ಕೂಡ್ಲಿಗಿಯಲ್ಲಿ ಮುಖ್ಯಮಂತ್ರಿ ಆಗಮನಕ್ಕೆ ಬೃಹತ್ ವೇದಿಕೆ ನಿರ್ಮಾಣ

KannadaprabhaNewsNetwork |  
Published : Nov 08, 2025, 02:30 AM IST
7ಎಚ್‌ಪಿಟಿ4- ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯ ಶಾಸಕರ ಕಚೇರಿ ಬಳಿ ಬೃಹತ್ ವೇದಿಕೆ ನಿರ್ಮಾಣ. | Kannada Prabha

ಸಾರಾಂಶ

ಸುಮಾರು ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅನೇಕ ರೈತಪರ ಯೋಜನೆಗಳ ಅನುಷ್ಠಾನಗೊಳ್ಳುತ್ತಿರುವುದು ಕ್ಷೇತ್ರದ ಜನತೆಗೆ ಸಂತಸ ತಂದಿದೆ.

ಹೊಸಪೇಟೆ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆಗೆ ನ.9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಕೂಡ್ಲಿಗಿ ಪಟ್ಟಣದ ಗುಡೇಕೋಟೆ ರಸ್ತೆಯ ಶಾಸಕರ ಕಚೇರಿ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುತ್ತಿದ್ದು, ಪೂರ್ವ ಸಿದ್ಧತೆಯ ಪರಿಶೀಲನೆ ನಡೆಸಿ ಶುಕ್ರವಾರ ಶಾಸಕ ಡಾ. ಎನ್‌.ಟಿ. ಶ್ರೀನಿವಾಸ್‌ ಸುದ್ದಿಗಾರರೊಂದಿಗೆ ಮಾತನಾಡಿ, ಸುಮಾರು ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಅನೇಕ ರೈತಪರ ಯೋಜನೆಗಳ ಅನುಷ್ಠಾನಗೊಳ್ಳುತ್ತಿರುವುದು ಕ್ಷೇತ್ರದ ಜನತೆಗೆ ಸಂತಸ ತಂದಿದೆ. ಹಿಂದಿನ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ನೀರಾವರಿ ಅಭಿವೃದ್ಧಿಗಾಗಿ ಕೆರೆ ತುಂಬಿಸುವ ಯೋಜನೆಗೆ 2021ರಲ್ಲಿ ಸುಮಾರು ₹710 ಕೋಟಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಶೇ.90ರಷ್ಟು ಕಾಮಗಾರಿ ಪ್ರಗತಿಯಲ್ಲಿದ್ದಾಗ ಕೆಲ ತಾಂತ್ರಿಕ ಸಮಸ್ಯೆಗಳು ತಲೆದೋರಿದ್ದು ಅವುಗಳನ್ನು ಪರಿಹರಿಸಲಾಗಿದೆ. ಇದೀಗ ಪರೀಕ್ಷಾರ್ಥವಾಗಿ ಪರಿಶೀಲನೆ ನಡೆಸಲಾಗಿದೆ. ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೆ ಆಗಮಿಸುತ್ತಿದ್ದಾರೆ. ಹಿಂದುಳಿದ ಕೂಡ್ಲಿಗಿ ತಾಲೂಕಿನ ಸಮಸ್ಯೆಗಳನ್ನು ಅರಿತು ಸುಮಾರು ₹1250 ಕೋಟಿ ಅನುದಾನ ನೀಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಕ್ಷೇತ್ರದಲ್ಲಿ ಕೃಷಿಕರಿಗೆ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಗತ್ಯ ನೀಡಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಅನೇಕ ಪ್ರಮುಖ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.

600 ಬಸ್‌ಗಳ ವ್ಯವಸ್ಥೆ:

ಜಿಲ್ಲೆ ಹಾಗೂ ತಾಲೂಕಿನಿಂದ ಜನರು ಆಗಮಿಸಲು 600ಕ್ಕೂ ಹೆಚ್ಚು ಬಸ್‌ಗಳನ್ನು ನಿಯೋಜಿಸಿ ಸಾರಿಗೆ ವ್ಯವಸ್ಥೆ ಅನುಕೂಲ ಮಾಡಲಾಗಿದೆ. ಅಂದಾಜು 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಸರ್ಕಾರದ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರತ್ಯೇಕವಾಗಿ ಮಳಿಗೆಗಳನ್ನು ನಿರ್ಮಿಸಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಣೆ ಮಾಡಲಾಗುವುದು. ಕಾರ್ಯಕ್ರಮಕ್ಕೆ ಬರುವ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ, ಗಾಳಿ, ಬೆಳಕು, ಎಲ್‌ಇಡಿ ಪರದೆಗಳಲ್ಲಿ ವೇದಿಕೆ ಕಾರ್ಯಕ್ರಮದ ವೀಕ್ಷಣೆ ಸೇರಿದಂತೆ ಸವಿಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಕಾರದಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಆಗಮಿಸಿ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಪಟ್ಟಣದ ಗ್ರಾಮ ದೇವತೆ ಶ್ರೀಊರಮ್ಮ ದೇವಸ್ಥಾನದಿಂದ ಸುಮಾರು 100ಕ್ಕೂ ಹೆಚ್ಚು ಜನ ಸುಮಂಗಲೆಯರು ಪೂರ್ಣಕುಂಭ ಹೊತ್ತು ಸಕಲ ಮಂಗಳ ವಾದ್ಯಗಳ ಮೂಲಕ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಲಿದ್ದಾರೆ. ಈ ನೀರಾವರಿ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರಿಗೆ ವೇದಿಕೆಯಲ್ಲಿ ಗೌರವಿಸಿ ಸನ್ಮಾನಿಸಲಾಗುವುದು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಅಕ್ರಮ್ ಷಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಹೊಸಪೇಟೆ ಸಹಾಯಕ ಆಯುಕ್ತ ಪಿ.ವಿವೇಕಾನಂದ, ಹರಪನಹಳ್ಳಿ ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!