ಸುರಕ್ಷತೆ ಮರೆತು ಕಟ್ಟಡ ಸಾಮಗ್ರಿ ಸಾಗಾಟ!

KannadaprabhaNewsNetwork |  
Published : Oct 03, 2026, 02:45 AM IST
ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿ ರಸ್ತೆಯ ಮಧ್ಯದಲ್ಲಿಯೇ ಮರಳು, ಜಲ್ಲಿ ಚೆಲ್ಲುರುವುದು. | Kannada Prabha

ಸಾರಾಂಶ

ಮರಳು, ಜಲ್ಲಿ ಮತ್ತು ಸಿಮೆಂಟ್‌ ಸಾಗಿಸುವ ಹಲವು ವಾಹನಗಳಿಗೆ ಹೊದಿಕೆ ಇಲ್ಲ. ಹೀಗಾಗಿ ಸಂಚಾರದ ವೇಳೆ ಧೂಳು ಗಾಳಿಗೆ ಹಾರುವುದಲ್ಲದೆ, ಜಲ್ಲಿ ಹಾಗೂ ಮರಳು ರಸ್ತೆಗೆ ಬೀಳುತ್ತಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ನಗರದ ಪ್ರಮುಖ ರಸ್ತೆಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಾಟವೇ ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿವೆ. ಮರಳು, ಜಲ್ಲಿ ಹಾಗೂ ಸಿಮೆಂಟ್‌ ತುಂಬಿದ ಲಾರಿ, ಟಿಪ್ಪರ್‌ಗಳು ಸುರಕ್ಷತಾ ಕ್ರಮವಿಲ್ಲದೆ ಸಂಚರಿಸುತ್ತಿದ್ದು ವಾಹನ ಸವಾರರು ಹಾಗೂ ಪಾದಚಾರಿಗಳ ಸುರಕ್ಷತೆ ಕುರಿತು ಪ್ರಶ್ನೆ ಮೂಡಿದೆ.

ಮರಳು, ಜಲ್ಲಿ ಮತ್ತು ಸಿಮೆಂಟ್‌ ಸಾಗಿಸುವ ಹಲವು ವಾಹನಗಳಿಗೆ ಹೊದಿಕೆ ಇಲ್ಲ. ಹೀಗಾಗಿ ಸಂಚಾರದ ವೇಳೆ ಧೂಳು ಗಾಳಿಗೆ ಹಾರುವುದಲ್ಲದೆ, ಜಲ್ಲಿ ಹಾಗೂ ಮರಳು ರಸ್ತೆಗೆ ಬೀಳುತ್ತಿದೆ. ವಿಶೇಷವಾಗಿ ಬೈಕ್‌ ಸವಾರರಿಗೆ ಇದು ತೊಂದರೆ ಉಂಟು ಮಾಡುತ್ತಿದ್ದು, ಕಣ್ಣಿಗೆ ಧೂಳು ಬಿದ್ದರೆ ಕ್ಷಣ ಮಾತ್ರದಲ್ಲೇ ವಾಹನದ ನಿಯಂತ್ರಣ ತಪ್ಪುವ ಸಾಧ್ಯತೆಯಿದೆ. ರಸ್ತೆಗೆ ಬಿದ್ದ ಜಲ್ಲಿ ಕಲ್ಲಿನಿಂದ ಬೈಕ್‌ ಜಾರುವ ಅಪಾಯವೂ ಹೆಚ್ಚಿದೆ.

ರಾಡ್‌ ಸಾಗಾಟಕ್ಕೆ ನಿಯಮಗಳಿಲ್ಲವೇ?:

ಕಟ್ಟಡ ಸಾಮಗ್ರಿ ಸಾಗಾಟದ ಮತ್ತೊಂದು ಗಂಭೀರ ಸಮಸ್ಯೆ ಉದ್ದನೆಯ ಸ್ಟೀಲ್‌ ರಾಡ್‌ಗಳದ್ದು. ಸಣ್ಣ ಲಾರಿ ಹಾಗೂ ಗೂಡ್ಸ್‌ ವಾಹನಗಳಲ್ಲಿ ನಿಗದಿತ ಮಿತಿಗಿಂತ ರಾಡ್‌ಗಳನ್ನು ಹೊರಚಾಚಿಸಿ ಸಾಗಿಸಲಾಗುತ್ತಿದೆ. ಹಿಂದಿನಿಂದ ಬರುವ ಸವಾರರಿಗೆ ಇವು ಸರಿಯಾಗಿ ಗೋಚರಿಸದಿರುವುದು ಅಪಾಯ ಹೆಚ್ಚಿಸಿದೆ. ಕೊನೆಯ ಪಕ್ಷ ಹಿಂಬದಿ ಸವಾರರಿಗೆ ಕಾಣುವಂತೆ ಬಟ್ಟೆಯನ್ನು ಸಹ ಕಟ್ಟುತ್ತಿಲ್ಲ ಎಂಬ ದೂರುಗಳು ಇವೆ.

ಕಟ್ಟಡ ಕಾಮಗಾರಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಣ ಸಾಮಗ್ರಿಗಳ ಸಾಗಾಟವೂ ಹೆಚ್ಚಿದೆ. ಹೀಗಾಗಿ ನಿಯಮಗಳ ಪಾಲನೆಯನ್ನು ಕೇವಲ ವಾಹನ ಮಾಲೀಕರ ಜವಾಬ್ದಾರಿಯೆಂದು ಬಿಟ್ಟುಬಿಡದೆ, ಸಂಬಂಧಪಟ್ಟ ಇಲಾಖೆಗಳು ನಿಯಮಿತ ತಪಾಸಣೆ ನಡೆಸಿ ಉಲ್ಲಂಘನೆಗೆ ಕಡಿವಾಣ ಹಾಕಬೇಕಿದೆ.

ಜಂಟಿ ಸಭೆ, ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ:

ಮಹಾನಗರ ಪಾಲಿಕೆ ಹಾಗೂ ಸಂಚಾರ ಪೊಲೀಸ್‌ ಇಲಾಖೆ ಕಟ್ಟಡ ಸಾಮಗ್ರಿ ಸಾಗಿಸುವ ಲಾರಿ, ಟಿಪ್ಪರ್‌ ಮತ್ತು ಗೂಡ್ಸ್‌ ವಾಹನಗಳ ಮಾಲೀಕರ ಜಂಟಿ ಸಭೆ ಕರೆದು ಸುರಕ್ಷಿತ ಸಾಗಾಟಕ್ಕೆ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು. ಮರಳು, ಸಿಮೆಂಟ್‌ ಹಾಗೂ ಜಲ್ಲಿ ಸಾಗಿಸುವ ವಾಹನಗಳಿಗೆ ಸಂಪೂರ್ಣ ಹೊದಿಕೆ ಕಡ್ಡಾಯಗೊಳಿಸಬೇಕು. ವಾಹನದ ಮಿತಿಯನ್ನು ಮೀರಿ ಸ್ಟೀಲ್‌ ರಾಡ್‌ಗಳನ್ನು ಸಾಗಿಸುವುದನ್ನು ನಿಯಂತ್ರಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಸೇರಿದಂತೆ ಕಾನೂನು ಕ್ರಮಕೈಗೊಳ್ಳಬೇಕು ಎಂಬುದು ಸಾರ್ವಜನಿಕರು ಆಗ್ರಹವಾಗಿದೆ.ಅನಾಹುತ ಸಂಭವಿಸಿದ ಬಳಿಕ ಕ್ರಮಕೈಗೊಳ್ಳುವುದಕ್ಕಿಂತ ಮುನ್ನವೇ ಮುಂಜಾಗ್ರತಾ ಕ್ರಮ ಅಗತ್ಯ. ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ತರುವ ಅಜಾಗರೂಕ ಸಾಗಾಟವನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ತಕ್ಷಣ ನಿಯಂತ್ರಿಸಬೇಕು.

ಲಿಂಗರಾಜ ಧಾರವಾಡಶೆಟ್ಟರ್, ಸಾಮಾಜಿಕ ಹೋರಾಟಗಾರನಗರದ ಪ್ರಮುಖ ರಸ್ತೆಗಳಲ್ಲೇ ಮರಳು, ಜಲ್ಲಿ, ಸಿಮೆಂಟ್‌, ರಾಡ್‌ ತುಂಬಿದ ವಾಹನಗಳು ರಾಜಾರೋಷವಾಗಿ ಸಂಚರಿಸುತ್ತಿವೆ. ಈ ಕುರಿತು ಗಮನ ಹರಿಸಿ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು ಇಂತಹ ಘಟನೆಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.

ಮಹೇಶ ಬೆಟಗೇರಿ, ಸ್ಥಳಿಯ ನಿವಾಸಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆಯ ಪಾದರಕ್ಷೆಗಳಿಗೆ ಹೊಸ ರೂಪ ‘ದಾನ’
ಉಡುಪಿ: ನ. 27ರಿಂದ ರಾಜ್ಯ ಮಟ್ಟದ ಆಹಾರ ಮೇಳ