ಕೆರೆ ಜಾಗಗಳಲ್ಲಿ ಹೊಸ ರಸ್ತೆ ಜಾಲ ನಿರ್ಮಾಣ

KannadaprabhaNewsNetwork |  
Published : Oct 24, 2026, 02:00 AM IST
ರೆಹಾನ್‌  | Kannada Prabha

ಸಾರಾಂಶ

ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ನಗರದಲ್ಲಿ ಹೊಸದಾಗಿ ನೂರಾರು ಕಿ.ಮೀ ಉದ್ದದ ರಸ್ತೆಗಳನ್ನು ಭವಿಷ್ಯದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಆದರೆ, ಈ ರಸ್ತೆಗಳು ಕೆರೆ ಸೇರಿದಂತೆ ವಿವಿಧ ಜಲಮೂಲಗಳನ್ನು ಒತ್ತುವರಿ ಮಾಡಿಕೊಳ್ಳುವ ಆತಂಕ ಎದುರಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವತಿಯಿಂದ ನಗರದಲ್ಲಿ ಹೊಸದಾಗಿ ನೂರಾರು ಕಿ.ಮೀ ಉದ್ದದ ರಸ್ತೆಗಳನ್ನು ಭವಿಷ್ಯದಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಆದರೆ, ಈ ರಸ್ತೆಗಳು ಕೆರೆ ಸೇರಿದಂತೆ ವಿವಿಧ ಜಲಮೂಲಗಳನ್ನು ಒತ್ತುವರಿ ಮಾಡಿಕೊಳ್ಳುವ ಆತಂಕ ಎದುರಾಗಿದೆ.ಸುಮಾರು 9 ರಿಂದ 24 ಮೀಟರ್‌ ಅಗಲದ ರಸ್ತೆಗಳನ್ನು ನಗರದ 4 ದಿಕ್ಕುಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧಿತ ನಕ್ಷೆಯನ್ನು ಜಿಬಿಎ ಇತ್ತೀಚೆಗೆ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಈ ನಕ್ಷೆಯಲ್ಲಿನ ರಸ್ತೆಗಳು ಕೆರೆ ಅಂಗಳದ ಮೂಲ ಹಾದು ಹೋಗುತ್ತಿವೆ. ಈ ಮೂಲಕ ಭವಿಷ್ಯದಲ್ಲಿ ನಗರದಲ್ಲಿ ಮಳೆ ನೀರಿನ ನೈಸರ್ಗಿಕ ಹರಿವಿಗೆ ಅಡ್ಡಿ ಮತ್ತು ಕೆರೆಗಳ ಸಾಮರ್ಥ್ಯ ಕಡಿಮೆಯಾಗುವ ಆತಂಕವಿದೆ.

ಪ್ರಸ್ತಾಪಿತ ರಸ್ತೆ ನಿರ್ಮಾಣ ನಕ್ಷೆಯ ಪ್ರಕಾರ, ಅನೇಕ ರಸ್ತೆಗಳು ಕೆರೆಗಳಿಗೆ ಹೊಂದಿಕೊಂಡಂತೆ ಹಾದು ಹೋಗುತ್ತವೆ. ಕೆಲವು ರಸ್ತೆಗಳ ಕೆರೆಯನ್ನು ಒತ್ತುವರಿ ಮಾಡಿಕೊಂಡು ಹಾದು ಹೋಗುವಂತಿವೆ. ಉದಾಹರಣೆಗೆ ದೊಡ್ಡನೆಕ್ಕುಂದಿ ಕೆರೆ, ನಲ್ಲೂರಹಳ್ಳಿ ಕೆರೆ, ಬೇಗೂರು ಕೆರೆ, ಪುಟ್ಟೇನಹಳ್ಳಿ ಕೆರೆ, ದೊಡ್ಡಬೊಮ್ಮಸಂದ್ರ ಕೆರೆಯ ಪ್ರದೇಶದ ಮೂಲಕವೇ ಹಾದು ಹೋಗುವಂತೆ ರಸ್ತೆ ನಕ್ಷೆಯನ್ನು ಸಿದ್ದಪಡಿಸಲಾಗಿದೆ. ಇನ್ನು ಬೆಳ್ಳಂದೂರು ಕೆರೆ, ಪರಪ್ಪನ ಅಗ್ರಹಾರ ಕೆರೆ, ಬಸಪುರ ಕೆರೆ, ಗಾರ್ವೇಬಾ‍ವಿಪಾಳ್ಯ ಕೆರೆಗೆ ಹೊಂದಿಕೊಂಡಂತೆ ರಸ್ತೆಗಳನ್ನು ನಿರ್ಮಿಸಲು ನಕ್ಷೆ ಸಿದ್ದವಾಗಿದೆ.

ಸರಳ ಮಾರ್ಗ: ರಸ್ತೆ ನಿರ್ಮಾಣಕ್ಕೆ ಖಾಸಗಿ ಸ್ವತ್ತುಗಳನ್ನು ಭೂಸ್ವಾಧೀನಪಡಿಸಿಕೊಂಡು ಪಾಲಿಕೆಯಿಂದ ರಸ್ತೆ ನಿರ್ಮಿಸಲಾಗುತ್ತದೆ. ಆದರೆ, ಇತ್ತೀಚೆಗೆ ಭೂಸ್ವಾಧೀನ ಪ್ರಕ್ರಿಯೆಗಳು ವಿಳಂಬವಾಗುತ್ತಿವೆ. ಭೂ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ವಿಚಾರಣೆಗಳು ಧೀರ್ಘಾವಧಿಗೆ ಎಳೆಯುತ್ತಿವೆ. ಈ ಸಮಸ್ಯೆಯಿಂದ ಪಾರಾಗಲು ಜಿಬಿಎ ಸರಳ ಉಪಾಯವನ್ನು ಕಂಡುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಸ್ತಾವಿತ ರಸ್ತೆ ನಕ್ಷೆಯ ಕುರಿತು ಆಕ್ಷೇಪಣೆಗಳಿದ್ದರೆ ನಾಗರಿಕರು ಜಿಬಿಎ ವೆಬ್‌ಸೈಟ್‌ಗೆ ಭೇಟಿ ನೀಡಿ ಸಲ್ಲಿಸಬಹುದು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೇಳಿದ್ದಾರೆ.ಕಿರಿದಾಗುವ ಪುಟ್ಟೇನಹಳ್ಳಿ ಕೆರೆ?: ನಗರದ ದಕ್ಷಿಣ ಭಾಗದಲ್ಲಿರುವ ಪುಟ್ಟೇನಹಳ್ಳಿ ಕೆರೆಯ ಕಟ್ಟೆ (ಏರಿ) ಸುಮಾರು 30 ಅಡಿ ಅಗಲವಿದೆ. ಆದರೆ, ಈ ಕೆರೆಗೆ ಹೊಂದಿಕೊಂಡಂತೆ 60 ಅಡಿ ವಿಸ್ತೀರ್ಣದ ರಸ್ತೆ ನಿರ್ಮಿಸುವ ಪ್ರಸ್ತಾವನೆ ಇದೆ. ನಕ್ಷೆಯಂತೆ ರಸ್ತೆ ನಿರ್ಮಾಣವಾದಲ್ಲಿ ಕೆರೆಯ ಏರಿ ಜಾಗ ಅತಿಕ್ರಮಣವಾಗಲಿದೆ.

ಬಿಡಿಎ ನಿವೇಶನಗಳ ಮೇಲೂ ರಸ್ತೆ?

ಪ್ರಸ್ತಾವಿತ ರಸ್ತೆ ನಕ್ಷೆಯು ಬಿಡಿಎ ನಿರ್ಮಿತ ಅರ್ಕಾವತಿ ಬಡಾವಣೆಯ 14ನೇ ಬ್ಲಾಕ್‌ನಲ್ಲಿನ ನಿವೇಶನಗಳ ಮೂಲಕ ಹಾದು ಹೋಗುತ್ತಿದೆ ಎಂದು ನಾಗರಿಕರು ಆತಂಕಗೊಂಡು ಬಿಡಿಎಗೆ ದೂರು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಡಿಎ, ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿರುವ ನಿವೇಶನಗಳ ಮೂಲಕ ಹಾದು ಹೋಗುವ ರಸ್ತೆಯ ಕುರಿತು ಸೂಕ್ತ ಆಕ್ಷೇಪಣೆ ಸಲ್ಲಿಸುತ್ತೇವೆ. ಅಲ್ಲದೇ, ಜಿಬಿಎ ಅಧಿಕಾರಿಗಳ ಜೊತೆ ಚರ್ಚಿಸುವುದಾಗಿ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯರಸ್ತೆ ಅಗಲೀಕರಣ ವಿಚಾರದಲ್ಲಿ ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ: ಶೇ.86.50ರಷ್ಟು ಮತದಾನ