ಸಂವಿಧಾನ ಸರಿಯಾಗಿ ಅನುಷ್ಠಾನವಾಗಿಲ್ಲ : ಸಿದ್ದರಾಮಯ್ಯ

KannadaprabhaNewsNetwork |  
Published : Nov 27, 2025, 01:45 AM IST
Siddaramaiah

ಸಾರಾಂಶ

ದೇಶದಲ್ಲಿ ಸಂವಿಧಾನ ಇಂದಿಗೂ ಸರಿಯಾಗಿ ಜಾರಿಯಾಗಿಲ್ಲ. ನಮ್ಮಲ್ಲಿ ಇನ್ನೂ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಅಸಮಾನತೆ ಇದೆ. ಪಟ್ಟಭದ್ರರು ಸಮಾನತೆಗೆ ಅಡ್ಡಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು :  ದೇಶದಲ್ಲಿ ಸಂವಿಧಾನ ಇಂದಿಗೂ ಸರಿಯಾಗಿ ಜಾರಿಯಾಗಿಲ್ಲ. ನಮ್ಮಲ್ಲಿ ಇನ್ನೂ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಅಸಮಾನತೆ ಇದೆ. ಪಟ್ಟಭದ್ರರು ಸಮಾನತೆಗೆ ಅಡ್ಡಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಸಮಾನತೆ, ತಾರತಮ್ಯ ಇರುವವರೆಗೆ ಸಂವಿಧಾನದ ಆಶಯಗಳು ಈಡೇರಿಲ್ಲವೆಂದೇ ಹೇಳಬೇಕಾಗುತ್ತದೆ. ಹೀಗಾಗಿ, ಸಂವಿಧಾನದ ಆಶಯಗಳ ಈಡೇರಿಕೆಗೆ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಅಂಬೇಡ್ಕರ್ ಅವರ ಸಂವಿಧಾನಕ್ಕೆ ಮೊದಲು ದೇಶದಲ್ಲಿ ಅಲಿಖಿತ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿಯಲ್ಲಿದ್ದ ಮನುಷ್ಯ ವಿರೋಧಿ, ಸಮಾನತೆ ವಿರೋಧಿ ನಿಯಮಗಳಿಗೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಅವಕಾಶ ಇಲ್ಲದಂತಾಯಿತು. ಅದಕ್ಕೆ ಮನುವಾದಿಗಳು ನಮ್ಮ ಸಂವಿಧಾನ ವಿರೋಧಿಸುತ್ತಾರೆ. ಸಮ ಸಮಾಜ ನಿರ್ಮಾಣ, ಅಸಮಾನತೆ ನಿವಾರಣೆ ನಮ್ಮ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.

ಮನುವಾದಿಗಳು ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಕಡಿಮೆ ಎಂದು ವಾದಿಸುತ್ತಾರೆ. ಅವರು ದಲಿತ ಸಮುದಾಯದವರಾಗಿರುವ ಕಾರಣ ಹೊಟ್ಟೆಕಿಚ್ಚಿನಿಂದ ಹಾಗೆ ಹೇಳುತ್ತಾರೆ. ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎನ್ನುವುದನ್ನು ಮರೆಯಬಾರದು. ಈ ದೇಶದ ಜಾತಿ ವ್ಯವಸ್ಥೆ ಮತ್ತು ಅಪಾಯಗಳ ಬಗ್ಗೆ ಅಂಬೇಡ್ಕರ್ ಅವರಿಗೆ ಅರ್ಥವಾಗಿತ್ತು. ಹೀಗಾಗಿಯೇ ನಮ್ಮ ಸಂವಿಧಾನದಲ್ಲಿ ಮೀಸಲಾತಿ ಸೇರಿಸಿದರು ಎಂದು ಮುಖ್ಯಮಂತ್ರಿಯವರು ಹೇಳಿದರು.

ದ್ವೇಷಿಸಿ ಎಂದು ಹೇಳುವುದಿಲ್ಲ. ಪ್ರೀತಿಸಿ ಎನ್ನುತ್ತದೆ

ಯಾವುದೇ ಧರ್ಮ ಮಹಿಳೆಯರು, ಕಾರ್ಮಿಕರು, ಹಿಂದುಳಿದವರು, ಅಲ್ಪಸಂಖ್ಯಾತರನ್ನು ದ್ವೇಷಿಸಿ ಎಂದು ಹೇಳುವುದಿಲ್ಲ. ಪ್ರೀತಿಸಿ ಎನ್ನುತ್ತದೆ. ಆದರೆ, ಪ್ರೀತಿಸುವುದಿಲ್ಲ. ನಾವು ಎಲ್ಲರನ್ನೂ ಪ್ರೀತಿಯಿಂದ ಕಾಣುವುದನ್ನು ಕಲಿಯಬೇಕು. ಸಾಂವಿಧಾನಿಕ ಸಭೆಯಲ್ಲಿ ನಡೆದ ಚರ್ಚೆಗಳನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿರುವುದನ್ನು ತರ್ಜುಮೆ ಮಾಡಿದ್ದೇನೆ. ಮಾತೃಭಾಷೆಯಲ್ಲಿ ಕನ್ನಡಿಗರು ಓದಿದರೆ ಚೆನ್ನಾಗಿ ನೆನಪಿರುತ್ತದೆ ಎಂದು ತರ್ಜುಮೆ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಇಂದು ನಾವು ಇಡೀ ದೇಶದಲ್ಲಿ ಹಾರಿಸಬೇಕಾಗಿರುವುದು ಭಾರತದ ತ್ರಿವರ್ಣ ಧ್ವಜ, ಸಂವಿಧಾನ. ಬೇರೆ ಯಾವುದೇ ಬಣ್ಣ, ಧರ್ಮದ ಧ್ವಜ ಆಕಾಶಕ್ಕೆ ಹಾರಲು ಸಾಧ್ಯವೇ ಇಲ್ಲ. ಇದನ್ನು ಹೊರತುಪಡಿಸಿ ರಾಜಕೀಯ ಪಕ್ಷಗಳಿಂದ ಧರ್ಮ ಮತ್ತು ಜಾತಿ ಆಧರಿಸಿದ ನಡೆಗಳು ಸಂವಿಧಾನದ ಮೂಲತತ್ವಗಳಿಗೆ ವಿರುದ್ಧ ಎಂದರು.

ಸಚಿವರಾದ ಕೆ.ಹೆಚ್.ಮುನಿಯಪ್ಪ, ಎಂ.ಸಿ.ಸುಧಾಕರ್, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಿದ್ದು ನಾಯಕತ್ವ ಗಟ್ಟಿಪಡಿಸುವ ಹೊಣೆ ಇದೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ರಾಜ್ಯ ಮತ್ತು ದೇಶದ ಎಸ್ಸಿ, ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆ, ಕಾರ್ಮಿಕ, ರೈತ ಸಮುದಾಯದ ಪರ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಅಂತಹ ನಾಯಕತ್ವವನ್ನು ಗಟ್ಟಿಪಡಿಸುವ ಜವಾಬ್ದಾರಿ ಎಲ್ಲ ಶೋಷಿತ ಸಮುದಾಯಗಳ ಹೊಣೆಗಾರಿಕೆ. ಸಾರ್ವಜನಿಕ ಬದ್ಧತೆ ಮತ್ತು ತಾತ್ವಿಕ ನಿಲುವು ಇಲ್ಲದವರು ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯಗಳೆಲ್ಲವೂ ಮೂಲೆಗುಂಪಾಗುತ್ತವೆ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.

PREV
Read more Articles on

Recommended Stories

ನೀರಿನ ಶುಲ್ಕದ ಬಡ್ಡಿ, ದಂಡ ಮನ್ನಾ?
ಕಿತ್ತಳೆ ಮೆಟ್ರೋ ಡಬಲ್‌ಡೆಕ್ಕರ್‌ಗೆ 5 ಕಡೆ ಪ್ರವೇಶ