ಸರ್ಕಾರ ಮೀನುಗಾರ ಬಂಧುಗಳ ಜೊತೆಗಿದೆ: ಲಕ್ಷ್ಮೀ ಹೆಬ್ಬಾಳ್ಕರ್ ಅಭಯ

KannadaprabhaNewsNetwork |  
Published : Nov 18, 2023, 01:00 AM IST
ಕುಂದಾಪುರ ಸಮೀಪದ ಗಂಗೊಳ್ಳಿಯ ಅಗ್ನಿ ಅವಘಡದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾನಿಯ ಪರಿಶೀಲನೆ ನಡೆಸಿದರು.  | Kannada Prabha

ಸಾರಾಂಶ

ದುರಂತದಲ್ಲಿ ಸಂಕಷ್ಟಕ್ಕೆ ಒಳಗಾದವರು ಹಾಗೂ ಮೀನುಗಾರಿಕಾ ಸಂಘಟನೆಯ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶೀಘ್ರವೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಕುರಿತು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಕುಂದಾಪುರಗಂಗೊಳ್ಳಿಯ ಮ್ಯಾಂಗನೀಸ್ ವಾರ್ಫ್‍ನಲ್ಲಿ ನಡೆದ ಅಗ್ನಿ ಅವಘಡ ಪ್ರದೇಶಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ದುರಂತದಲ್ಲಿ ಸಂಕಷ್ಟಕ್ಕೆ ಒಳಗಾದವರು ಹಾಗೂ ಮೀನುಗಾರಿಕಾ ಸಂಘಟನೆಯ ಪ್ರಮುಖರೊಂದಿಗೆ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸಿ ಅವರ ಅಹವಾಲುಗಳನ್ನು ಸ್ವೀಕರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶೀಘ್ರವೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಕುರಿತು ಭರವಸೆ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು, ಈ ದುರಂತದಲ್ಲಿ 9 ಪರ್ಸಿನ್ ಬೋಟ್, 5 ಸಣ್ಣ ದೋಣಿಗಳು, 8 ಮೀನುಗಾರಿಕಾ ಬಲೆಗಳು ಸುಟ್ಟು ಕರಕಲಾಗಿವೆ ಎನ್ನುವ ಪ್ರಾಥಮಿಕ ಮಾಹಿತಿ ಇದೆ. ಈ ಘಟನೆಯಿಂದ ನಮ್ಮ ಸಹೋದರ ಮೀನುಗಾರ ಬಂಧುಗಳು ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂದಾಜು 13-15 ಕೋಟಿ ರು.ಗಳ ವರೆಗೆ ನಷ್ಟ ಉಂಟಾಗಿದೆ ಎನ್ನುವ ಲೆಕ್ಕಾಚಾರಗಳು ಇದೆ. ದುರಂತ ಸಂಭವಿಸಿದ ತಕ್ಷಣವೇ ಇಲ್ಲಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸರ್ಕಾರದ ಪ್ರಮುಖರಿಗೆ ಮಾಹಿತಿಯನ್ನು ನೀಡಿದ್ದ ಕಾರಣದಿಂದ ಅದೇ ದಿನ ರಾಜ್ಯ ಮೀನುಗಾರಿಕಾ ಸಚಿವರು ಇಲ್ಲಿಗೆ ಬಂದು ಪರಿವೀಕ್ಷಣೆ ನಡೆಸಿ, ಸಂತ್ರಸ್ತರಿಂದ ಅಹವಾಲು ಸ್ವೀಕರಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ನನ್ನನ್ನು ಭೇಟಿ ಮಾಡಿರುವ ಮಾಜಿ ಶಾಸಕರು ಸಂತ್ರಸ್ತರಿಗೆ ಪರಿಹಾರ ನೀಡುವ ಹಾಗೂ ಸ್ಥಳೀಯ ಮೀನುಗಾರರ ಬೇಡಿಕೆಗಳಿಗೆ ಸ್ಪಂದಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಖಂಡಿತವಾಗಿಯೂ ಮೀನುಗಾರ ಬಂಧುಗಳ ಜೊತೆ ನಿಲ್ಲಲಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಈ ದುರಂತದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತೇವೆ ಎಂದರು. ಬೆಂಕಿಯಲ್ಲಿ ಸುಟ್ಟು ಕರಕಲಾದ ಒಂದು-ಒಂದೂವರೆ ಕೋಟಿ ರು. ಮೌಲ್ಯದ ಮೀನುಗಾರಿಕಾ ಬೋಟ್ ಗಳಿಗೆ ವಿಮಾ ಪರಿಹಾರವಿದ್ದರೂ ಅದು ದೊರಕಿ, ಪುನಃ ಜೀವನವನ್ನು ಕಟ್ಟಿಕೊಳ್ಳಲು ಸಮಯ ತಗಲುವುದರಿಂದ, ಎರಡು-ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತುರ್ತು ಪರಿಹಾಕ್ಕೆ ಒತ್ತಾಯಿಸುತ್ತೇನೆ. ಈ ಪರಿಹಾರ ಕ್ರಮ ತೆಗೆದುಕೊಳ್ಳಲು ಕನಿಷ್ಠ 15 ದಿನವಾದರೂ ಬೇಕಾಗಬಹುದು ಎಂದರು.

ಈ ರೀತಿಯ ದುರಂತಗಳು ನಡೆದಿರುವುದು ಬಹಳ ವಿರಳ. ಬೆಂಕಿ ಯಾವುದಕ್ಕೆ ಹೊತ್ತಿಕೊಂಡಿದೆ ಎನ್ನುವುದು ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ. ಇಂತಹ ದುರಂತಗಳು ಮರುಕಳಿಸದಂತೆ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸರ್ಕಾರ ಎಚ್ಚರಿಕೆ ವಹಿಸಲಿದೆ. ಬಂದರು ಪ್ರದೇಶದಲ್ಲಿ ಪಂಪ್‍ಹೌಸ್, ಅಗ್ನಿಶಾಮಕ ದಳದ ಘಟಕ ಸ್ಥಾಪನೆಯ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಗಂಭೀರ ಚಿಂತನೆ ನಡೆಸಲಾಗುವುದು ಎಂದರು. ಸ್ಥಳೀಯರ ಆಕ್ರೋಶ:ದುರಂತ ಘಟಿಸಿದ ಸ್ಥಳದಲ್ಲಿ ಕಸ-ಕಡ್ಡಿ, ಕೊಳಚೆ ತ್ಯಾಜ್ಯ, ನಿರುಪಯುಕ್ತ ದೋಣಿಯ ಭಾಗಗಳನ್ನು ಕೂಡಲೇ ವಿಲೇವಾರಿ ಮಾಡದೇ ಇರುವುದರಿಂದ ಹಾಗೂ ರಾಸಾಯನಿಕ ಮಿಶ್ರಿತ ಯಾಂತ್ರೀಕೃತ ದೋಣಿಗಳ ನಿರ್ಮಾಣ ಮಾಡುವುದರಿಂದ ಇಲ್ಲಿನ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿ ಸ್ಥಳೀಯರ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತಿರುವುದರಿಂದ ಇಲ್ಲಿ ಈ ಎಲ್ಲಾ ಚಟುವಟಿಕೆಗಳನ್ನು ಕೂಡಲೇ ನಿರ್ಬಂಧಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ತಾಜ್ಯ ಸಂಗ್ರಹವೇ ಪರೋಕ್ಷ ಕಾರಣ!:ಅಗ್ನಿ ಅವಘಡ ಸ್ಥಳವನ್ನು ವೀಕ್ಷಣೆ ಮಾಡಿ ತಮ್ಮ ವಾಹನಕ್ಕೆ ಹಿಂದಿರುಗುತ್ತಿದ್ದ ಸಚಿವರನ್ನು ಸುತ್ತುವರಿದ ಸ್ಥಳೀಯರು ರಾಸಾಯನಿಕಯುಕ್ತ ಯಾಂತ್ರೀಕೃತ ದೋಣಿಗಳ ನಿರ್ಮಾಣದಿಂದ ಇಲ್ಲಿನ ಪರಿಸರವೇ ಹಾಳಾಗಿ ಹೋಗಿದೆ. ಜನರು ನೆಮ್ಮದಿಯಿಂದ ಜೀವನ ಸಾಗಿಸುವುದೇ ದುಸ್ತರವಾಗಿದೆ. ಪರಿಸರ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ನಿತ್ಯ ನಿರಂತರವಾಗಿದ್ದು ನವೆಂಬರ್ 13 ರಂದು ಸಂಭವಿಸಿದ ಅಗ್ನಿ ದುರಂತಕ್ಕೆ ಇಲ್ಲಿ ವಿಲೇವಾರಿ ಮಾಡದೆ ಉಳಿದಿರುವ ತ್ಯಾಜ್ಯ ಸಂಗ್ರಹವೇ ಪರೋಕ್ಷವಾಗಿ ಕಾರಣವಾಗಿದ್ದು, ಜನಜೀವನಕ್ಕೆ ತೊಂದರೆಯಾಗುವ ಕಾರ್ಯ ಚಟುವಟಿಕೆಗಳನ್ನು ಕೂಡಲೇ ನಿರ್ಬಂಧಿಸುವಂತೆ ಒತ್ತಾಯಿಸಿದರು.

ಎಸ್ ಪಿ ಡಾ.ಅರುಣ್ ಕೆ, ಜಿ.ಪಂ ಸಿಇಒ ಪ್ರಸನ್ನ ಕುಮಾರ್, ಉಪವಿಭಾಗಾಧಿಕಾರಿ ಎಸ್.ಆರ್ ರಶ್ಮಿ, ಡಿವೈಎಸ್ ಪಿ, ಕೆ.ಯು ಬೆಳ್ಳಿಯಪ್ಪ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅರವಿಂದ ಪೂಜಾರಿ, ಪ್ರದೀಪ್‍ಶೆಟ್ಟಿ ಗುಡಿಬೆಟ್ಟು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ದೇವಾಡಿಗ, ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಸದಸ್ಯ ಬಿ.ರಾಘವೇಂದ್ರ ಪೈ, ಪ್ರಮುಖರಾದ ತಮ್ಮಯ್ಯ ದೇವಾಡಿಗ ಗುಜ್ಜಾಡಿ, ರಮೇಶ್ ಕಾಂಚನ್, ಮದನ್ ಕುಮಾರ್ ಉಪ್ಪುಂದ, ಪ್ರಶಾಂತ್ ಪೂಜಾರಿ ಕರ್ಕಿ, ಉದಯ್ ಕುಮಾರ್ ಶೆಟ್ಟಿ ವಂಡ್ಸೆ, ವಿಜಯ್ ಪುತ್ರನ್, ಸುಧೀಶ್ ಶೆಟ್ಟಿ ಗುಲ್ವಾಡಿ, ಹರೀಶ್ ತೋಳಾರ್ ಕೊಲ್ಲೂರು, ಮಂಜುನಾಥ್ ಪೂಜಾರಿ ಕಟ್ ಬೇಲ್ತೂರು, ಹರೀಶ್ ಮೇಸ್ತಾ, ಸುರೇಂದ್ರ ಖಾರ್ವಿ, ಇಸ್ಮಾಯಿಲ್ ಪರ್ಕಳ, ದುರ್ಗಾರಾಜ್ ಗಂಗೊಳ್ಳಿ, ಮೀನುಗಾರಿಕಾ ಸಂಘಟನೆಯ ರಮೇಶ್ ಕುಂದರ್ ಪಡುಕೆರೆ, ದಿನೇಶ್ ನಾಯ್ಕ್ ಕುಂದಾಪುರ, ಶ್ರೀಧರ ಮೇಸ್ತಾ, ಶೇಖರ್ ಕುಂದರ್ ಇದ್ದರು.ಕುಂದಾಪುರ-ಗಂಗೊಳ್ಳಿ ಸೇತುವೆಗೆ ಮರುಜೀವ!ಕುಂದಾಪುರದಿಂದ ಗಂಗೊಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಈ ಕುರಿತು ಈಗಾಗಲೇ ಸಚಿವ ಸತೀಶ್ ಜಾರಕಿಹೊಳೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಸೇತುವೆ ನಿರ್ಮಾಣಕ್ಕೆ ಅಂದಾಜು 270 ರಿಂದ 300 ಕೋಟಿ ರೂ. ಬೇಕಾಗಬಹುದು. ಇದಕ್ಕೆ ಅಂದಾಜು ಯೋಜನಾ ವೆಚ್ಚ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಿಆರ್‌ಎಫ್ ಅಥವಾ ಬೇರೆ ಯಾವುದಾದರೂ ವಿಶೇಷ ಯೋಜನೆಯಡಿಯಲ್ಲಿ ಆದ್ಯತೆಯ ಮೇಲೆ ಪರಿಗಣಿಸುವುದಾಗಿ ಸಚಿವರು ಭರವಸೆಯನ್ನು ನೀಡಿದ್ದಾರೆ. ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ ಕೂಡಲೇ ಉಸ್ತುವಾರಿ ಸಚಿವರೊಂದಿಗೆ ಸಚಿವ ಜಾರಕಿಹೊಳೆಯವರನ್ನು ಭೇಟಿಯಾಗಿ ಯೋಜನೆಗೆ ಅನುಮೋಧನೆ ನೀಡಲು ಕೋರಿಕೊಳ್ಳುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಿಸಲು ಜನ ತೀರ್ಮಾನ
ಎರಡನೇ ದಿನವೂ ಸಿಎಂ ಬಿರುಸಿನ ಪ್ರಚಾರ