ಕ್ರೀಡೆ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಹಕಾರಿ

KannadaprabhaNewsNetwork | Published : Jan 1, 2025 12:01 AM

ಸಾರಾಂಶ

ಇತ್ತೀಚಿನ ದಿನಗಳಲ್ಲಿ ನಾಗರಿಕರು ಮತ್ತು ಯುವಕರು ದೈಹಿಕ ಕಸರತ್ತಿನ ಕ್ರೀಡೆಯಲ್ಲಿ ತೊಡಗಿಕೊಳ್ಳದೆ ಇರುವುದರಿಂದ ಕ್ರೀಡಾಪಟುಗಳ ಕೊರತೆ ಎದ್ದು ಕಾಣುತ್ತಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವ್ಯಕ್ತಿಯಲ್ಲಿ ಶಿಸ್ತು, ಏಕಾಗ್ರತೆ, ಸಾಮಾಜಿಕ ಭಾಗವಹಿಸುವಿಕೆಯ ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುತ್ತದೆ ಎಂದು ನಗರಸಭಾ ಸದಸ್ಯ ಪ್ರದೀಪ್ ತಿಳಿಸಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಜೂನಿಯರ್ ಕಾಲೇಜು ಕ್ರಿಕೆಟ್ ಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ಸಂವಿಧಾನ ಕಪ್- ಕ್ರಿಕೆಟ್ ಲೀಗ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ನಂಜನಗೂಡು ಧಾರ್ಮಿಕ ಇತಿಹಾಸದ ಜೊತೆಗೆ ಕ್ರೀಡೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಖ್ಯಾತಿ ಹೊಂದಿತ್ತು. ಇತ್ತೀಚಿನ ದಿನಗಳಲ್ಲಿ ನಾಗರಿಕರು ಮತ್ತು ಯುವಕರು ದೈಹಿಕ ಕಸರತ್ತಿನ ಕ್ರೀಡೆಯಲ್ಲಿ ತೊಡಗಿಕೊಳ್ಳದೆ ಇರುವುದರಿಂದ ಕ್ರೀಡಾಪಟುಗಳ ಕೊರತೆ ಎದ್ದು ಕಾಣುತ್ತಿದೆ. ಇದೇ ರೀತಿ ಎಲ್ಲಾ ಕ್ರೀಡೆಗಳ ಪಂದ್ಯಾವಳಿಗಳ ಆಯೋಜಿಸುವ ಮೂಲಕ ನಂಜನಗೂಡಿನ ಕ್ರೀಡಾ ಇತಿಹಾಸ ಮರುಕಳಿಸುವಂತಾಗಲಿ ಎಂದು ಅವರು ಆಶಿಸಿದರು.

ಆಯೋಜಕ ಚೇತನ್ ಮಾತನಾಡಿ, ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದ್ದು, ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಗಳಿಂದ 25 ಹೆಚ್ಚು ತಂಡಗಳು ಭಾಗಿಯಾಗಿದ್ದವು ಎಂದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ನರಸೀಪುರ ಆರ್.ಸಿ. ಚಾಲೆಂಜರ್ಸ್ ತಂಡ ಮತ್ತು ನಂಜನಗೂಡಿನ ಶ್ರೀರಾಂಪುರ ಕ್ರಿಕೆಟ್ ತಂಡಗಳ ನಡುವೆ ನಡೆದ ಅಂತಿಮ ಸೆಣಸಾಟದಲ್ಲಿ ನರಸೀಪುರ ಆರ್‌ ಸಿ ಚಾಲೆಂಜರ್ಸ್ ತಂಡ ವಿಜೇತರಾಗುವ ಮೂಲಕ ಪ್ರಥಮ ಬಹುಮಾನ 1 ಲಕ್ಷ ಮತ್ತು ಆಕರ್ಷಕ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು. ನಂಜನಗೂಡು ಶ್ರೀರಾಂಪುರ ತಂಡ ದ್ವಿತೀಯ ಬಹುಮಾನ 50 ಸಾವಿರ ಮತ್ತು ಆಕರ್ಷಕ ಟ್ರೋಫಿಯನ್ನು ಪಡೆದುಕೊಂಡಿತು. ನಂಜನಗೂಡಿನ ಎನ್.ಎಫ್. ಸಿ.ಸಿ ತಂಡ ತೃತೀಯ ಬಹುಮಾನ ಪಡೆಯಿತು.

ವಿಶ್ವಕರ್ಮ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ನಂದಕುಮಾರ್, ತಾಪಂ ಮಾಜಿ ಉಪಾಧ್ಯಕ್ಷ ಮಹದೇವಯ್ಯ, ಮುಖಂಡರಾದ ಎಂ. ಮಾದಪ್ಪ, ಚೇತನ್, ತ್ರಿಲೋಚನ, ಮಧು, ಅಭಿ ಅವಿನಾಶ್, ಕುಮಾರಸ್ವಾಮಿ, ರಘು ಮೊದಲಾದವರು ಇದ್ದರು.

Share this article