ಕನ್ನಡಪ್ರಭ ವಾರ್ತೆ ಮೈಸೂರು
ಹೊಸ ಗ್ರಾಮ ಪಂಚಾಯ್ತಿಗೆ ಸೂಕ್ತ ಕಟ್ಟಡ ಇಲ್ಲದೆ ಹೊಸಹೊಳಲು ಗ್ರಾಮದಲ್ಲಿದ್ದ ಹಳೇ ಸರ್ಕಾರಿ ಕಟ್ಟಡವೊಂದರಲ್ಲಿ 2015 ರಿಂದ 2023 ರವರೆಗೂ ಆಡಳಿತ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಗ್ರಾಮೀಣ ಜನರಿಗೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಹೊಸ ಕಟ್ಟಡ ಅವಶ್ಯಕ ಎಂದು ಅರಿತ ಗ್ರಾಪಂ ಚುನಾಯಿತ ಪ್ರತಿನಿಧಿಗಳು, ಸಭೆಯಲ್ಲಿ ತೀರ್ಮಾನ ಕೈಗೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಮುನ್ನುಡಿ ಬೆರೆದರು.
ಹೊಸಹೊಳು ಗ್ರಾಪಂ ವ್ಯಾಪ್ತಿಯಲ್ಲಿ 5 ಕಂದಾಯ ಗ್ರಾಮ ಹಾಗೂ 5 ಉಪ ಗ್ರಾಮಗಳಿದ್ದು, 7200 ಹೆಚ್ಚು ಜನಸಂಖ್ಯೆ ವಾಸಿಸುತ್ತಿದ್ದಾರೆ. ಗ್ರಾಮೀಣ ಜನರಿಗೆ ಮೂಲಕ ಸೌಕರ್ಯಗಳು ಹಾಗೂ ಸರ್ಕಾರದ ಸೇವೆಗಳನ್ನು ತಲುಪಿಸಲು ಹೊಸಹೊಳಲು ಗ್ರಾಪಂ ಕಚೇರಿ ಅಥವಾ ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣ ಕಾಮಗಾರಿಯನ್ನು ವಿಬಿ ಜಿ ರಾಮ್ ಜಿ (ಮನರೇಗಾ) ಯೋಜನೆ ಹಾಗೂ ಇತರೆ ಅನುದಾದನಲ್ಲಿ ನಿರ್ಮಿಸಲಾಗಿದೆ.ವಿಬಿ ಜಿ ರಾಮ್ ಜಿ (ಮನರೇಗಾ) ಯೋಜನೆಯಡಿ 15.50 ಲಕ್ಷ ರು., 15ನೇ ಹಣಕಾಸು ಯೋಜನೆಯಲ್ಲಿ 4 ಲಕ್ಷ ರು. ಹಾಗೂ ಹೊಸ ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ಸರ್ಕಾರದಿಂದ ನೀಡಿದ 20 ಲಕ್ಷ ರೂ. ಸೇರಿದಂತೆ ಒಟ್ಟು 39.50 ಲಕ್ಷ ರು. ಅನುದಾನದಲ್ಲಿ ತಾಲೂಕಿನಲ್ಲೇ ಅತ್ಯಂತ ಉತ್ತಮವಾದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ.
ವಿಶಾಲವಾದ ಸಭಾಂಗಣ:
ಗ್ರಾಮೀಣ ಪ್ರದೇಶದ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದಾಗ ಯಾರನ್ನು ಸಂಪರ್ಕ ಮಾಡಬೇಕು ಎಂಬ ಗೊಂದಲಕ್ಕೀಡಾಗಂತೆ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಕರ ವಸೂಲಿ ಕಾರ, ಡೇಟಾ ಎಂಟ್ರಿ ಆಪರೇಟರ್ ಹಾಗೂ ದಾಖಲಾತಿ ಸಂರಕ್ಷಣಾ ಕೊಠಡಿಗಳು ಪ್ರತ್ಯೇಕ ಕೊಠಡಿಗಳು ಮತ್ತು ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಕೊಠಡಿಗಳಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.
ಗ್ರಾಮೀಣ ಜನರಿಗೆ ಸ್ಥಳೀಯ ಆಡಳಿತ ಸಂಸ್ಥೆಯಾದ ಗ್ರಾಪಂ ಮೂಲಕ ಮೂಲ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಸೂಕ್ತವಾದ ಕಟ್ಟಡ ನಿರ್ಮಾಣದಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಉತ್ಸುಕತೆಯಿಂದ ಸಾರ್ವಜನಿಕ ಕೆಲಸ ಮಾಡಲು ಸಹಕಾರಿಯಾಗುತ್ತದೆ.