ಬಿಸಿಯೂಟದ ಪರಿವರ್ತನಾ ಮೊತ್ತ ದುರ್ಬಳಕೆ: ಆರೋಪ

KannadaprabhaNewsNetwork |  
Published : Jan 25, 2024, 02:05 AM IST
೨೪ಕೆಎನ್‌ಕೆ-೨                                                                  ಕನಕಗಿರಿ ತಾಲೂಕಿನ ಬೈಲಕ್ಕಂಪುರ ಗ್ರಾಮದ ಶಾಲೆ.  | Kannada Prabha

ಸಾರಾಂಶ

ಕೊರೋನಾ ಸಂದರ್ಭದಲ್ಲಿ ಮಕ್ಕಳ ಬ್ಯಾಂಕ್ ಖಾತೆಗೆ ಜಮೆಯಾಗಬೇಕಿದ್ದ ಬಿಸಿಯೂಟದ ಪರಿವರ್ತನಾ ವೆಚ್ಚದ ಮೊತ್ತವನ್ನು ಕನಕಗಿರಿ ತಾಲೂಕಿನ ಬೈಲಕ್ಕಂಪುರ ಗ್ರಾಮದ ಮುಖ್ಯಾಧ್ಯಾಪಕರು ನಿಯಮ ಉಲ್ಲಂಘಿಸಿ ಹಂಚಿಕೆ ಮಾಡಿದ್ದಾರೆ ಎಂದು ತಾಲೂಕಿನ ಬೈಲಕ್ಕಂಪುರ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಕನಕಗಿರಿ: ಕೊರೋನಾ ಸಂದರ್ಭದಲ್ಲಿ ಮಕ್ಕಳ ಬ್ಯಾಂಕ್ ಖಾತೆಗೆ ಜಮೆಯಾಗಬೇಕಿದ್ದ ಬಿಸಿಯೂಟದ ಪರಿವರ್ತನಾ ವೆಚ್ಚದ ಮೊತ್ತವನ್ನು ಮುಖ್ಯಾಧ್ಯಾಪಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಾಲೂಕಿನ ಬೈಲಕ್ಕಂಪುರ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಾಹಾರ ಯೋಜನೆಯಡಿ ೨೦೨೧ರ ಮೇ, ಜೂನ್ ತಿಂಗಳ ಬೇಸಿಗೆ ರಜಾ ಅವಧಿಯ ಪರಿವರ್ತನಾ ಮೊತ್ತವನ್ನು ವಿದ್ಯಾರ್ಥಿಗಳು ಅಥವಾ ಪಾಲಕರ ಬ್ಯಾಂಕ್ ಖಾತೆಗೆ ೨೦೨೨ರ ಮಾರ್ಚ್ ತಿಂಗಳೊಳಗಾಗಿ ಜಮೆ ಮಾಡಲು ಇಲಾಖೆ ಆದೇಶಿಸಿತ್ತು. ಆದರೆ ಅಂದು ಪ್ರಭಾರಿ ಮುಖ್ಯೋಪಾಧ್ಯಾಯರಾಗಿದ್ದ ಉಮೇಶ ಎನ್ನುವವರು ಡಿಬಿಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.ಈಗ ಆರ್‌ಟಿಐ ಕಾರ್ಯಕರ್ತರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರಿಂದ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿರುವುದು ಬಯಲಾಗಿದ್ದು, ಶಿಕ್ಷಣ ಇಲಾಖೆಯ ನಿಯಮ ಉಲ್ಲಂಘನೆಯಾಗುವ ಆತಂಕದಿಂದ ಪ್ರಭಾರಿ ಮುಖ್ಯೋಪಾಧ್ಯಾಯ ಉಮೇಶ ಅವರು ಎಚ್ಚೆತ್ತುಕೊಂಡು ಜ. ೧೯ರ ರಾತ್ರೋರಾತ್ರಿ ಗ್ರಾಮದ ಪಾಲಕರ ಮನೆಗಳಿಗೆ ತೆರಳಿ ನಗದು ನೀಡಿರುವ ಮಾಹಿತಿ ''''''''ಕನ್ನಡಪ್ರಭ''''''''ಕ್ಕೆ ಲಭ್ಯವಾಗಿದೆ.ವಿದ್ಯಾರ್ಥಿಗ ಬ್ಯಾಂಕ್ ಖಾತೆ ಇಲ್ಲದಿದ್ದರೆ ಪಾಲಕರ ಬ್ಯಾಂಕ್ ಖಾತೆಗೆ ನೆಫ್ಟ್ ಮಾಡುವುದು ನಿಯಮ. ಆದರೆ ಪ್ರಭಾರಿ ಮುಖ್ಯಶಿಕ್ಷಕ ಉಮೇಶ ಸರ್ಕಾರಿ ನಿಯಮ ಗಾಳಿಗೆ ತೂರಿ ವಿದ್ಯಾರ್ಥಿಗಳ ಮನೆಗೆ ತೆರಳಿ ನಗದು ನೀಡಿದ್ದಾರೆ ಎಂದು ಪಾಲಕರು ದೂರಿದ್ದಾರೆ. ಈಗಾಗಲೇ ೩ ಮತ್ತು ೪ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ₹೨೪೮ ನೆಫ್ಟ್‌ ಮೂಲಕ ವರ್ಗಾಯಿಸಬೇಕಿತ್ತು. ಆದರೆ ಈಗ ನಗದು ರೂಪದಲ್ಲಿ ಉಮೇಶ ₹೨೫೦ ನೀಡಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹನುಮಂತಪ್ಪ ಹೇಳಿದ್ದಾರೆ.

ಪರಿವರ್ತನಾ ವೆಚ್ಚವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಭಾರಿ ಮುಖ್ಯಶಿಕ್ಷಕ ಉಮೇಶ ಜತೆಗೆ ಇನ್ನೋರ್ವ ಶಿಕ್ಷಕ ಮಲ್ಲಿಕಾರ್ಜುನ ಶಿರಿಗೇರಿ ಭಾಗಿಯಾಗಿದ್ದಾರೆ. ಶಾಲಾ ಅವಧಿಯಲ್ಲಿಯೂ ಹಣ ಹಂಚಿದ್ದಾರೆ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪಾಲಕರು ದೂರಿದ್ದಾರೆ.

ನನ್ನಿಂದ ಯಾವುದೇ ಲೋಪವಾಗಿಲ್ಲ. ಯಾವ ವಿದ್ಯಾರ್ಥಿಯ ಬ್ಯಾಂಕ್ ಖಾತೆ ಇಲ್ಲವೋ ಅವರಿಗೆ ನಗದು ನೀಡಲಾಗಿದೆ ಎಂದು ಮುಖ್ಯೋಪಾಧ್ಯಾಯ ಉಮೇಶ ಹೇಳಿದ್ದಾರೆ.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌