ಬಸವ ತತ್ವಾಧಾರಿತ ಸಂವಿಧಾನ ಸ್ಮರಣೀಯವಾದುದು: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Sep 16, 2024 1:58 AM

ಸಾರಾಂಶ

ಬಸವಣ್ಣನವರ ಸಂಸತ್ತಿನಲ್ಲಿ ವಿವಿಧ ಸಮಾಜದ 770 ಶರಣರಿದ್ದರು. ಮಹಿಳೆಯರ ಸಮಾನತೆಗಾಗಿಯು ಅವರು ಶ್ರಮಿಸಿದ್ದರು. ಅವರ ತತ್ವ ಸಿದ್ದಾಂತಗಳನ್ನು ಡಾ.ಅಂಬೇಡ್ಕರರು ಸಂವಿಧಾನದ ಮೂಲಕ ಜಾರಿಗೆ ತಂದು ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದರು

ಕನ್ನಡಪ್ರಭ ವಾರ್ತೆ ಬೀದರ್‌

ಸಂವಿಧಾನದ ಸದಾಶಯಗಳಾದ ಸ್ವಾತಂತ್ರ‍್ಯ, ಸಮಾನತೆ, ಭ್ರಾತೃತ್ವವನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವ ಸಲುವಾಗಿ. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನುವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು.

ಅವರು ಭಾನುವಾರ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಪಂ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಸವಣ್ಣನವರ ಸಂಸತ್ತಿನಲ್ಲಿ ವಿವಿಧ ಸಮಾಜದ 770 ಶರಣರಿದ್ದರು. ಮಹಿಳೆಯರ ಸಮಾನತೆಗಾಗಿಯು ಅವರು ಶ್ರಮಿಸಿದ್ದರು. ಅವರ ತತ್ವ ಸಿದ್ದಾಂತಗಳನ್ನು ಡಾ.ಅಂಬೇಡ್ಕರರು ಸಂವಿಧಾನದ ಮೂಲಕ ಜಾರಿಗೆ ತಂದು ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸಿದರು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿ ಕಾರ್ಯಕ್ರಮ ಬಸವಣ್ಣನವರ ಅನುಭವ ಮಂಟಪದಿಂದ ಚಾಲನೆಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ ಎಂದು ಹೇಳಿದರು.

ರಾಜ್ಯದಾದ್ಯಂತ 2500 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಬೀದರ್‌ ಜಿಲ್ಲೆಯಲ್ಲಿ 45 ಕಿ.ಮೀ ಇರಲಿದ್ದು. ಇದರಲ್ಲಿ 35 ಸಾವಿರ ಜನ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕ ಕನ್ನಡ ಪರ ಸಂಘಟನೆಗಳು. ವಿವಿಧ ಸಂಘ- ಸಂಸ್ಥೆಗಳು. ದಲಿತಪರ ಸಂಘಟನೆಗಳು ಮತ್ತು ಕಾರ್ಯಕ್ರಮದ ಮೆರಗು ತರಲಿರುವ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗೆ ಅಭಿನಂದಿಸುತ್ತೇನೆ ಎಂದರು.

ಇಂದು ಸಮಾಜದಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಒಡೆದಾಳುವ ನೀತಿ, ಸೇಡು, ಹಿಂಸೆ, ಅಸೂಯೆ ದಿನೇ ದಿನೇ ಹೆಚ್ಚಾಗುತ್ತಿರುವ ಕಲುಷಿತ ವಾತಾವರಣವನ್ನು ನೋಡುತ್ತಿದ್ದೇವೆ. ನಾವೆಲ್ಲರೂ ಸಹೋದರ ಭಾವದಿಂದ ಬದುಕಬೇಕಿದೆ. ಎಲ್ಲಾ ಜಾತಿ, ಧರ್ಮಗಳ ಜನರ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಕೆಲಸ ಮಾಡುವ ಮೂಲಕ ಸಂವಿಧಾನದ ಸದಾಶಯಗಳನ್ನು ಅನುಷ್ಠಾನ ಮಾಡುವ ಕೆಲಸ ಮಾಡುತ್ತಿದೆ ಎಂದರು.

ಭಾರತದ ಸಂವಿಧಾನ ಜಗತ್ತಿನ ಶ್ರೇಷ್ಠ ಸಂವಿಧಾನವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಸ್ವಾತಂತ್ರ‍್ಯ, ಸಮಾನತೆ, ಸಹೋದರತ್ವ, ದೇಶದ ಏಕತೆ, ಅಖಂಡತೆಯ ಬಗ್ಗೆ ತಿಳಿಸಬೇಕಿದೆ. ಭವಿಷ್ಯದ ಪ್ರಜೆಗಳು ನಮ್ಮ ಮಕ್ಕಳು ಹಿಂದು, ಮುಸ್ಲಿಂ, ಸಿಖ್‌, ಇಸಾಯಿ ಎಲ್ಲರೂ ಸಹೋದರರಾಗಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು ಎಲ್ಲರಿಗೂ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.

ಬಸವಕಲ್ಯಾಣ ಅನುಭವ ಮಂಟಪದಿಂದ ಬೀದರ್‌ ಜಿಲ್ಲೆಯ ಗಡಿಯಾದ ಹಳ್ಳಿಖೇಡ (ಕೆ) ವರೆಗೆ ಸಾವಿರಾರು ಮಕ್ಕಳು ಸರತಿ ಸಾಲಿನಲ್ಲಿ ನಿಂತು ಕೈ- ಕೈ ಹಿಡಿದು ಮಾನವ ಸರಪಳಿ ರಚಿಸಿ ಗಮನಸೆಳೆದರು. ಕೆಲವೊಂದು ಶಾಲೆಯ ಮಕ್ಕಳು ಸಂತ, ಶರಣರು ಹಾಗೂ ರಾಷ್ಟ್ರ ನಾಯಕರ ವಿವಿಧ ವೇಷ ಭೂಷಣಗಳನ್ನು ಧರಿಸಿ ಬಂದು ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದರು.

ಕಾರ್ಯಕ್ರಮದಲ್ಲಿ ಪೌರಾಡಳಿತ ಮತ್ತು ಹಜ್‌ ಸಚಿವರಾದ ರಹೀಮ್‌ಖಾನ್‌, ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಬೀದರ್‌ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ವಿವಿಧ ಕನ್ನಡ ಪರ ಸಂಘಟನೆಗಳು, ಸ್ವ- ಸಹಾಯ ಸಂಘಗಳು, ದಲಿತಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.

Share this article