ಕನ್ನಡಪ್ರಭ ವಾರ್ತೆ ಬೆಳಗಾವಿ
ಸುವರ್ಣವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಶಾಸಕರು ಧ್ವನಿ ಎತ್ತಿ, ಸರ್ಕಾರದಿಂದ ಉತ್ತರ ಪಡೆಯಲು ಪ್ರಯತ್ನಿಸಬೇಕು. ಇಡೀ ರಾಜ್ಯದ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ. ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಲಾಗುವುದು. ಈ ಭಾಗದ ಸಮಸ್ಯೆಗಳ ಕುರಿತು ಚರ್ಚಿಸಿ, ಸರ್ಕಾರದಿಂದ ಉತ್ತರ ಪಡೆಯಬೇಕಾದದ್ದು ಶಾಸಕರ ಜವಾಬ್ದಾರಿ. ಚಳಿಗಾಲ ಅಧಿವೇಶನವನ್ನು ಅಚ್ವುಕಟ್ಟಾಗಿ ಅಧಿವೇಶನ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿದಿನ 500 ವಿದ್ಯಾರ್ಥಿಗಳಿಗೆ ಸುಗಮ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಸಂಸದೀಯ ವ್ಯವಸ್ಥೆಯ ಕುರಿತು ಅರಿವು ಮೂಡಿಸಲು ವಿವಿಗಳ ಆಯ್ದ 30 ವಿದ್ಯಾರ್ಥಿಗಳಿಗೆ ಇಡೀ ದಿನ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಸಮಾಜದ ಎಲ್ಲ ವರ್ಗದವರಿಗೆ ಕಲಾಪ ವೀಕ್ಷಣೆಗೆ ಅನುಕೂಲವಾಗುವಂತೆ ಕ್ರೀಡಾಪಟುಗಳು, ಮಹಿಳೆಯರು, ಕಾರ್ಮಿಕರು, ಪೌರಕಾರ್ಮಿಕರು, ತೃತೀಯ ಲಿಂಗಿಗಳು ಹೀಗೆ ಎಲ್ಲರಿಗೂ ವಿಶೇಷ ಅವಕಾಶ ನೀಡಲಾಗುವುದು. ಉತ್ತರ ಕರ್ನಾಟಕ ವಿಷಯಗಳ ಚರ್ಚೆಗೆ ಆದ್ಯತೆ ನೀಡಲಾಗುವುದು. ಬಿಎಸಿ ಸಭೆಯಲ್ಲಿ ಚರ್ಚೆಯ ವಿಷಯಗಳ ಬಗ್ಗೆ ತೀರ್ಮಾನಿಸಲಾಗುವುದು. ಸದನದಲ್ಲಿ ಹಾಜರಾತಿ ಪ್ರಮಾಣ ಕ್ರಮೇಣ ಸುಧಾರಣೆಯಾಗುತ್ತಿದೆ. ಕಳೆದ ಬಾರಿಯ ಅಧಿವೇಶನ ಯಶಸ್ವಿಯಾಗಿದೆ ಎಂದರು.ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕ ಭರಮಗೌಡ ಕಾಗೆ ಹೇಳಿಕೆ ನೀಡಿರುವುದು ತಪ್ಪು. ಅಂತಹ ಬೇಡಿಕೆಗಳನ್ನು ಯಾರೂ ಮಂಡಿಸಬಾರದು ಎಂದು ಹೇಳಿದರು.