ಬಳ್ಳಾರಿ: ದಮ್ಮೂರಿನ ಎಸ್.ಬಿ.ಗ್ರೂಪ್ ಆಫ್ ಆಫ್ ಇನ್‌ಸ್ಟಿಟ್ಯೂಷನ್ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವಾಗಿ ಬೆಳೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ವಿಶ್ವವಿದ್ಯಾಲಯವನ್ನು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಎಸ್.ಬಿ. ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ವಾರ್ಷಿಕೋತ್ಸವ ಹಾಗೂ ನೂತನ ಕಟ್ಟಡಗಳ ಉದ್ಘಾಟನೆ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಡಾ.ಭವ್ಯಾ ಶೇಖರ್ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂಬ ಆಶಯವನ್ನಿಟ್ಟುಕೊಂಡು ದಮ್ಮೂರಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಸತತ ಪರಿಶ್ರಮದ ಮೂಲಕ ಬೃಹತ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿದ್ದಾರೆ. ದಮ್ಮೂರು ಶೇಖರ್ ಹಾಗೂ ಡಾ.ಭವ್ಯಾ ಶೇಖರ್ ನಿರಂತರ ಪರಿಶ್ರಮದ ಫಲಿತವಾಗಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ ಎಂದು ತಿಳಿಸಿದರು.
ನಗರ ಪ್ರದೇಶಗಳಲ್ಲಿ ದೊಡ್ಡದೊಡ್ಡ ಕಟ್ಟಡಗಳನ್ನು ಕಟ್ಟಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವುದು ದೊಡ್ಡ ಸಂಗತಿಯಲ್ಲ. ಆದರೆ, ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸಂಕಲ್ಪವೇ ಅತ್ಯಂತ ಶ್ಲಾಘನೀಯವಾದದ್ದು ಎಂದರು. ಅಲ್ಲದೆ, ದಮ್ಮೂರು ಶೇಖರ್ ಹಾಗೂ ಡಾ.ಭವ್ಯ ಶೇಖರ್ ಈ ಭಾಗದ ಶೈಕ್ಷಣಿಕ ಪ್ರಗತಿಗೆ ಕೈಗೊಳ್ಳುವ ಎಲ್ಲ ಕಾರ್ಯದಲ್ಲಿ ನಾವು ಜೊತೆಯಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.ನಾನು ಸಚಿವನಾಗಿದ್ದಾಗ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದೆ. ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಬಿಟ್ಟರೆ ಬಳ್ಳಾರಿ ಎರಡನೇ ಸ್ಥಾನದಲ್ಲಿರಬೇಕು ಎಂಬ ಕನಸು ಇಟ್ಟುಕೊಂಡೇ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆ. ಹೀಗಾಗಿ ಅನೇಕ ಕಾರ್ಯಗಳನ್ನು ಮಾಡಿ ಸಾಧ್ಯವಾಯಿತು. ದಮ್ಮೂರು ಶೇಖರ್ ಸಹ ಅತ್ಯಂತ ಉತ್ಸಾಹಿ ಯುವಕ. ಸಮಾಜಮುಖಿಯಾಗಿ ಏನಾದರೂ ಮಾಡಬೇಕು ಎಂದು ಯೋಚಿಸುತ್ತಾನೆ. ಈತನ ಕನಸನ್ನು ಡಾ.ಭವ್ಯಾ ಶೇಖರ್ ಕನಸು ಮಾಡಿದ್ದಾರೆ ಎಂದು ಹೇಳಿದರು.
ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಮಾತನಾಡಿ, ಶಿಕ್ಷಣದಿಂದ ಮಾತ್ರ ಬದುಕು ಬದಲಾಗಲು ಸಾಧ್ಯ. ಬಡತನ ಮತ್ತಿತರ ಸಮಸ್ಯೆಗಳಿಂದ ಅದೆಷ್ಟೋ ಜನರು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಳ್ಳಿ ಜನರು ಶಿಕ್ಷಣದಿಂದ ದೂರವಾಗಬಾರದು ಎಂಬ ಉದ್ದೇಶದಿಂದ ಈ ಭಾಗದಲ್ಲಿ ಡಾ.ಭವ್ಯಾಶೇಖರ್ ಈ ಭಾಗದಲ್ಲಿ ಬೃಹತ್ ಶಿಕ್ಷಣ ಸಂಸ್ಥೆ ಆರಂಭಿಸಿ, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಇವರ ಕಾರ್ಯಕ್ಕೆ ನಾವು ಸದಾ ಜೊತೆಯಾಗಿರುತ್ತೇವೆ. ಸಾರ್ಥಕ ಕೆಲಸದಲ್ಲಿ ನಾವೂ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.