ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ವಿರುದ್ಧ ನಿರ್ಮಿತಿ ಕೇಂದ್ರದ ಮಾತೃ ಸಂಸ್ಥೆಯಾದ ಕರ್ನಾಟಕ ಸರ್ಕಾರದ ವಸತಿ ಇಲಾಖೆಯ ಸ್ವಾಯತ್ತ ಸಂಸ್ಥೆ ಕರ್ನಾಟಕ ರಾಜ್ಯ ನಿರ್ಮಾಣ ಕೇಂದ್ರ(ಕಾರ್ನಿಕ) ತನಿಖೆಗೆ ಮುಂದಾಗಿದ್ದು, ಅಧಿಕೃತವಾಗಿ ತನಿಖೆ ನಡೆಸಲು ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಿದ ಆದೇಶದ ಪ್ರತಿ ಹೊರಬಿದ್ದಿದೆ.
ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿರುವ ಶಂಕರಲಿಂಗ ಗೋಗಿ ಅವರು ಈ ಹಿಂದೆ ಕಾರ್ಯನಿರ್ವಹಿಸಿದ ಕಾರವಾರ ಹಾಗೂ ಕೊಪ್ಪಳ ನಿರ್ಮಿತಿ ಕೇಂದ್ರದಲ್ಲಿನ ಕಾಮಗಾರಿಗಳ ಅನುಷ್ಠಾನ, ಆರ್ಥಿಕ ಲೋಪ ಹಾಗೂ ಅವರ ವಿರುದ್ಧ ಬಂದಿರುವ ಹಲವು ದೂರುಗಳ ಕುರಿತು ಸಮಗ್ರ ತನಿಖೆಗೆ ಆದೇಶಿಸಿರುವ ಸರ್ಕಾರದ ಅಂಗ ಸಂಸ್ಥೆಯಾಗಿರುವ ಕಾರ್ನಿಕದ ಆದೇಶ ಇದೀಗ ನಿರ್ಮಿತಿ ಕೇಂದ್ರದ ಅವ್ಯವಹಾರವನ್ನು ತೆರೆದಿಡಬಹುದೆ ಎಂಬ ಸಹಜ ಕುತೂಹಲ ಕಾಡುತ್ತಿದೆ.ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದ ಕಾರ್ನಿಕ:
ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿರುವುದು ಆಯಾ ಜಿಲ್ಲಾಧಿಕಾರಿಗಳು. ಹೀಗಾಗಿ ಬಾಗಲಕೋಟೆ, ಕಾರವಾರ, ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಕಾರ್ನಿಕ, ಇವರ ಸೇವಾವಧಿಯಲ್ಲಿನ ಕಾಮಗಾರಿಗಳ ಅನುಷ್ಠಾನ ಮತ್ತು ಆರ್ಥಿಕ ಲೋಪ ಸೇರಿದಂತೆ ನಿರ್ದಿಷ್ಟ ಆರೋಪಗಳನ್ನು ಸಹ ತನ್ನ ಆದೇಶದಲ್ಲಿ ಪ್ರಸ್ತಾಪಿಸಿದೆ. ಪ್ರಮುಖವಾಗಿ ಬಾಗಲಕೋಟೆ ನಿರ್ಮಿತಿ ಕೇಂದ್ರದಿಂದ ತೆಗೆದ ನಂತರ ಶಂಕರಲಿಂಗ ಗೋಗಿ ಅವರು (ಕಾರ್ನಿಕ) ಸಂಸ್ಥೆಯ ಉಪನಿರ್ದೇಶಕ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿ ಕಾರ್ಯನಿರ್ವಹಣೆ ಸಂದರ್ಭದಲ್ಲಿ ಉಡುಪಿ ಹಾಗೂ ಬೀದರ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾಗಲು ಸಚಿವರ ಶಿಫಾರಸನ್ನು ಮಾಡಿರುವ ಕುರಿತು ವಸತಿ ಇಲಾಖೆಯ ಕ್ರಮವೇನು? ಬಾಗಲಕೋಟೆಯಲ್ಲಿ ಈ ಹಿಂದೆ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ 24.06.2024 ರ ಕೆಡಿಪಿ ಸಭೆಯಲ್ಲಿ ಇವರ ಕಾರ್ಯವೈಖರಿ, ಮತ್ತು ಕಾಮಗಾರಿಗಳಲ್ಲಿನ ಅನುಷ್ಠಾನದಲ್ಲಿನ ಆರ್ಥಿಕ ಲೋಪವೆಸಗಿದ ಕಾರಣದಿಂದ ಸೇವೆಯಿಂದ ಬಿಡುಗಡೆ ಮಾಡಿರುವ ಕುರಿತು ಸಹ ಪ್ರಸ್ತಾಪಿಸಲಾಗಿದೆ.ತನಿಖೆಯ ಪ್ರಮುಖ ಅಂಶಗಳು:
ಬಾಗಲಕೋಟೆ, ಕೊಪ್ಪಳ, ಕಾರವಾರದಲ್ಲಿನ ಇವರ ಸೇವಾ ಸಂದರ್ಭದಲ್ಲಿನ ಆರ್ಥಿಕ ಲೋಪವನ್ನು ಪ್ರಮುಖವಾಗಿ ಪ್ರಸ್ತಾಪಿಸಿರುವ ಕಾರ್ನಿಕ ಸಂಸ್ಥೆ ಬಾಗಲಕೋಟೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗದ ಸ್ಮಶಾನ ಭೂಮಿ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸದೆ ಅನುದಾನದ ದುರ್ಬಳಕೆಯ ಬಗ್ಗೆ ಬಂದಿರುವ ದೂರು.ಬಾಗಲಕೋಟೆ ಸರ್ಕಾರಿ ಕೈಗಾರಿಕಾ ಸಂಸ್ಥೆಯ ಸಿಒಇ ನಿರ್ಮಾಣ ಕಟ್ಟಡದ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವ ಕುರಿತು ಬಂದಿರುವ ದೂರು.
ಉಲ್ಲೇಖ(6) ರ ಪತ್ರದಲ್ಲಿ ರಾಜ್ಯದ ನಿರ್ಮಿತಿ ಕೇಂದ್ರಗಳ ಕಾರ್ಯಚಟುವಟಿಕೆಗಳ ಕುರಿತು ಇರುವ ಕಾರ್ನಿಕ ಸಂಸ್ಥೆಯ ಮಾರ್ಗಸೂಚಿಯನ್ನು ಅಳವಡಿಸಿಕೊಳ್ಳದೆ ಇರುವುದು, ಯೋಜನಾ ವ್ಯವಸ್ಥಾಪಕರಾಗಿರುವವರಿಗೆ ವಿದ್ಯಾರ್ಹತೆ ಬಿಇ ಸಿವಿಲ್ ಪದವಿ ಸ್ಪಷ್ಟವಾಗಿ ನಿಗದಿಪಡಿಸಿದ್ದರು ಸಹ ಶಂಕರಲಿಂಗ ಗೋಗಿ ಅವರು ಬಿಇ ಮೆಕ್ಯಾನಿಕಲ್ ಇರುವುದರಿಂದ ಮಾರ್ಗಸೂಚಿ ನಿಯಮಗಳ ಉಲ್ಲಂಘನೆಯ ಕುರಿತು ತನಿಖೆ ನಡೆಯಲಿದೆ.ಸಮಿತಿಯಲ್ಲಿ ಹಿರಿಯ ಅಧಿಕಾರಿಗಳ ತಂಡ:
ಶಂಕರಲಿಂಗ ಗೋಗಿ ಅವರ ವಿರುದ್ಧದ ತನಿಖೆಗೆ ರಚಿಸಲಾದ ತಂಡದಲ್ಲಿ ಹಿರಿಯ ಕೆಎಎಸ್ ಅಧಿಕಾರಿ ರಾಜೀವ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ಜಿ.ಕೆ.ಹರೀಶ ಅಧ್ಯಕ್ಷರಾಗಿದ್ದು, ರಾಜೀವ ಗಾಂಧಿ ವಸತಿ ನಿಗಮದ ತಾಂತ್ರಿಕ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿರುವ ಇ.ಪಿ.ಪ್ರಕಾಶ, ಇದೆ ನಿಗಮದ ಮತ್ತೊಬ್ಬ ಹಿರಿಯ ಅಧಿಕಾರಿ ದತ್ತಾತ್ರೇಯ ಸಿಂದಗಿ, (ಕಾರ್ನಿಕ) ಸಂಸ್ಥೆಯ ಹಿರಿಯ ಕಾಮಗಾರಿ ನಿರೀಕ್ಷರಾಗಿರುವ ಎಸ್.ಟಿ.ಮಂಜುನಾಥ ಸದಸ್ಯರಾಗಿದ್ದಾರೆ.15 ದಿನಗಳ ಕಾಲಾವಕಾಶ:
ಶಂಕರಲಿಂಗ ಗೋಗಿ ಅವರ ವಿರುದ್ಧದ ಆರೋಪಗಳ ಸಮಗ್ರ ತನಿಖೆಯನ್ನು ಕೈಗೊಳ್ಳಲು ತನಿಖಾ ಸಮಿತಿಗೆ 15 ದಿನಗಳ ಕಾಲಾವಕಾಶ ನೀಡಿದ್ದು, ಬಾಗಲಕೋಟೆ, ಕಾರವಾರ ಮತ್ತು ಕೊಪ್ಪಳ ಜಿಲ್ಲಾ ನಿರ್ಮಿತಿ ಕೇಂದ್ರಗಳಿಗೆ ಅಗತ್ಯವಿದ್ದಲ್ಲಿ ಭೇಟಿ ನೀಡಿ ಸಮಗ್ರವಾಗಿ ಪರಿಶೀಲಿಸಿ ತನಿಖಾ ವರದಿ ನೀಡಲು ಸೂಚಿಸಲಾಗಿದೆ.-----------ಬಾಕ್ಸ್....ಲೋಕಾಯುಕ್ತ ತನಿಖೆಗೊಳಪಟ್ಟಿದ್ದ ಶಂಕರಲಿಂಗ ಗೋಗಿ
ಸದ್ಯ ತನಿಖೆಗೆ ಒಳಪಡಲಿರುವ ಬಾಗಲಕೋಟೆ ನಿರ್ಮಿತಿ ಕೇಂದ್ರದ ಶಂಕರಲಿಂಗ ಗೋಗಿ ವಿರುದ್ಧ ಈ ಹಿಂದೆ ಲೋಕಾಯುಕ್ತ ರೇಡ್ ಸಹ ಆಗಿತ್ತು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರದ ಮುಖ್ಯಸ್ಥರಿಗೆ ಲೋಕಾಯುಕ್ತರು ಇವರ ಅಮಾನತು ಹಾಗೂ ಇತರ ಕಾರಣಗಳ ಕುರಿತು ಪತ್ರವನ್ನು ಸಹ ಬರೆದಿದ್ದರು. ಆದಾಯ ಮೀರಿ ಆಸ್ತಿ ಗಳಿಸಿರುವ ಕಾರಣದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ:10/2022ಕಲಂ13/1ಬಿ (ಸಹವಾಚನ-13(2))ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ತಿದ್ದುಪಡಿ ಅಧಿನಿಯಮದ ಪ್ರಕಾರ ಪ್ರಕರಣ ದಾಖಲಾಗಿತ್ತು.-------------