ಕನ್ನಡಪ್ರಭ ವಾರ್ತೆ ಗೌರಿಬಿದನೂರು
ನಗರದ ಮೂಲಕ ಹಾದು ಹೋಗುವ ಬೈರೇನಹಳ್ಳಿ-ಅಂಕನಹಳ್ಳೀ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಎರಡೂ ಕಡೆಗಳಲ್ಲಿ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಈ ಚರಂಡಿಗಳನ್ನು ನಿರ್ಮಾಣ ಮಾಡುವ ಸ್ಥಳದಲ್ಲಿ ವಿದ್ಯುತ್ ಕಂಬಗಳಿವೆ. ಅವುಗಳನ್ನು ತೆರವುಗೊಳಿಸದೆ ಚರಂಡಿಯ ಮಧ್ಯಭಾಗದಲ್ಲಿ ವಿದ್ಯುತ್ ಕಂಬಗಳನ್ನು ಉಳಿಸಿಕೊಂಡು ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಮುಂದೆ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಂತಿಲ್ಲ.
ಮರಗಳ ತೆರವು ಸುಲಭ!ರಾಷ್ಚೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಸರಿಸುಮಾರು 352 ಬೃಹತ್ ಮರಗಳನ್ನು ಬಲಿ ಪಡೆದ ಹೆದ್ದಾರಿ ಪ್ರಾಧಿಕಾರ ಕೇವಲ ಬೆರಳೆಣಿಕೆಯಷ್ಟು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ಕಾಲುವೆ ನಡುವೆ ವಿದ್ಯುತ್ ಕಂಬಗಳನ್ನು ಉಳಿಸಿಕೊಳ್ಳಲಾಗಿದೆ.
ಮುಂದೊಂದು ದಿನ ಕಂಬಗಳನ್ನು ಸ್ಥಳಾಂತರಿಸಬೇಕಾದಾಗ ಚರಂಡಿಯನ್ನು ಒಡೆದು ಕಂಬಗಳನ್ನು ಹೊರತೆಗೆಯ ಬೇಕಾಗುತ್ತದೆ. ಇಲ್ಲವೇ ಕಂಬಗಳನ್ನು ಚರಂಡಿಯ ತಳ ಮಟ್ಟಕ್ಕೆ ಕತ್ತರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಕಂಬಗಳು ನಿರುಪಯೋಗವಾಗಲಿವೆ. ಇದರಿಂದ ಕಾಮಗಾರಿಗೆ ಖರ್ಚು ಮಾಡಿದ ಜನರ ತೆರಿಗೆ ಹಣ ಪೋಲಾಗಲಿದೆ.ಈ ಅಂಶಗಳನ್ನು ಎರಡೂ ಇಲಾಖೆಗಳು ಗಂಭೀರವಾಗಿ ಪರಿಗಣಿಸಿ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಹೊಂದಾಣಿಕೆಯಿಂದ ಕೆಲಸ ಮಾಡಬೇಕೆಂದು ನಗರಸಭೆಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರೂಪ ಅನಂತರಾಜು ಒತ್ತಾಯಿಸಿದ್ದಾರೆ.