ಸಂವಿಧಾನ ಶಾಂತಿ, ಸೌಹಾರ್ದತೆಯ ಪ್ರತೀಕ: ಬರಗೂರು ರಾಮಚಂದ್ರಪ್ಪ

KannadaprabhaNewsNetwork |  
Published : Apr 23, 2025, 12:33 AM IST
ಪೊಟೋ ಪೈಲ್ ನೇಮ್  ೨೨ಎಸ್‌ಜಿವಿ೨    ಕರ್ನಾಟಕ ಸಾಹಿತ್ಯ ಅಕಾಡೆಮಿಯ ೩ ದಿನಗಳ ಶಿಬಿರಕ್ಕೆ ವಿದ್ಯುಕ್ತ ಚಾಲನೆಸಾಹಿತ್ಯದಲ್ಲಿ ಸಾಂವಿಧಾನಿಕ ಆಶಯ ಹುಡುಕುವುದು ಅಂತರಶಿಸ್ತಿಯ ಅಧ್ಯಯನದ ಪ್ರೇರೇಪಣೆಗೆ ಹೊಸ ಆಯಾಮ: ನಾಡೋಜ ಪ್ರೊ.ಬರಗೂರ ರಾಮಚಂದ್ರಪ್ಪ | Kannada Prabha

ಸಾರಾಂಶ

ಸಂವಿಧಾನವು ಬದುಕುವ, ಮಾತನಾಡುವ ಅನೇಕ ಹಕ್ಕುಗಳನ್ನು ದಕ್ಕಿಸಿದೆ. ಹೀಗಾಗಿ ಸಂವಿಧಾನ ಹಾಗೂ ಬದುಕು ಮತ್ತು ಬದುಕಿನ ಸಂವೇದನೆಯ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ.

ಶಿಗ್ಗಾಂವಿ: ಸಂವಿಧಾನವು ಶಾಂತಿ, ಸೌಹಾರ್ದತೆಯ ಬಗ್ಗೆ ಹೇಳುತ್ತದೆ. ಸಂವಿಧಾನವು ಬರೀ ವಕೀಲರ ದಾಖಲೆ ಅಲ್ಲ ಎಂಬುದಾಗಿ ತಿಳಿಸಿದ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಮಾತನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಮೇಲ್ನೋಟಕ್ಕೆ ಸಂವಿಧಾನವು ನಿಯಮಗಳ ನುಡಿಗಟ್ಟಾದರೂ ಸಂವಿಧಾನದಲ್ಲೂ ಸಂವೇದನೆ ಇದೆ ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ತಿಳಿಸಿದರು.ಗೋಟಗೊಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ; ಸಾಂವಿಧಾನಿಕ ಆಶಯಗಳು ೩ ದಿನಗಳ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಂವಿಧಾನವು ಬದುಕುವ, ಮಾತನಾಡುವ ಅನೇಕ ಹಕ್ಕುಗಳನ್ನು ದಕ್ಕಿಸಿದೆ. ಹೀಗಾಗಿ ಸಂವಿಧಾನ ಹಾಗೂ ಬದುಕು ಮತ್ತು ಬದುಕಿನ ಸಂವೇದನೆಯ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ ಎಂದರು. ಇಡೀ ದೇಶ, ಸಮಾಜವನ್ನು ಒಳಗೊಂಡ ಸಂವಿಧಾನದ ಹಿಂದೆ ಮಾನವೀಯ ಮೌಲ್ಯವಿದೆ. ಅಂತಹ ಮೌಲ್ಯಗಳು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕಾಣಸಿಗುತ್ತದೆ ಎಂದರು.

ಸಂವಿಧಾನವು ಒಂದು ಕಾನೂನಾತ್ಮಕ ಪರಿಭಾಷೆಯಾದರೂ ಅದರೊಳಗಡೆ ಇತಿಹಾಸವಿದೆ, ಪ್ರತಿರೋಧವಿದೆ. ಆ ಪ್ರತಿರೋಧದ ನೆಲೆಗಳು ಸಾಹಿತ್ಯದಲ್ಲೂ ಇದೆ. ಪಂಪನಿಂದ ಕುವೆಂಪುವರೆಗಿನ ಸಾಹಿತ್ಯದಲ್ಲಿ ಇದನ್ನು ಕಾಣಬಹುದಾಗಿದೆ. ಸಂವಿಧಾನವು ಏನನ್ನು ಒಳಗೊಂಡಿರುತ್ತದೆ ಎಂದು ಅದರೊಳಗಡೆ ಇರುವ ಒಳಹೂರಣವನ್ನು ಅರ್ಥ ಮಾಡಿಕೊಂಡು ಸಾಹಿತ್ಯದಲ್ಲಿ ಅದರ ಆಶಯಗಳನ್ನು ಹುಡುಕುವುದು, ಅರ್ಥೈಸಿಕೊಳ್ಳುವುದು ಅತಿ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ನಮಗೆ ಎಲ್ಲವೂ ಸಿಕ್ಕಿದ್ದು ಸ್ವಾತಂತ್ರ‍್ಯ ಬಂದು ಸಂವಿಧಾನ ಜಾರಿಯಾದ ನಂತರ. ಸಂವಿಧಾನವನ್ನು ನಾಶ ಮಾಡುವ ಕಾರ್ಯ ಈಗ ನಡೆಯುತ್ತಿದೆ. ಇದನ್ನು ಯುವ ಲೇಖಕರು ಅರಿಯಬೇಕು. ಸಂವಿಧಾನ ಉಳಿಸುವುದೆಂದರೆ ಇನ್ನೊಬ್ಬರನ್ನು ವಿರೋಧಿಸುವ ಮಾತಲ್ಲ, ಬದಲಾಗಿ ಎಲ್ಲರೂ ಸಮಾನರಾಗಿ ಬಾಳಬೇಕು, ನಮ್ಮ ಹಕ್ಕುಗಳನ್ನು ರಕ್ಷಿಸುವ ಕಾರ್ಯವದು ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಮಾತನಾಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಿರಿಯ ಸಾಹಿತಿ ಗುರುಲಿಂಗ ಕಾಪಸೆ, ಬರಗೂರು ರಾಮಚಂದ್ರಪ್ಪ, ಗಿರಡ್ಡಿ ಗೋವಿಂದರಾಜ, ಗೀತಾ ನಾಗಭೂಷಣ ಸೇರಿದಂತೆ ಅನೇಕ ಮಹನಿಯರ ಅಧ್ಯಕ್ಷತೆಯಲ್ಲಿ ಹಲವಾರು ದಶಕಗಳ ಕಾಲ ಮಹತ್ತರ ಕಾರ್ಯ ಮಾಡುತ್ತ ಬಂದಿದೆ. ಅಕಾಡೆಮಿಯಿಂದ ಶಿಬಿರ ಮಾಡುತ್ತಿದ್ದೇವೆ. ಅನಿಕೇತನ ಪ್ರಕಟಿಸುತ್ತಿದ್ದೇವೆ. ವಾರ್ಷಿಕ ಸಂಕಲನ ತರುತ್ತಿದ್ದೇವೆ. ಹೀಗೆ ಕಾಲವಾರು ಬೇರೆ ಬೇರೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.ಜಾನಪದ ವಿವಿಯ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಮಾನ್ಪಡೆ, ಸಾಹಿತಿ ಜುಬೇದಾ ನಾಯಕ ಮಾತನಾಡಿದರು. ಜಾನಪದ ವಿವಿಯ ಪ್ರೊ. ಟಿ.ಎಂ. ಭಾಸ್ಕರ್, ಜಾನಪದ ವಿವಿಯ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಕಮ್ಮಟದ ನಿರ್ದೇಶಕ ಡಾ. ಎ.ಬಿ. ರಾಮಚಂದ್ರಪ್ಪ, ಡಾ. ಜಿ. ಪ್ರಶಾಂತ ನಾಯಕ, ಸಾಕ್ಷ್ಯಚಿತ್ರದ ನಿರ್ದೇಶಕ ಗೂಳಪ್ಪ ಅರಳಿಕಟ್ಟಿ, ಜಾನಪದ ವಿವಿಯ ಅಧಿಕಾರಿಗಳು ಮತ್ತು ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಸೇರಿದಂತೆ ಇತರರು ಇದ್ದರು. ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಸೊಬಟಿ ನಿರೂಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ