ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಸದಾಶಿವನಗರದಲ್ಲಿ ಬಡ ಮಕ್ಕಳಿಗಾಗಿ ಪ್ರಸಾದ ನಿಲಯ ಒಂದು ತಲೆ ಎತ್ತಲಿದೆ ಎಂದು ಶಿರಶ್ಯಾಡ ಗ್ರಾಮದ ಮುರುಘೇಂದ್ರ ಶ್ರೀಗಳು ಭರವಸೆ ನೀಡಿದರು.ಶಿರಶ್ಯಾಡ ಗ್ರಾಮದಲ್ಲಿ ಲಿಂ.ಮುರುಘೇಂದ್ರ ಶ್ರೀಗಳ ಭಾವಚಿತ್ರದ ಮೆರವಣಿಗೆ ಹಾಗೂ ಉಚಿತ ಪ್ರಸಾದ ನಿಲಯ ಕಟ್ಟಡದ ಭೂಮಿಪೂಜೆ ಹಾಗೂ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸದಾಶಿವನಗರದಲ್ಲಿ 9 ವರ್ಷಗಳ ಹಿಂದೆ ಇಂಡಿ ಪುರಸಭೆ 100*100 ಅಡಿ ಜಾಗ ಪ್ರಸಾದ ನಿಲಯದ ಕಟ್ಟಡಕ್ಕಾಗಿಯೇ ಮಂಜೂರು ಮಾಡಿದೆ. ಇದೀಗ ಸರ್ಕಾರ ₹ 50 ಲಕ್ಷ ಅನುದಾನ ನೀಡಿದೆ. ಅದನ್ನು ಬಳಸಿ ಸುಮಾರು ₹ 4 ಕೋಟಿ ವೆಚ್ಚದಲ್ಲಿ 100 ವಿದ್ಯಾರ್ಥಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವದು. ಈ ಕಟ್ಟಡಕ್ಕೆ ಇಂಡಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರು ತನು, ಮನ, ಧನಗಳ ಸಹಾಯ ಸಹಕಾರ ನೀಡುವದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಅಗತ್ಯವಿರುವ ಸಿಮೆಂಟ, ಕಡಿ, ಸ್ಟೀಲ್ ಅಲ್ಲದೇ ಹಣಕಾಸಿನ ನೆರವು ನೀಡುವುದಾಗಿ ಭಕ್ತರು ಭರವಸೆ ನೀಡಿದ್ದಾರೆ. 9 ವರ್ಷಗಳಿಂದ ಕಂಡ ಕನಸು ಇನ್ನೊಂದು ವರ್ಷದಲ್ಲಿ ನನಸಾಗಲಿದೆ ಎಂದು ಹೇಳಿದರು.ಜೈನಾಪೂರದ ರೇಣುಕಾ ಶಿವಾಚಾರ್ಯರು, ಅಥಣಿಯ ಶಿವಬಸವ ಶ್ರೀಗಳು, ಅಭಿನವ ಪುಂಡಲಿಂಗ ಶ್ರೀಗಳು, ರೋಡಗಿ ಶ್ರೀಗಳು, ದೇವರಹಿಪ್ಪರಗಿ ಶ್ರೀಗಳು ಮಾತನಾಡಿ, ಬಡ ಮಕ್ಕಳ ಉಚಿತ ಪ್ರಸಾದ ನಿಲಯಕ್ಕೆ ನೆರವು ನೀಡುವದಾಗಿ ಭರವಸೆ ನೀಡಿದರು. ಅಥಣಿ ಶ್ರೀಗಳು ₹ 2.5 ಲಕ್ಷ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.ಪಟ್ಟಣದ ಹಿರಿಯ ಜೆಟ್ಟೆಪ್ಪ ರವಳಿ, ಬಿಜೆಪಿ ಮುಖಂಡ ಕಾಸೂಗೌಡ ಬಿರಾದಾರ, ಪುರಸಭೆಯ ಅಧ್ಯಕ್ಷ ಲಿಂಬಾಜಿ ರಾಠೋಡ, ಶರಣಪ್ಪ ಮಾನೇಗಾರ, ವಿರಾಜ ಪಾಟೀಲ ಮಾತನಾಡಿ, ಉಚಿತ ಪ್ರಸಾದ ನಿಲಯದ ಕಟ್ಟಡಕ್ಕೆ ತನು, ಮನ, ಧನದ ಸಹಕಾರ ನೀಡುವದಾಗಿ ಭರವಸೆ ನೀಡಿದರು. ಜಗದೀಶ ಕ್ಷತ್ರಿ ಹಾಗೂ ಧಾನಮ್ಮ ಹಿರೇಮಠ ತಲಾ ಒಬ್ಬೊಬ್ಬ ವಿದ್ಯಾರ್ಥಿಯನ್ನು ದತ್ತು ಪಡೆದು ಪ್ರತಿ ವರ್ಷ ಆ ವಿದ್ಯಾರ್ಥಿಗಳಿಗೆ ತಗಲುವ ಊಟದ ವ್ಯವಸ್ಥೆ ಮಾಡುವದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಭಕ್ತರು ಮುರುಘೇಂದ್ರ ಶ್ರೀಗಳಿಗೆ ತುಲಾಭಾರ ನೆರವೇರಿಸಿದರು. ಕೆಲವು ಗ್ರಾಮಗಳ ಭಕ್ತರು ರುದ್ರಾಕ್ಷಿ ತುಲಾಭಾರ ನೆರವೇರಿಸಿದರು.ಕಸಾಪ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ಚಂದ್ರಶೇಖರ ಇಂಡಿ, ಶಂಕರಗೌಡ ಪಾಟೀಲ, ಜಗದೀಶ ಕ್ಷತ್ರಿ, ಬಸವರಾಜ ಕಣ್ಣಿ, ಶ್ರೀಮಂತ ಇಂಡಿ, ಅಜೀತ ಧನಶೆಟ್ಟಿ, ಚಂದ್ರಶೇಖರ ದೇವರ, ಜಾವೀದ ಮೋಮಿನ್, ದೇವೇಂದ್ರ ಕುಂಬಾರ, ಪ್ರಶಾಂತ ಕಾಳೆ, ನೀಲಕಂಠಗೌಡ ಪಾಟೀಲ, ಪ್ರಭು ಹೊಸಮನಿ, ಅನೀಲಗೌಡ ಬಿರಾದಾರ, ಬಾಳು ಮುಳಜಿ, ಅನಿಲಪ್ರಸಾದ ಏಳಗಿ, ಆರ್.ವಿ.ಪಾಟೀಲ, ರಾಮಸಿಂಗ್ ಕನ್ನೊಳ್ಳಿ, ಅನಂತ ಜೈನ್, ವಿರಾಜ ಪಾಟೀಲ, ವಿಶಾಲ ಸಿಂದಗಿ ಇದ್ದರು. ಧನರಾಜ ಮುಜಗೊಂಡ ನಿರೂಪಿಸಿದರು. ಯಶವಂತರಾಯಗೌಡ ಬಿರಾದಾರ ಸ್ವಾಗತಿಸಿ, ವಂದಿಸಿದರು.