ದೊಡ್ಡಮ್ಮ- ಜಲದುರ್ಗಮ್ಮ ಸಮುದಾಯ ಭವನ ನಿರ್ಮಾಣ ಸಲ್ಲದು

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ದೇವರ ಕೆಂಡದಾರ್ಚನೆಗೆ ಈ ಹಿಂದೆ ನಗರಸಭೆಯಿಂದ 88X51 ಅಡಿಯ ನಿವೇಶನ ನೀಡಿತ್ತು. ಇದು ಅಂತರಘಟ್ಟಮ್ಮ- ದೊಡ್ಡಮ್ಮ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂದು ನಗರಸಭೆ ದಾಖಲೆಯಲ್ಲಿ ನಮೂದಿಸಲಾಗಿದೆ. ಈ ಜಾಗದಲ್ಲಿ ಈಗ ಅಂತರಘಟ್ಟಮ್ಮ ದೇವಸ್ಥಾನ ಸೇವಾ ಸಮಿತಿಯ ಗಮನಕ್ಕೆ ಬಾರದಂತೆ ಅಕ್ರಮವಾಗಿ ಪಾಲಿಕೆಯಲ್ಲಿ ಈ ಸ್ವತ್ತಿನ ದಾಖಲೆಗಳನ್ನು ತಿರುಚಿ, ಅಂತರಘಟ್ಟಮ್ಮ ಹೆಸರು ಕೈ ಬಿಟ್ಟು ದೊಡ್ಡಮ್ಮ-ಜಲದುರ್ಗಮ್ಮ ದೇವಸ್ಥಾನ ಸಮುದಾಯ ಭವನ ನಿರ್ಮಿಸಲು ಹೊರಟ್ಟಿದ್ದಾರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸ್ವತ್ತಿನ ದಾಖಲೆಗಳನ್ನು ತಿರುಚಿ, ನಗರದ ಹೊಸಮನೆ ಬಡಾವಣೆಯಲ್ಲಿ ದೊಡ್ಡಮ್ಮ-ಜಲದುರ್ಗಮ್ಮ ದೇವಸ್ಥಾನ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ. ಇದಕ್ಕೆ ಪಾಲಿಕೆಯಿಂದ ಯಾವುದೇ ಕಾರಣಕ್ಕೂ ಪರವಾನಿಗೆ ನೀಡಬಾರದು ಎಂದು ಅಂತರಘಟ್ಟಮ್ಮ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಎನ್‌.ಮಂಜುನಾಥ್‌ ಒತ್ತಾಯಿಸಿದರು.

ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಹೊಸಮನೆ ಬಡಾವಣೆಯಲ್ಲಿ ಸ್ವಾತಂತ್ರ್ಯಪೂರ್ವದಲ್ಲೇ ಎಲ್ಲ ಸಮುದಾಯಕ್ಕೆ ಸೇರಿದ ಗ್ರಾಮ ದೇವತೆಯಾದ ಶ್ರೀ ಅಂತರಘಟ್ಟಮ್ಮ ದೇವಸ್ಥಾನ ನಿರ್ಮಿಸಿದ್ದಾರೆ. ಈ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವೂ ಇದೆ. ಸ್ವಾತಂತ್ರ್ಯಾನಂತರ ಶ್ರೀ ದೊಡ್ಡಮ್ಮ- ಜಲದುರ್ಗಮ್ಮ ದೇವಸ್ಥಾನವನ್ನು ಒಂದು ಸಮುದಾಯದಿಂದ ನಿರ್ಮಿಸಲಾಗಿದೆ. ಈ ಎರಡು ದೇವಸ್ಥಾನ ಹಿಂದೆ ಮುಂದೆ ಇದ್ದು, ಈ ದೇವರ ಕೆಂಡದಾರ್ಚನೆಗೆ ಈ ಹಿಂದೆ ನಗರಸಭೆಯಿಂದ 88X51 ಅಡಿಯ ನಿವೇಶನ ನೀಡಿತ್ತು. ಇದು ಅಂತರಘಟ್ಟಮ್ಮ- ದೊಡ್ಡಮ್ಮ ದೇವಸ್ಥಾನಕ್ಕೆ ಸೇರಿದ್ದಾಗಿದೆ ಎಂದು ನಗರಸಭೆ ದಾಖಲೆಯಲ್ಲಿ ನಮೂದಿಸಲಾಗಿದೆ. ಈ ಜಾಗದಲ್ಲಿ ಈಗ ಅಂತರಘಟ್ಟಮ್ಮ ದೇವಸ್ಥಾನ ಸೇವಾ ಸಮಿತಿಯ ಗಮನಕ್ಕೆ ಬಾರದಂತೆ ಅಕ್ರಮವಾಗಿ ಪಾಲಿಕೆಯಲ್ಲಿ ಈ ಸ್ವತ್ತಿನ ದಾಖಲೆಗಳನ್ನು ತಿರುಚಿ, ಅಂತರಘಟ್ಟಮ್ಮ ಹೆಸರು ಕೈ ಬಿಟ್ಟು ದೊಡ್ಡಮ್ಮ-ಜಲದುರ್ಗಮ್ಮ ದೇವಸ್ಥಾನ ಸಮುದಾಯ ಭವನ ನಿರ್ಮಿಸಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.

ಈ ಜಾಗದಲ್ಲಿ ಒಂದು ವರ್ಷ ಶ್ರೀ ಅಂತರಘಟ್ಟಮ್ಮ ದೇವರ ಕೆಂಡದಾರ್ಚನೆ, ಇನ್ನೊಂದು ವರ್ಷ ಶ್ರೀ ದೊಡ್ಡಮ್ಮ-ಜಲದುರ್ಗಮ್ಮ ದೇವರ ಕೆಂಡದಾರ್ಚನೆ ನೂರಾರು ವರ್ಷದಿಂದ ನಿರಂತರವಾಗಿ ನಡೆದುಬಂದಿದೆ. ಈ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಿದರೆ ಕೆಂಡದಾರ್ಚನೆ ಮಹೋತ್ಸವಕ್ಕೆ ಧಕ್ಕೆ ಉಂಟಾಗುತ್ತದೆ. ಈ ಹಿಂದೆ ದೊಡ್ಡಮ್ಮ- ಜಲದುರ್ಗಮ್ಮ ದೇವಸ್ಥಾನ ಸಮಿತಿಯ ಎನ್‌.ಉಮಾಪತಿ ಅವರು 1973ರಲ್ಲಿ ತಯಾರಿಸಿರುವ ಡಿ ನಿವೇಶನದ ನಕ್ಷೆಯಲ್ಲಿ ಉತ್ತರ-ದಕ್ಷಿಣ 84, ಅಡಿ, ಪೂರ್ವ, ಪಶ್ಚಿಮ 60 ಅಡಿ ಎಂದಿದೆ. ಇದೀಗ ನಗರ ಪಾಲಿಕೆಗೆ ಕಟ್ಟಡ ಪರವಾನಿಗಾಗಿ ಸಲ್ಲಿಸಿರುವ ನಕ್ಷೆಯಲ್ಲಿ ಉತ್ತರ- ದಕ್ಷಿಣ 60 ಅಡಿ, ಪೂರ್ವ-ಪಶ್ಚಿಮ 84 ಅಡಿ ಎಂದು ನಕ್ಷೆ ತಯಾರಿಸಿದ್ದಾರೆ. ಇನ್ನು ಪಾಳಿಕೆಯಿಂದ ಸಾರ್ವಜನಿಕ ಪ್ರಕಟಣೆಯಲ್ಲಿ 79X60 ಅಡಿ ಎಂದು ಪ್ರಕಟಿಸಲಾಗಿದೆ. ಹೀಗೆ ಅವರೇ ನೀಡಿರುವ ನಕ್ಷೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ ಎಂದು ಆಪಾದಿಸಿದರು.

ಈಗ ಸಮುದಾಯ ಭವನ ನಿರ್ಮಿಸಲು ಹೊರಟಿರುವ ಜಾಗದ ಸುತ್ತ ಜನವಸತಿ ಇರುವ ಮನೆಗಳಿಗೆ ತಾಗಿಕೊಂಡಿರುವ ಜಾಗವಿದೆ. ಇದರಿಂದ ನಿರಂತರ ಶಬ್ದ ಮಾಲಿನ್ಯ ಉಂಟಾಗಿ, ಅಕ್ಕಪಕ್ಕ ವಾಸಿಸುವ ಜನರು, ಮಕ್ಕಳ ವಿದ್ಯಾಭ್ಯಾಸ, ನೆಮ್ಮದಿ ಮತ್ತು ಶಾಂತಿಗೆ ಭಂಗವಾಗುತ್ತದೆ ಎಂದರು.

ಲೋಕಾಯುಕ್ತಕ್ಕೆ ದೂರು:

ಪಾಲಿಕೆಯವರು ಇಲ್ಲಿನ ಜನರಿಗೆ ಈ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಹೀಗಾಗಿ ಎ, ಬಿ, ಸಿ, ಡಿ ನಿವೇಶನದ ಸೇಲ್ ಡೀಡ್ ಸೈಟ್‌ ಅನ್ನು, ಅಳತೆ ಮತ್ತು ಚಕ್ಕುಬಂದಿಯನ್ನು ಪುನರ್ ಸರ್ವೇ ಮಾಡಿಸಬೇಕು. ಅಂತರಘಟ್ಟಮ್ಮ- ದೊಡ್ಡಮ್ಮ ದೇವಸ್ಥಾನಕ್ಕೆ ಸೇರಿದ ನಿವೇಶನದ ಹೆಸರಿನಲ್ಲಿ ಅಂತರಘಟ್ಟಮ್ಮ ಹೆಸರು ಕೈಬಿಟ್ಟು ದೊಡ್ಡಮ್ಮ- ಜಲದುರ್ಗಮ್ಮ ಎಂದು ದಾಖಲೆ ತಿರುಚಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕೆಂದು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಮುಖಂಡರಾದ ಎನ್. ರಮೇಶ್‍ಬಾಬು, ಶಿವಮೂರ್ತಿ, ಕೆ.ಶ್ರೀನಿವಾಸ, ಕೆ.ಪಕೀರಪ್ಪ ಮತ್ತಿತರರು ಇದ್ದರು.

- - - -17ಎಸ್‌ಎಂಜಿಕೆಪಿ01:

ಶಿವಮೊಗ್ಗ ಪ್ರೆಸ್‌ ಟ್ರಸ್ಟ್‌ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಂತರಘಟ್ಟಮ್ಮ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಎನ್‌.ಮಂಜುನಾಥ್‌ ಮಾತನಾಡಿದರು.

Share this article