200 ಎಕರೆ ಜಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

KannadaprabhaNewsNetwork |  
Published : Aug 10, 2024, 01:32 AM ISTUpdated : Aug 10, 2024, 01:52 PM IST
೯ಕೆಎಂಎನ್‌ಡಿ-೧ಕೆಆರ್‌ಎಸ್ ಬೃಂದಾವನದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ನ ನೀಲಿ ನಕಾಶೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು. | Kannada Prabha

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬೃಂದಾವನವನ್ನು ಮೇಲ್ದರ್ಜೆಗೇರಿಸಲು 200 ಎಕರೆ ಜಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು.

 ಮಂಡ್ಯ :  ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಬೃಂದಾವನವನ್ನು ಮೇಲ್ದರ್ಜೆಗೇರಿಸಲು 200 ಎಕರೆ ಜಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪುನರುಚ್ಚರಿಸಿದರು.

ಕೆಆರ್‌ಎಸ್ ಬೃಂದಾವನ ಅಭಿವೃದ್ಧಿ ಸಂಬಂಧ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜೊತೆಗೆ ಮೈಷುಗರ್ ಸಕ್ಕರೆ ಕಾರ್ಖಾನೆ ಉಳಿವು, ಕೆರೆಗಳನ್ನು ತುಂಬಿಸುವ ವಿಚಾರವಾಗಿ ಜಿಲ್ಲೆಯ ಸ್ಥಳೀಯ ನಾಯಕರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

200 ಎಕರೆ ಜಾಗ ನಿಗದಿ:

ಬೃಂದಾವನ ಉದ್ಯಾನ ಮೇಲ್ದರ್ಜೆಗೇರಿಸಲು ಈಗ ಇರುವ ೨೦೦ ಎಕರೆ ಜಾಗದಲ್ಲಿ ಯೋಜನೆಯನ್ನು ಆರಂಭಿಸುತ್ತೇವೆ. ಅಣೆಕಟ್ಟೆಯ ರಕ್ಷಣೆಗೆ ಅಗತ್ಯವಿರುವ ಜಾಗವನ್ನು ಬಿಟ್ಟು ಇತರೆ ಜಾಗದಲ್ಲಿ ನಾವು ಯೋಜನೆ ರೂಪಿಸುತ್ತಿದ್ದೇವೆ. ಎರಡು- ಮೂರು ಪಂಚಾಯಿತಿಯನ್ನು ಸೇರಿಸಿಕೊಂಡು ಯೋಜನಾ ಪ್ರದೇಶವಾಗಿ ರೂಪಿಸುತ್ತಿದ್ದೇವೆ ಎಂದು ಹೇಳಿದರು.

ಅಭಿವೃದ್ಧಿಪಡಿಸಲಾಗುವ ಈ ಪ್ರದೇಶದಲ್ಲಿ ಮುಂದೆ ಹತ್ತಾರು ಸಾವಿರ ಉದ್ಯೋಗ ಸೃಷ್ಟಿಯಾಗಲಿವೆ. ಸಾವಿರಾರು ಜನರು ಆಗಮಿಸುವ ನಿರೀಕ್ಷೆ ಇರುವುದರಿಂದ ರಸ್ತೆಗಳ ಅಗಲೀಕರಣ ಸೇರಿ ಈ ಭಾಗದ ಪ್ರವೇಶ ಹಾಗೂ ನಿರ್ಗಮನದಲ್ಲಿ ನಾಲ್ಕು ಪಥದ ರಸ್ತೆ, ನೀರು, ಒಳಚರಂಡಿ ವ್ಯವಸ್ಥೆ ಮಾಡಲಾಗುವುದು. ಬೃಂದಾವನ ಹಾಗೂ ಪಕ್ಷಿಧಾಮ ಸೇರಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಯೋಜನೆ ರೂಪಿಸಿರುವುದಾಗಿ ತಿಳಿಸಿದರು.

2 ಸಾವಿರ ಕೋಟಿ ರು. ಅನುದಾನ:

ನಮ್ಮ ಪರಂಪರೆ ಉಳಿಸಿಕೊಂಡು, ಹಳೆಯ ಮಾದರಿಯಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳಲಾಗಿದೆ. ಈ ಯೋಜನೆಗೆ ನಾವು ೨ ಸಾವಿರ ಕೋಟಿ ಅನುದಾನ ಇಟ್ಟುಕೊಂಡಿದ್ದು, ಇದನ್ನು ಮಾಡುವವರು ಯಾವ ರೀತಿ ಮಾಡಬೇಕು ಎಂದು ಕೆಲವು ಮಾರ್ಗಸೂಚಿಯನ್ನು ನಿಗದಿಪಡಿಸಿದ್ದೇವೆ ಎಂದರು.

ಯೋಜನೆಗೆ ಯಾರ ವಿರೋಧವೂ ಇಲ್ಲ:

ಈ ಯೋಜನೆಗೆ ಕೆಲವು ಸಂಘಟನೆಗಳ ವಿರೋಧವಿದೆ ಎಂಬ ಪ್ರಶ್ನೆಗೆ, ಈ ಯೋಜನೆಗೆ ಯಾರ ವಿರೋಧವಿದೆಯೋ ಎಲ್ಲರ ಸಲಹೆಯನ್ನೂ ಕೇಳುತ್ತೇವೆ. ನಾನು ಅಂದುಕೊಂಡಂತೆ ಈ ಯೋಜನೆಗೆ ಯಾರ ವಿರೋಧವೂ ಇಲ್ಲ. ನಮ್ಮ ಅಭಿಪ್ರಾಯವನ್ನು ಕೇಳಿ ಎಂದು ಹೇಳಿದ್ದಾರೆ. ಅಣೆಕಟ್ಟು ರಕ್ಷಣೆಯನ್ನು ಮಾಡುತ್ತೇವೆ. ಅಣೆಕಟ್ಟೆಯ ಘನತೆಯನ್ನು ಹೆಚ್ಚಿಸಿ ಆರ್ಥಿಕ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ ಎಂದರು.

ಇದೊಂದು ಹಣ ಮಾಡುವ ಯೋಜನೆ ಎಂಬ ವಿರೋಧ ಪಕ್ಷದ ನಾಯಕರ ಆರೋಪದ ಬಗ್ಗೆ ಕೇಳಿದಾಗ, ಅವರು ಏನಾದರೂ ಹೇಳಲಿ. ಅವರ ಛಾಯೆಯನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ಅವರಿಗೆ ದುಡ್ಡು ಮಾಡುವ ರೂಢಿ ಇದೆ ಎಂದು ದೂಷಿಸಿದರು.

ಮೈಷುಗರ್ ಉಳಿವು ನಮ್ಮ ಗುರಿ:

ಐತಿಹಾಸಿಕ ಮೈಷುಗರ್ ಕಾರ್ಖಾನೆ ಪುನಶ್ಚೇತನದ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಸಭೆ ಮಾಡಿದ್ದೇವೆ. ಹೊಸ ಕಾರ್ಖಾನೆ ಆರಂಭಿಸಬೇಕೋ ಅಥವಾ ಇರುವ ಕಾರ್ಖಾನೆಗೆ ಹೊಸ ವ್ಯವಸ್ಥೆ ಕಲ್ಪಿಸಬೇಕೋ ಎಂಬ ಕುರಿತು ತಾಂತ್ರಿಕ ಸಮಿತಿ ಮುಂದೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಮೈಷುಗರ್ ಕಬ್ಬು ಅರೆಯುವ ಸಾಮರ್ಥ್ಯವನ್ನು10  ಸಾವಿರ ಟಿಸಿಡಿ ಏರಿಸುವುದು ನಮ್ಮ ಮುಂದಿರುವ ಆಯ್ಕೆ. ಇದನ್ನು ಮಾಡಿದರೆ ಅಷ್ಟು ಪ್ರಮಾಣದ ಕಬ್ಬನ್ನು ಎಲ್ಲಿಂದ ತರುವುದು? ಕಾರ್ಖಾನೆ ವ್ಯಾಪ್ತಿಯಲ್ಲಿ ಬೆಳೆ ಪ್ರಮಾಣ ಎಷ್ಟಿದೆ? ಎಂದು ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಈಗಿರುವ 5 ಸಾವಿರ ಟಿಸಿಡಿ ಸಂಪೂರ್ಣವಾಗಿ ನಡೆದು ಅಲ್ಲಿ ಎಥೆನಾಲ್ ಘಟಕ ಸೇರಿದಂತೆ ಎಲ್ಲವೂ ಕಾರ್ಯಾರಂಭವಾಗಿ ಸಂಸ್ಥೆ ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕು. ನಾವು ದೊಡ್ಡ ಕಾರ್ಖಾನೆ ಮಾಡುವುದು ದೊಡ್ಡದಲ್ಲ. ಅದಕ್ಕೆ ತಕ್ಕಂತೆ ರೈತರು ಕಬ್ಬು ಬೆಳೆಯಲು ಉತ್ತೇಜನ ನೀಡಬೇಕು ಎಂದು ತಿಳಿಸಿದರು.

ನಮಗಿರುವ ವರದಿ ಪ್ರಕಾರ ಅಕಾಲಿಕ ಮಳೆಯಿಂದಾಗಿ ರೈತರು ಕಬ್ಬು ಬೆಳೆಯುವುದನ್ನು ಬಿಟ್ಟು ಬೇರೆ ಬೆಳೆ ಬೆಳೆಯಲು ಮುಂದಾಗುತ್ತಿದ್ದಾರೆ. ೨ ಸಾವಿರ ರೈತರು ಕಬ್ಬು ಬೆಳೆಗೆ ಮುಂದಾಗಿದ್ದಾರೆ. ಇದಕ್ಕೆ ಏನು ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಜಿಲ್ಲೆಯಲ್ಲಿ ಈ ಕಾರ್ಖಾನೆ ಜತೆಗೆ ಇನ್ನು ಐದಾರು ಕಾರ್ಖಾನೆಗಳಿವೆ. ಎಲ್ಲವೂ ಸುಸ್ಥಿರವಾಗಿರಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.

5 ಸಾವಿರ ಟಿಸಿಡಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಬೇಕಾಗಿರುವ ಅಗತ್ಯ ಕ್ರಮ ಕೈಗೊಳ್ಳಿ ಎಂದು ತಾಂತ್ರಿಕ ಸಮಿತಿ ತಿಳಿಸಿದೆ. ಹೀಗಾಗಿ ಈಗ ಇರುವ ಘಟಕ ಆರ್ಥಿಕವಾಗಿ ಗಟ್ಟಿಯಾಗುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ರೈತರಿಗೆ ಬೆಳೆಗೆ ತಕ್ಕ ಬೆಲೆ ಸಿಗುವಂತಾಗಬೇಕು. ರೈತರು ನಿರಂತರವಾಗಿ ಕಬ್ಬು ಬೆಳೆಯುವಂತೆ ಮಾಡಬೇಕು. ಮಧ್ಯೆ ಬರಗಾಲ ಬಂದು ಬೆಳೆ ನಿಲ್ಲುವಂತೆ ಆಗಬಾರದು ತಿಳಿಸಿದರು.

ಕೆರೆಗಳನ್ನು ತುಂಬಿಸಲು ಸೂಚನೆ:

ಕಾವೇರಿ ನೀರು ಹರಿಬಿಡುವ ವಿಚಾರವಾಗಿ, ಈಗ ನಾವು ಬಿಳಿಗುಂಡ್ಲುವಿಗೆ 50 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ 96  ಟಿಎಂಸಿ ಹೆಚ್ಚುವರಿಯಾಗಿ ನೀರು ಹರಿಸಿದ್ದೇವೆ. ತಮಿಳುನಾಡು ಪಾಲಿನ 177  ಟಿಎಂಸಿ ನೀರಿನ ಪೈಕಿ ಈಗಾಗಲೇ 149  ಟಿಎಂಸಿ ನೀರನ್ನು ಹರಿಸಲಾಗಿದೆ. ಈಗ ನಮ್ಮ ಭಾಗದಲ್ಲಿ ಎಲ್ಲೆಲ್ಲಿ ಕೆರೆಗಳನ್ನು ತುಂಬಿಸಲು ಸಾಧ್ಯವೋ ಎಲ್ಲಾ ಕೆರೆ ತುಂಬಿಸಲು ಸೂಚನೆ ನೀಡಲಾಗಿದೆ. ಕೆರೆ ತುಂಬಿಸಲು ಇರುವ ಅಡಚಣೆ ನಿವಾರಣೆಗೂ ಸೂಚನೆ ನೀಡಿದ್ದೇನೆ. ನಮ್ಮ ರೈತರು ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಸಲಹೆಯಂತೆ ಬೆಳೆಗಳನ್ನು ಹಾಕಬೇಕು ಎಂದು ರೈತರಲ್ಲಿ ಮನವಿ ಮಾಡುತ್ತೇನೆ ತಿಳಿಸಿದರು.

ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ದಿನೇಶ್ ಗೂಳಿಗೌಡ, ಕೆ.ಎಂ.ಉದಯ್, ಜಿಲ್ಲಾಧಿಕಾರಿ ಕುಮಾರ , ಮುಖಂಡ ಸ್ಟಾರ್ ಚಂದ್ರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
ಪರೀಕ್ಷಾ ಭಯ ಹೋಗಲಾಡಿಸುವ ಪ್ರೇರಣಾ ಶಿಬಿರ