ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಈ ಬಾರಿ ಕಳೆಕಟ್ಟಿದ್ದು, ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ರಾಸುಗಳನ್ನು ಕೊಳ್ಳಲು ಮಾರಲು ಜನ ಮುಗಿ ಬಿದ್ದಿದ್ದಾರೆ.
ರಾಸುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಜಿಲ್ಲೆಯ ರೈತರು ಮಾತ್ರವಲ್ಲದೆ ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧೆಡೆಯಿಂದ ರೈತರು ಆಗಮಿಸಿದ್ದಾರೆ. ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರ, ತೆಲಂಗಾಣದಿಂದಲೂ ರೈತರು ಹಾಗೂ ವರ್ತಕರು ಆಗಮಿಸಿ ರಾಸುಗಳನ್ನು ಕೊಳ್ಳುವ ಮಾರುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ದೇವಸ್ಥಾನದ ಬಳಿ ಇರುವ ನೀಲಗಿರಿ ತೋಪು ಹಾಗೂ ರಸ್ತೆಯ ಎರಡು ಮಗ್ಗಲುಗಳಲ್ಲೂ ರೈತರು ತಮ್ಮ ರಾಸುಗಳನ್ನು ಕಟ್ಟಿದ್ದಾರೆ. ಕೆಲವರು ಪೆಂಡಾಲ್ ಹಾಕಿಸಿ ಎತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಕೆಲ ರೈತರು ರಾಸುಗಳನ್ನು ಅಲಂಕರಿಸಿ ತಮಟ ವಾದ್ಯ, ಪೂಜಾ ಕುಣಿತ, ಡೊಳ್ಳು ಕುಣಿತ, ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಕರೆತಂದಿದ್ದಾರೆ.ದುಬಾರಿ ಬೆಲೆಯ ಹಳ್ಳಿಕಾರ್ ಎತ್ತುಗಳು: ಜಾತ್ರೆಯಲ್ಲಿ ೫೦ ಸಾವಿರದಿಂದ ೧೮ ಲಕ್ಷದವರೆಗಿನ ರಾಸುಗಳನ್ನು ನೋಡಬಹುದಾಗಿದೆ. ಎಚ್. ಎಲ್.ಪಾರ್ಥಸಾರಥಿ ಹಾಗೂ ಕಣಿಮಿಣಿಕೆ ನಾಗೇಶ್ ಮಾಲೀಕತ್ವದ ಎತ್ತುಗಳನ್ನು ೧೮ ಲಕ್ಷ ರು.ಗೆ ಮಾರಾಟಕ್ಕಿಡಲಾಗಿದೆ. ಕನಕಪುರದ ಇಂದ್ರೇಶ್ ಎಂಬುವವರ ಜೋಡೆತ್ತುಗಳು (ಬಂಡಿ) ೧೪ ಲಕ್ಷ ರೂ. ಹಾಗೂ ಹಿರಿಯೂರಿನ ಸಂದೀಪ್ ಅವರ ಜೋಡೆತ್ತುಗಳು ೧೨ ಲಕ್ಷ ರು.ಗಳಿಗೆ ದುಬಾರಿ ಬೆಲೆಯ ಎತ್ತುಗಳು ಎನ್ನಿಸಿವೆ.
ಜಾತ್ರೆಗೆ ಆಗಮಿಸುವ ರಾಸುಗಳ ಪೈಕಿ ಉತ್ತಮ ರಾಸುಗಳನ್ನು ಗುರುತಿಸುವ ಸಲುವಾಗಿ ರಾಸುಗಳ ಸ್ಪರ್ಧೆ ಏರ್ಪಡಿಲಾಗಿದೆ. ಇದರಲ್ಲಿ ನೊಂದಾಯಿಸಿಕೊಂಡ ರಾಸುಗಳಿಗೆ ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ, ಪಾರಿತೋಷಕ, ಬೆಳ್ಳಿ ಪದಕ ನೀಡಲಾಗುತ್ತದೆ.
ವಿದ್ಯುತ್ ಅಲಂಕಾರ: ಇನ್ನು ಕೆಂಗಲ್ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ದೇವಾಲಯ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ. ಬೆಂ-ಮೈ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರನ್ನು ದನಗಳ ಜಾತ್ರೆ ಗಮನ ಸೆಳೆಯುತ್ತಿದೆ.
ಕಳೆದ ಕೆಲ ವರ್ಷಗಳಿಂದ ಕೋವಿಡ್ , ರಾಸುಗಳಿಗೆ ಚರ್ಮಗಂಟು ರೋಗ ಸೇರಿ ಹವಲು ಕಾರಣಗಳಿಂದ ಕೆಂಗಲ್ ದನಗಳ ಜಾತ್ರೆ ಕಳೆಗುಂದಿತ್ತು. ಆದರೆ ದೇವರ ದಯೆಯಿಂದಾಗಿ ಈ ಬಾರಿ ಯಾವುದೇ ರೀತಿಯ ಸಮಸ್ಯೆಗಳಾಗದೆ ದನಗಳ ಜಾತ್ರೆ ಸುಸೂತ್ರವಾಗಿ ನಡೆಯುತ್ತಿದ್ದು, ಭಕ್ತರೊಟ್ಟಿಗೆ ಸಾರ್ವಜನಿಕರು, ರೈತರು, ವ್ಯಾಪಾರಿಗಳು, ದಲ್ಲಾಳಿಗಳು ನಮ್ಮ ನೀರಿಕ್ಷೆಗೂ ಮೀರಿ ಆಗಮಿಸುತ್ತಿರುವುದು ಸಂತಸ ತಂದಿದೆ.
ಪೊಟೋ೧೭ಸಿಪಿಟಿ೧: ಚನ್ನಟಪ್ಟಣದ ಅಯ್ಯನಗುಡಿ ಜಾತ್ರೆಯಲ್ಲಿ ಸೇರಿರುವ ಜನ.