ಹಿರಿಯ ಯಕ್ಷಗಾನ ಕಲಾವಿದರು ಇಂದಿನ ಕಲಾವಿದರಿಗೆ ಪ್ರೇರಣೆಯಾಗಬೇಕು : ಡಾ.ತಲ್ಲೂರು

KannadaprabhaNewsNetwork |  
Published : Jul 22, 2024, 01:26 AM IST
ಹಂದಾಡಿ21 | Kannada Prabha

ಸಾರಾಂಶ

ಬ್ರಹ್ಮಾವರದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಚಾವಡಿಯಲ್ಲಿ ಅಜಪುರ ಯಕ್ಷಗಾನ ಸಂಘದ ವತಿಯಿಂದ ಹಂದಾಡಿ ಸುಬ್ಬಣ್ಣ ಭಟ್ಟರ ಸಂಸ್ಮರಣೆ ಮತ್ತು ದತ್ತಿನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನ ಕಲೆ ಇಂದು ಬದಲಾವಣೆಯ ಕಾಲಘಟ್ಟದಲ್ಲಿದೆ. ಆಧುನಿಕತೆಯಿಂದ, ಹೊಸ ಪ್ರಸಂಗಗಳ ಪ್ರದರ್ಶನದಿಂದ ಯಕ್ಷಗಾನ ಕಲೆಯ ಪರಂಪರೆಗೆ ಧಕ್ಕೆ ತರಬಾರದು. ಈ ನಿಟ್ಟಿನಲ್ಲಿ ಹಿರಿಯ ಯಕ್ಷಗಾನ ಕಲಾವಿದರು ಹೊಸ ಕಲಾವಿದರಿಗೆ ಮಾದರಿಯಾಗಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಅವರು ಶನಿವಾರ ಬ್ರಹ್ಮಾವರದ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಚಾವಡಿಯಲ್ಲಿ ಅಜಪುರ ಯಕ್ಷಗಾನ ಸಂಘದ ವತಿಯಿಂದ ನಡೆದ ಹಂದಾಡಿ ಸುಬ್ಬಣ್ಣ ಭಟ್ಟರ ಸಂಸ್ಮರಣೆ ಮತ್ತು ದತ್ತಿನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದಿನ ಹಿರಿಯ ಯಕ್ಷಗಾನ ಕಲಾವಿದರಲ್ಲಿ ಅನೇಕರು ಅನಕ್ಷರಸ್ಥರಾಗಿದ್ದರೂ, ತಮ್ಮ ಪಾಂಡಿತ್ಯ, ನಿರರ್ಗಳ ಮಾತುಗಳಿಂದ ಮಹಾನ್ ಕಲಾವಿದರುಗಳಾಗಿ ರಾಷ್ಟ್ರ ಪ್ರಶಸ್ತಿಗೂ ಭಾಜನರಾಗಿರುವುದನ್ನು ಕಂಡಿದ್ದೇವೆ. ಈಗಿನಂತೆ ಆಧುನಿಕತೆಯ ಸೋಂಕಿಲ್ಲದ ಆ ಕಾಲದಲ್ಲಿ ಯಕ್ಷಗಾನ ಕಲಾವಿದರು ಕಲೆಯ ಉಳಿವು ಬೆಳವಣಿಗೆಗೆ ಕಾರಣರಾದರು ಎಂಬುದನ್ನು ಇಂದಿನ ಯುವ ಕಲಾವಿದರು ಚಿಂತನೆ ನಡೆಸಬೇಕು ಎಂದವರು ಹೇಳಿದರು.

ಅಂದು ಕಲೆಯ ಮೇಲಿನ ಪ್ರೀತಿ, ಅದರ ಮೂಲಕವೇ ಬದುಕನ್ನು ಕಂಡುಕೊಂಡ ಹಿರಿಯ ಕಲಾವಿದರನೇಕರು ಯಕ್ಷಗಾನಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಆದರೆ ಇಂದು ಯಕ್ಷಗಾನ ಕವಲು ದಾರಿಯಲ್ಲಿದೆ. ಹಳೆಯ ಸಂಪ್ರದಾಯವನ್ನು ಬಿಡಲಾಗದೆ ಹೊಸತನದ ಆಕರ್ಷಣೆಯನ್ನು ಅಪ್ಪಿಕೊಳ್ಳಲಾಗದೆ ಕಲಾವಿದರು ತೊಳಲಾಟದಲ್ಲಿದ್ದಾರೆ. ಕಾಲಮಿತಿ ಯಕ್ಷಗಾನಗಳು ಜನಪ್ರಿಯತೆ ಪಡೆಯುತ್ತಿರುವ ಈ ಸಮಯದಲ್ಲಿ ಕಲಾವಿದರು ಕಲೆಯ ಚೌಕಟ್ಟಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಬೇಕು ಎಂದು ಡಾ.ತಲ್ಲೂರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಡಗುತ್ತಿಟ್ಟಿನ ಪರಂಪರೆಯ ಹಿರಿಯ ಯಕ್ಷಗಾನ ಕಲಾವಿದ ಬೇಲೂರು ರಮೇಶ್ ನಾಯ್ಕ್ ಅವರಿಗೆ ಹಂದಾಡಿ ಸುಬ್ಬಣ್ಣ ಭಟ್ಟ ದತ್ತಿನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷ ಎಂ.ಪದ್ಮನಾಭ ಗಾಣಿಗ ವಹಿಸಿದ್ದರು. ನಡೂರು ರಜತಾದ್ರಿ ಶ್ರೀವಾಣಿ ವಿದ್ಯಾಭಿವೃದ್ಧಿ ಸಂಘದ ಮಾರ್ಗದರ್ಶಕ ಪ್ರೊ. ಸಖಾರಾಮ ಸೋಮಯಾಜಿ ಸಂಸ್ಮರಣಾ ಭಾಷಣ ಮಾಡಿದರು. ಬ್ರಹ್ಮಾವರ ಪ್ರಣವ್ ಆಸ್ಪತ್ರೆಯ ಡಾ. ಪ್ರವೀಣ್ ಕುಮಾರ್, ಬಂಟಕಲ್ಲು ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕ ಡಾ.ಉದಯ ಪ್ರಸನ್ನ ಭಟ್ ಹಂದಾಡಿ ಉಪಸ್ಥಿತರಿದ್ದರು. ಸಂಘದ ಗೌರವಾಧ್ಯಕ್ಷ ಜೋಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ