ಕನ್ನಡಪ್ರಭ ವಾರ್ತೆ ಸರಗೂರುಶಿಥಿಲಗೊಂಡಿರುವ ಪಪಂ ಹಳೆಯ ಕಟ್ಟಡವನ್ನು ಶೀಘ್ರದಲ್ಲೆ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕರು, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ ಅಧ್ಯಕ್ಷ ಅನಿಲ್ ಚಿಕ್ಕಮಾದು ಹೇಳಿದರು. ಪಪಂ ಕಚೇರಿಯಲ್ಲಿ ಸೋಮವಾರ ನೂತನ ಅಧ್ಯಕ್ಷೆ ಚೈತ್ರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಪಟ್ಟಣದ ಹೃದಯ ಭಾಗದಲ್ಲಿರುವ ಪಪಂ ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡವನ್ನು ನಿರ್ಮಿಸಬೇಕು. ಇದಕ್ಕಾಗಿ 50 ಲಕ್ಷ ರು. ಅನುದಾನ ಇದ್ದು, ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರದೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದು ಹೇಳಿದರು.ಮುಖ್ಯಾಧಿಕಾರಿ ಎಸ್.ಕೆ. ಸಂತೋಷ್ಕುಮಾರ್ ಮಾತನಾಡಿ, ಪಪಂ ಕಚೇರಿ ಸ್ಥಳಾಂತರಕ್ಕೆ ಕಟ್ಟಡ ಸಮಸ್ಯೆ ಇದ್ದು, ಕಟ್ಟಡ ಗುರುತಿಸಿದ ಕೂಡಲೇ ಸ್ಥಳಾಂತರಗೊಂಡು ಪಂಚಾಯಿತಿ ಕಚೇರಿ ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಲಾಗುವುದು. ಹೆಚ್ಚುವರಿಯಾಗಿ ಸರ್ಕಾರಕ್ಕೆ 5 ಕೋಟಿ ರು.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಜಂಗಲ್ ತೆರವು 7 ದಿನ ಗಡುವುಪಪಂ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಜೋರಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅಡೆತಡೆಯಾಗಿದೆ. ಖಾಲಿ ನಿವೇಶನಗಳಲ್ಲಿ ಆಳೆತ್ತರ ಗಿಡ-ಗಂಟಿಗಳು ಬೆಳೆದು ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಇದಲ್ಲದೆ ಪಟ್ಟಣಕ್ಕೆ ಹೊಂದಿಕೊಂಡಂತಿರುವ ಜಮೀನುಗಳಲ್ಲಿಯೂ ಗಿಡಗಂಟಿಗಳು ಹೇರಳವಾಗಿ ಬೆಳೆದು ನಿಂತಿವೆ ಎಂದು ಸದಸ್ಯ ಚಲುವಕೃಷ್ಣ ಸಭೆಯ ಗಮನ ಸೆಳೆದರು. ಶಾಸಕ ಅನಿಲ್ ಚಿಕ್ಕಮಾದು ಪ್ರತಿಕ್ರಿಯಿಸಿ, ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಅದ್ಯತೆ ನೀಡಬೇಕು. ಗಿಡ-ಗಂಟಿಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಬೇಕು. ಕಂದಾಯ ಭೂಮಿಗಳಲ್ಲಿಯೂ ಬೆಳೆದಿರುವ ಜಂಗಲ್ ತೆರವಿಗೆ ತಹಸೀಲ್ದಾರ್ ಅವರು ಸೂಚನೆ ನೀಡಬೇಕು. ವಾರದೊಳಗೆ ಜಂಗಲ್ ತೆರವುಗೊಳಿಸಬೇಕು ಎಂದು ಗಡುವು ನೀಡಿದರು.ಶಾಸಕ ಅನಿಲ್ ಚಿಕ್ಕಮಾದು ಅವರು, ಪಪಂ ಕಚೇರಿಗೆ ಆಗಮಿಸಿದ್ದ ಮೈಸೂರಿನ ವಸತಿ ನಿಗಮದ ಇಲಾಖೆಯ ಅಧಿಕಾರಿ ಎಂ.ಪಿ. ನಾಗೇಶ್ ಅವರಿಗೆ ನಿಮ್ಮ ಇಲಾಖೆ ಬಗ್ಗೆ ಮಾಹಿತಿ ನೀಡಿ ಎಂದಾಗ, ಪ್ರಧಾನ ಮಂತ್ರಿ ಅವಾಜ್ ಯೋಜನೆ 2.0 ನಗರ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ನಿವಾಜ್ ಯೋಜನೆ ಹಾಗೂ ವಾಜಪೇಯಿ ನಗರ ವಸತಿ ಯೋಜನೆ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಲಾಗುತ್ತದೆ ಎಂದರು.ಟ್ರಾಫಿಕ್ ಸರಿಪಡಿಸಿ: ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದು, ಸಮಸ್ಯೆ ಬಗೆಹರಿಸಲು ಕ್ರಮವಹಿಸಬೇಕು. ಅಲ್ಲಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂಬ ನಾಮಫಲಕ ಅಳವಡಿಸಲು ಕ್ರಮವಹಿಸಬೇಕು. ವಾಹನಗಳು ಸೂಕ್ತ ಸ್ಥಳ ನಿಲ್ಲಿಸುವಂತೆ ಪೊಲೀಸರು ಸೂಚನೆ ನಿಡಬೇಕು ಎಂದು ತಾಕೀತು ನೀಡಿದರು.ತಹಸೀಲ್ದಾರ್ ಮೋಹನಕುಮಾರಿ, ಪಪಂ ಅಧ್ಯಕ್ಷೆ ಚೈತ್ರಸ್ವಾಮಿ, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಹೇಮಾವತಿ ರಮೇಶ್, ಸಣ್ಣತಾಯಮ್ಮ, ಚಂದ್ರಕಲಾರಾಜಣ್ಣ, ಪಿಎಸ್ಐ ಆರ್. ಕಿರಣ್, ಸಾರಿಗೆ ಇಲಾಖೆಯ ಮಹದೇವಣ್ಣ, ಅರಣ್ಯ ಇಲಾಖೆ ಡಿಆರ್ಎಫ್ಓ ಪ್ರದೀಪ್, ಸಿಬ್ಬಂದಿಗಳಾದ ರಾಮು, ಪಳನಿ, ಶಿವಪ್ರಸಾದ್, ಅನಿತಾಕುಮಾರಿ, ಅರ್ಜುನ, ರಜಿನಿ, ಸ್ವಾಮಿ, ನಾಗೇಶ್, ಗಿರೀಶ್, ಸಿದ್ದರಾಜು ಇದ್ದರು.