ಸಂವಿಧಾನ ಜಾಗೃತಿ ಕಾರ್ಯಕ್ರಮ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ
ಜಿಲ್ಲಾದ್ಯಂತ ಜ.೨೬ರಿಂದ ಫೆ.೨೩ರವರೆಗೆ ಸಂವಿಧಾನದ ಜಾಗೃತಿ ಮತ್ತು ಅರಿವಿಗಾಗಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಜಾಗೃತಿಗಾಗಿ ಸ್ಥಬ್ಧಚಿತ್ರ ಸಂಚರಿಸಲಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ಪೂರ್ವಸಿದ್ಧತಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಾದ ಸ್ಥಬ್ಧಚಿತ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಒಂದು ತಿಂಗಳ ಕಾಲಾವಧಿಯಲ್ಲಿ ಜಿಲ್ಲೆಯಲ್ಲಿ ಜಾಥಾ ಸಂಚರಿಸಿ ಬೆಂಗಳೂರಿನಲ್ಲಿ ಫೆ.೨೫ರಂದು ನಡೆಯಲಿರುವ ರಾಷ್ಟ್ರಮಟ್ಟದ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ ಎಂದರು.ಪ್ರತಿ ದಿನ ಮೂರು ಹಳ್ಳಿಗಳಂತೆ ಜಿಲ್ಲೆಯ ೨೨೩ ಗ್ರಾಮ ಪಂಚಾಯಿತಿ ಹಾಗೂ ಹತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಎರಡು ಟ್ಯಾಬ್ಲೋಗಳು ಸಂಚರಿಸಲಿವೆ. ಪ್ರತಿ ಗ್ರಾಪಂಗಳಲ್ಲಿ ಎಲ್.ಇ.ಡಿ. ಮೂಲಕ ಸಂವಿಧಾನದ ಜಾಗೃತಿ ಸಾಕ್ಷ್ಯಚಿತ್ರ, ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಒಳಗೊಂಡಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಟ್ಯಾಬ್ಲೋ ಜೊತೆಗೆ ಎಲ್.ಇ.ಡಿ. ವಾಹನ ಹಾಗೂ ಇತರ ವಾಹನ ಸೇರಿದಂತೆ ಮೂರು ವಾಹನಗಳು ಇರುತ್ತವೆ. ಪ್ರತಿ ತಾಲೂಕಿನಲ್ಲಿ ಟ್ಯಾಬ್ಲೋ ಸಾಗುವ ದಾರಿ, ಪೊಲೀಸ್ ರಕ್ಷಣೆ, ಟ್ಯಾಬ್ಲೋ ಹಾಗೂ ಕಲಾವಿದರ ವಾಸ್ತವ್ಯಕ್ಕೆ ಸೂಕ್ತ ವ್ಯವಸ್ಥೆ ಸೇರಿದಂತೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಗ್ರಾಮ ಹಾಗೂ ಪಟ್ಟಣಗಳಲ್ಲಿ ನಡೆಯುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಸ್ಥಳೀಯ ಎಲ್ಲ ಇಲಾಖಾ ಅಧಿಕಾರಿಗಳು ಭಾಗವಹಿಸಬೇಕು. ಜಾಥಾದ ಜೊತೆಗೆ ಕಲಾ ತಂಡಗಳು, ಬೀದಿ ನಾಟಕ, ಜಾನಪದ ಸಂಗೀತ ತಂಡಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಉಪವಿಭಾಗಾಧಿಕಾರಿಗಳಾದ ಚೆನಪ್ಪ ಹಾಗೂ ಮಹ್ಮದ್ ಖಿಜರ್ ಇತರರು ಇದ್ದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಜ.೨೫ರಂದು ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಹಾಗೂ ಜಿಲ್ಲೆಯ ಎಲ್ಲ ಬೂತ್ ಮಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದ್ದಾರೆ.
ಗುರುಭವನದಲ್ಲಿ ಬೆಳಗ್ಗೆ ೧೦.೩೦ಕ್ಕೆ ರಾಷ್ಟ್ರೀಯ ಮತದಾರರ ದಿನಾಚರಣೆ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಿತ್ತಿಪತ್ರ ಸ್ಪರ್ಧೆ ಆಯೋಜಿಸಿ ಈ ಮೂರು ವಿಭಾಗದಲ್ಲಿ ಅತ್ಯುತ್ತಮ ಮೂರು ಜನರನ್ನು ಆಯ್ಕೆ ಮಾಡಿ ಬಹುಮಾನ ವಿತರಣೆಗೆ ಕ್ರಮವಹಿಸುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಜಿಪಂ ಉಪ ಕಾರ್ಯದರ್ಶಿ ಎಸ್.ಜಿ. ಮುಳ್ಳಳ್ಳಿ, ಉಪವಿಭಾಗಾಧಿಕಾರಿಗಳಾದ ಚೆನಪ್ಪ ಹಾಗೂ ಮಹ್ಮದ್ ಖಿಜರ್ ಇತರರು ಇದ್ದರು.