಎಂದು ಡಿ.ಬಸವರಾಜ ಹೇಳಿದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಲ್ಕುಂದ ಹಾಲೇಶ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಗಿರೀಶ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ನಿರ್ದೇಶಕ ಎಂ.ಕೆ. ಲಿಯಾಖತ್ ಅಲಿ, ಬಿ.ಎಚ್. ಉದಯಕುಮಾರ, ಡಿ.ಶಿವಕುಮಾರ, ಬಿ.ಎಸ್.ಸುರೇಶ, ಬಸವರಾಜ, ಎಲ್.ಕೆ.ಇನಾಯತ್ ಇತರರು ಇದ್ದರು.

- - -

(ಕೋಟ್‌)

ಸಪ್ತಪದಿ ತುಳಿದು, ಅಗ್ನಿಸಾಕ್ಷಿಯಾಗಿ ಮದುವೆಯಾದ ಧರ್ಮಪತ್ನಿ ಜಶೋದಾ ಬೆನ್‌ ಅವರನ್ನೇ ನರೇಂದ್ರ ಮೋದಿ ನಡು ನೀರಿನಲ್ಲಿ ಕೈಬಿಟ್ಟವರು. ಇಂತಹ ವ್ಯಕ್ತಿ ಮೋದಿ ನಾರೀಶಕ್ತಿ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ. ನಾರೀಶಕ್ತಿ ಹೆಸರಿನಲ್ಲಿ ತಮ್ಮ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ನರೇಂದ್ರ ಮೋದಿ ಹೊರಟಿದ್ದಾರೆ.

- ಡಿ.ಬಸವರಾಜ, ಮುಖ್ಯ ವಕ್ತಾರ, ಕೆಪಿಸಿಸಿ.

- - -

-29ಕೆಡಿವಿಜಿ1: ದಾವಣಗೆರೆಯಲ್ಲಿ ಭಾನುವಾರ ಕೆಪಿಸಿಸಿ ಮುಖ್ಯ ವಕ್ತಾರ ಡಿ.ಬಸವರಾಜ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯ ಕಲ್ಲಿನ ರಥದ ಮೂಲ ಗೋಪುರ ಮರಸೃಷ್ಟಿ
ಆಂಧ್ರದ 4 ಟಿಎಂಸಿ ನೀರು ರಾಜ್ಯದ ಬೆಳೆಗಳಿಗೆ ಒದಗಿಸಲು ಎಚ್ಡಿಕೆಗೆ ಮನವಿ