ಸಂವಿಧಾನ ಮೌಲ್ಯಗಳನ್ನು ಅರಿತು ಜೀವನ ಸಾಗಿಸಿ: ಪ್ರೀತಿ.ಎಸ್

KannadaprabhaNewsNetwork | Published : Feb 11, 2024 1:49 AM

ಸಾರಾಂಶ

ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ದಾಂತ ಮತ್ತು ಉದ್ದೇಶಗಳ ಸಾರಾಂಶವೇ ಸಂವಿಧಾನದ ಪ್ರಸ್ತಾವನೆ. ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶಗಳ ತತ್ವ. ವ್ಯಕ್ತಿತ್ವ ವಿಕಸನವಾಗಲು ಹಕ್ಕುಗಳ ಅಗತ್ಯವಿದ್ದು, ನಮ್ಮ ಸಂವಿಧಾನ ನಮ್ಮ ಹೆಮ್ಮೆಯಾಗಿದೆ.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರು ಅರಿತು ಜೀವನ ನಡೆಸಬೇಕು ಎಂದು ಮುತ್ತಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪ್ರೀತಿ ಎಸ್. ಕಿವಿಮಾತು ಹೇಳಿದರು.

ತಾಲೂಕಿನ ಮುತ್ತಗಿ ಗ್ರಾಮದ ಮಾರುತೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ದಾಂತ ಮತ್ತು ಉದ್ದೇಶಗಳ ಸಾರಾಂಶವೇ ಸಂವಿಧಾನದ ಪ್ರಸ್ತಾವನೆ. ಜನತೆಯ ಧ್ಯೇಯಗಳನ್ನು ನಿರ್ಧರಿಸಿ ಘೋಷಿಸಿಕೊಂಡ ಆದರ್ಶಗಳ ತತ್ವ. ವ್ಯಕ್ತಿತ್ವ ವಿಕಸನವಾಗಲು ಹಕ್ಕುಗಳ ಅಗತ್ಯವಿದ್ದು, ನಮ್ಮ ಸಂವಿಧಾನ ನಮ್ಮ ಹೆಮ್ಮೆಯಾಗಿದೆ. ಎಲ್ಲರೂ ಸಂವಿಧಾನಕ್ಕೆ ಬದ್ಧರಾಗಿ ಜೀವನ ನಡೆಸುವಂತೆ ಹೇಳಿದರು.

ಸಾನಿಧ್ಯ ವಹಿಸಿದ್ದ ವೀರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಡಿಎಸ್‌ಎಸ್ ಮುಖಂಡರಾದ ಅಶೋಕ ಚಲವಾದಿ, ಅಶೋಕ ನಡುವಿನಮನಿ, ಶ್ರೀಶೈಲ ಜಾಲವಾದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಗ್ರೇಡ್-2 ತಹಸೀಲ್ದಾರ ಜಿ.ಎಸ್.ನಾಯಕ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭವಾನಿ ಪಾಟೀಲ, ಬಿಇಓ ವಸಂತ ರಾಠೋಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಜಾಥಾದ ನೋಡಲ್ ಅಧಿಕಾರಿ ಎಂ.ಎಚ್.ಯರಝರಿ, ಪಿಡಿಓ ಬಿ.ಎಸ್.ಬಡಿಗೇರ, ಗ್ರಾಪಂ ಅಧ್ಯಕ್ಷೆ ನೀಲಾ ಪಾಟೀಲ, ಉಪಾಧ್ಯಕ್ಷೆ ಕವಿತಾ ಬಡಿಗೇರ, ಮುಖಂಡರಾದ ರಮೇಶ ಸೂಳಿಬಾವಿ, ಪ್ರೇಮಕುಮಾರ ಮ್ಯಾಗೇರಿ, ಪರಶುರಾಮ ದಿಂಡವಾರ, ಮಹಾಂತೇಶ ಸಾಸಾಬಾಳ, ಸುರೇಶ ಸಿಂಗೆ ಸೇರಿ ಇತರರು ಇದ್ದರು. ಎಂ.ಬಿ.ತೋಟದ ಸ್ವಾಗತಿಸಿದರು. ಎಸ್.ಎಸ್.ಚಿಮ್ಮಲಗಿ ನಿರೂಪಿಸಿದರು. ಎ.ಎಚ್.ಮುಲ್ಲಾ ವಂದಿಸಿದರು.

ಸ್ತಬ್ಧ ಚಿತ್ರಕ್ಕೆ ಪೂಜೆ, ಅದ್ಧೂರಿ ಮೆರವಣಿಗೆ:

ಮುತ್ತಗಿ ಕ್ರಾಸ್‌ನಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ತಬ್ದ ಚಿತ್ರಕ್ಕೆ ಪೂಜೆ ಸಲ್ಲಿಸಿ ತಾಲೂಕಾಡಳಿತದಿಂದ ವಾದ್ಯಮೇಳದೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ಮುತ್ತಗಿ ಕ್ರಾಸ್‌ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂವಿಧಾನ ಸ್ತಬ್ದ ಚಿತ್ರ ಮೆರವಣಿಗೆ ಮಾಡುವ ಮೂಲಕ ಸಂವಿಧಾನ ಜಾಗೃತಿ ಮೂಡಿಸಲಾಯಿತು. ರಸ್ತೆ ಮಧ್ಯೆ ರಂಗೋಲಿ ಚಿತ್ತಾರ ಬಿಡಿಸಿ ಜಾಥಾಕ್ಕೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದರು. ಮೆರವಣಿಗೆಯಲ್ಲಿ ಗ್ರೇಡ್-2 ತಹಸೀಲ್ದಾರ, ಬಿಇಓ, ಸಮಾಜ ಕಲ್ಯಾಣ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಮುಖಂಡರು, ಮುತ್ತಗಿ ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲಾ ಸಿಬ್ಬಂದಿ, ಮಕ್ಕಳು, ಡಿಎಸ್‌ಎಸ್ ಮುಖಂಡರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಭಾರತಮಾತೆ, ಗಾಂಧೀಜಿ, ಡಾ.ಅಂಬೇಡ್ಕರ ಸೇರಿದಂತೆ ವಿವಿಧ ಮಹನೀಯರ ವೇಷಭೂಷಣ ಧರಿಸಿದ ವಿದ್ಯಾರ್ಥಿಗಳು ಗಮನ ಸೆಳೆದರು. ವಿವಿಧ ಕಲಾತಂಡಗಳು ಮೆರವಣಿಗೆಗೆ ಮೆರಗು ತಂದವು.

Share this article