ಧಾರವಾಡ: ಜಿಲ್ಲೆಯಾದ್ಯಂತ ಜ. 26 ರಿಂದ ಫೆ. 24ರವರೆಗೆ ಸಂವಿಧಾನದ ಮೌಲ್ಯಗಳು ಮತ್ತು ಆಶಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸಂವಿಧಾನ ಜಾಗೃತಿ ಜಾಥಾ ನಡೆಯಲಿದೆ. ಜಿಲ್ಲೆಯ ಎಲ್ಲ 146 ಗ್ರಾಪಂಗಳಲ್ಲಿ ಸಂಚರಿಸಲಿದ್ದುಮ ಎಲ್ಲ ಅಧಿಕಾರಿಗಳು ಜೊತೆಗೂಡಿ ಜಾಗೃತಿ ಜಾಥಾ ಹಾಗೂ ಸ್ತಬ್ಧಚಿತ್ರ ಜಾಥಾವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಜ.26 ರಂದು ಜಿಲ್ಲೆಯ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಧ್ವಜಾರೋಹಣದ ನಂತರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಬಕಾಷ ಎಂ.ಎಸ್. ಮಾತನಾಡಿ, ಸಂವಿಧಾನ ಜಾಗೃತಿ ಜಾಥಾದ ವೇಳಾಪಟ್ಟಿಯನ್ನು ತಹಸೀಲ್ದಾರ ಹಾಗೂ ತಾಪಂ ಅಧಿಕಾರಿಗಳಿಗೆ ಮುಂಚಿತವಾಗಿ ನೀಡಲಾಗುವುದು. ಆಯಾ ಗ್ರಾಪಂಗೆ ಸ್ತಬ್ಧಚಿತ್ರ ಆಗಮಿಸಿದಾಗ ಪಿಡಿಓ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಅದನ್ನು ಬರಮಾಡಿಕೊಂಡು ಸಂವಿಧಾನ ಕುರಿತು ಜಾಗೃತಿ ಮೂಡಿಸಬೇಕೆಂದು ಹೇಳಿದರು. ಪ್ರಭಾರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಉಪ ಪೊಲೀಸ್ ಆಯುಕ್ತ ರಾಜೀವ ಎಂ, ಸಭೆಯಲ್ಲಿದ್ದರು.