ಕನ್ನಡಪ್ರಭ ವಾರ್ತೆ ಸಿರಿಗೆರೆ
ಭರಮಸಾಗರದಲ್ಲಿ 2.18 ಕೋಟಿ ರೂ.ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ಸಲ್ಲಿಸಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.
ಸಾಮಾನ್ಯವಾಗಿ ಹೋಬಳಿ ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ನಿರ್ಮಾಣ ಮಾಡುವುದಿಲ್ಲ. ಆದರೂ ಅಧಿಕಾರಿಗಳ ಮೇಲೆ ಭರಮಸಾಗರ ಹೋಬಳಿ ಜನರ ಹಿತಾಸಕ್ತಿಯನ್ನು ವಿವರಿಸಿ ಇಲ್ಲಿಗೆ ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡಿಸಲಾಗಿದೆ. ಇದು ಕಾರ್ಯಗತಗೊಳ್ಳಲು 2.18 ಕೋಟಿ ರು. ವೆಚ್ಚವಾಗಲಿದೆ ಎಂದರು.ಭರಮಸಾಗರ ಹೋಬಳಿಯನ್ನು ಕೇಂದ್ರವಾಗಿಟ್ಟುಕೊಂಡು ಸುತ್ತಲ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಲು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಭರಮಸಾಗರ ನನಗೆ ರಾಜಕೀಯ ಶಕ್ತಿ ತಂದುಕೊಟ್ಟ ಕ್ಷೇತ್ರ. ನಾನು ಮೊಟ್ಟಮೊದಲು ಭರಮಸಾಗರ ಕ್ಷೇತ್ರದಿಂದ ಸ್ಪರ್ಧಿಸಿ ಊರೂರು ಅಲೆದಾಗ ಈ ಕ್ಷೇತ್ರದ ಪರಿಸ್ಥಿತಿ ಕಂಡು ಗಾಬರಿಗೊಂಡಿದ್ದೆ. ಕ್ಷೇತ್ರದ ಯಾವುದೇ ಗ್ರಾಮೀಣ ಪ್ರದೇಶಗಳಿಗೆ ರಸ್ತೆಗಳೇ ಇದ್ದಿಲ್ಲ. ಆಗ ಪರಿಸ್ಥಿತಿ ಭಿನ್ನವಾಗಿದೆ. ಎಲ್ಲಾ ಗ್ರಾಮಗಳ ಅಭಿವೃದ್ದಿಯೂ ಆಗಿದೆ ಎಂದರು.
ಭರಮಸಾಗರ ಹೋಬಳಿ ಕೇಂದ್ರದಲ್ಲಿ ಐಟಿಐ ಕಾಲೇಜು ಆರಂಭ ಮಾಡಿಸಿದ್ದು ನನ್ನ ವಿಶೇಷ. ಐಟಿಐ ಆರಂಭಗೊಂಡಿದ್ದರಿಂದ ತಾಂತ್ರಿಕ ಶಿಕ್ಷಣಕ್ಕೆ ದೂರದ ನಗರ ಪ್ರದೇಶಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಮುಂದಿನ ವರ್ಷ ಸರ್ಕಾರದಿಂದ ಪಿಯು ಕಾಲೇಜು ಆರಂಭಿಸುವ ಉದ್ದೇಶವೂ ಇದೆ ಎಂದರು.
ಕೋಗುಂಡೆ, ಹುಲ್ಲೇಹಾಳ್‍ನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿಸಿದ್ದೇನೆ. ಎಲ್.ಕೆ.ಜಿ.ಯಿಂದ ಹಿಡಿದು ಪಿ.ಯು.ಸಿ.ವರೆಗೆ ಮಕ್ಕಳು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ನುರಿತ ಶಿಕ್ಷಕರುಗಳನ್ನು ನೇಮಕ ಮಾಡಲಾಗಿದೆ. ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ, ಬಾಳೆಹಣ್ಣು, ಪೌಷ್ಟಿಕಾಂಶವುಳ್ಳ ಕಾಳುಗಳು, ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ನೀಡಿ ಸಂಜೆ ಮಕ್ಕಳನ್ನು ಅವರವರ ಮನೆಗೆ ಸುರಕ್ಷಿತವಾಗಿ ತಲುಪಿಸಲು ಉಚಿತ ಬಸ್‍ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು ಐದಾರು ತಿಂಗಳಲ್ಲಿ ಅಗ್ನಿಶಾಮಕ ಠಾಣೆ ಕಟ್ಟಡವನ್ನು ಪೂರ್ಣಗೊಳಿಸಲಾಗುವುದೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.